10 ತಿಂಗಳಲ್ಲಿ 55 ಲೀಟರ್ ಎದೆಹಾಲು ದಾನ..!: ತಮಿಳುನಾಡಿನ ತಾಯಿಯೊಬ್ಬಳಿಂದ ಭವ್ಯ ಸಾಧನೆ..!:ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ ತಾಯ್ತನದ ಮಹಾನ್ ಸಾಧಕಿ..!

ತಮಿಳುನಾಡು: ತನ್ನ ಹೆಸರು ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅಚ್ಚೊತ್ತಬೇಕು ಎಂದು ಮಾಡಿರುವ ಸಾಧನೆ ಈಕೆಯದ್ದಲ್ಲ. ಅವಳ ತಾಯ್ತನದ ಭಾವನೆ ಆಕೆಯ ಹೆಸರನ್ನು ರೆಕಾರ್ಡ್ ಬುಕ್ ನಲ್ಲಿ ಬರೆಸಿದೆ. ಈ ದೇಶದಲ್ಲಿ ಅದೆಷ್ಟೋ ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಇನ್ನೂ ಅನೇಕ ಹಸುಗೂಸುಗಳು ತಾಯಿಯ ಎದೆ ಹಾಲು ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಈ ದೃಶ್ಯಗಳು ಹೆಚ್ಚಾಗಿ ಕಂಡುಬರುವುದು ಸರ್ಕಾರಿ ಆಸ್ಪತ್ರೆಗಳಲ್ಲಿ. ಇಂತಹ ಮಕ್ಕಳಿಗೆ ತಮಿಳುನಾಡು ಕೊಯಮತ್ತೂರಿನ ಸಿಂಧುಮೋನಿಕ ತನ್ನ ಎದೆಹಾಲು ದಾನ ಮಾಡಿ ಮಹಾತ್ಕಾರ್ಯ ಮಾಡಿದ್ದಾರೆ.

ಒಂದು ವರ್ಷದ ಮಗುವಿರುವ ಸಿಂಧು ಮೋನಿಕಾ ಪ್ರೊಫೆಸರ್. ಇವರು ಹಸುಗೂಸುಗಳಿಗೆ ಎದೆಹಾಲಿನ ಕೊರತೆಯ ಬಗ್ಗೆ ತಿಳಿದಿದ್ದರು. ಹೀಗಾಗಿ ಎದೆಹಾಲು ದಾನ ಮಾಡುವುದರ ಬಗ್ಗೆ ಅರಿತುಕೊಂಡರು. ಬಳಿಕ ಅಮೃತಂ ಎದೆಹಾಲು ದಾನ ಸಂಸ್ಥೆ ಸಂಪರ್ಕಿಸಿ ಸ್ತನ್ಯಾಮೃತವನ್ನು ನೀಡಲು ನಿರ್ಧರಿಸಿದರು. ಜೊತೆಗೆ ಎದೆಹಾಲನ್ನು ಹೇಗೆ ಸುರಕ್ಷಿತವಾಗಿಡೋದು ಎಂಬ ಬಗ್ಗೆ ಸಲಹೆ ಪಡೆದು ಕಳೆದ 10 ತಿಂಗಳಿಂದ 55 ಲೀಟರ್ ಎದೆಹಾಲನ್ನು ಸಂಗ್ರಹಿಸಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ನೀಡಿದ್ದಾರೆ.

ಈ ತಾಯಿಯ ಮಹಾನ್ ಕಾರ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಜೊತೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಿದೆ.


ಈಗಿನ ಕಾಲದಲ್ಲಿ ಅನೇಕ ಮಹಿಳೆಯರು ಸೌಂದರ್ಯದ ಕಾರಣಕ್ಕಾಗಿ ಮಕ್ಕಳಿಗೆ ಎದೆಹಾಲು ನೀಡುವುದಕ್ಕೆ ಹಿಂಜರಿಯುತ್ತಾರೆ. ಆದರೆ ಈ ಬಗ್ಗೆ ಸಿಂಧೂ ಅದ್ಭುತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಮಗುವನ್ನು ಹೊಂದಿರುವ ಪ್ರತಿಯೊಬ್ಬ ತಾಯಿಗೆ ಹಾಲುಣಿಸುವ ಬಗ್ಗೆ ಜಾಗೃತಿ ಬೇಕಿದೆ. ಅಲ್ಲದೇ ಅರ್ಹ ಮಹಿಳೆಯರು ಎದೆಹಾಲು ದಾನ ಮಾಡಲು ಮುಂದೆ ಬರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಎದೆಹಾಲು ಸಿಗದ ಎಷ್ಟೋ ಮಕ್ಕಳಿದ್ದಾರೆ. ಅವರಿಗೆ ತಾಯಂದಿರು ನೆರವಾಗಬೇಕು. ಸ್ತನ್ಯಪಾನದಿಂದ ಸೌಂದರ್ಯ ಹಾಳಾಗುತ್ತದೆ ಎಂಬುದು ತಪ್ಪು ಭಾವನೆ. ಸೌಂದರ್ಯಕ್ಕಿಂತ ಮಗುವಿನ ಕ್ಷೇಮವೇ ಮುಖ್ಯ’ ಎಂದಿದ್ದಾರೆ.

ಪ್ರತೀ ಮಗುವಿಗೆ ತಾಯಿಯ ಎದೆಹಾಲು ಸಂಜೀವಿನಿ. ಆದರೆ ಪೌಷ್ಟಿಕ ಆಹಾರದ ಕೊರತೆಯಿಂದಲೋ ಅಥವ ಹಾರ್ಮೋನ್ ಸಮಸ್ಯೆಯಿಂದಲೋ ಕೆಲವು ತಾಯಂದಿರಿಗೆ ಎದೆಹಾಲು ಕಡಿಮೆಯಾಗಿರುತ್ತದೆ. ಇದರಿಂದ ಹಸುಗೂಸುಗಳ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಹೀಗಾಗಿ ಎದೆಹಾಲಿನಿಂದ ವಂಚಿತವಾದ ಮಕ್ಕಳಿಗೆ ಸಿಂಧುಮೋನಿಕರಂತೆ ಸ್ತನ್ಯಾಮೃತವನ್ನು ದಾನ ಮಾಡಿದರೆ ಅದೆಷ್ಟೋ ಮಕ್ಕಳಿಗೆ ಸಂಜೀವಿನಿ ಸಿಕ್ಕಂತೆ ಆಗಬಹುದು.

error: Content is protected !!