ಹಿಜಾಬ್ ವಿವಾದ ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು..! ಮುಖ್ಯ ನ್ಯಾಯಮೂರ್ತಿಯವರ ಪೀಠದಿಂದ ಹೊರಬೀಳಲಿದೆ ಅಂತಿಮ ತೀರ್ಪು..!

 

 

ದೆಹಲಿ: ಕರ್ನಾಟಕದಾದ್ಯಂತ ಗಲಬೆ, ಕೋಲಾಹಲ ಸೃಷ್ಠಿಸಿದ ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರಿ ಕೊನೆಗೆ ಸುಪ್ರೀಂ ಕೋರ್ಟ್ ತಲುಪಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಅಂತಿಮ ತೀರ್ಪು ಮುಖ್ಯ ನ್ಯಾಯಮೂರ್ತಿಯವರ ಪೀಠದಿಂದ ಹೊರಬೀಳಲಿದೆ.

ಕರ್ನಾಟಕದ ಶಾಲಾ ಕಾಲೇಜುಗಳ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸಲಿದೆ. ಈಗಾಗಲೇ ಇಬ್ಬರು ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಹೊರಬಿದ್ದಿದೆ.

ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ಪೀಠ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರೊಂದಿಗೆ ಅಂತಿಮ ತೀರ್ಪು ಪ್ರಕಟಿಸಿ ಆದೇಶಿಸಿದೆ. ಸೆಪ್ಟೆಂಬರ್ 22 ರಂದು ಪ್ರಕರಣದ ಕೊನೆಯ ದಿನದ ವಿಚಾರಣೆ ನಡೆದು, ವಾದ – ಪ್ರತಿವಾದ ಪೂರ್ಣಗೊಂಡ ಬಳಿಕ ದ್ವಿಸದಸ್ಯ ಪೀಠ ತನ್ನ ತೀರ್ಪು ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ತಡೆ ಹಿಡಿಯುವಂತೆ ಕೋರಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಅವರು ಶಾಲೆಗೆ ತೆರಳದೇ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಶಾಲೆಯಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಫಿರ್ಯಾದುದಾರರ ಪರ ವಕೀಲರು ವಾದ ಮಂಡಿಸಿದ್ದರು. ಇದಲ್ಲದೇ ಈ ಬಿಕ್ಕಟ್ಟನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ವಾದಿಸಿದ್ದರು.

ಜೊತೆಗೆ ರಾಜ್ಯದ ಪರ ವಾದ ಮಂಡಿಸಿದ್ದ ವಕೀಲರು, ಹಿಜಾಬ್ ಧರಿಸುವುದರಿಂದ ಶಾಲಾ ಕಾಲೇಜುಗಳಲ್ಲಿ ಉಂಟಾಗುವ ಧಾರ್ಮಿಕ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಈ ಆದೇಶ ಹೊರಡಿಸಿತ್ತು. ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ತರುವ ದೃಷ್ಟಿಯಿಂದ ಸಮವಸ್ತ್ರ ಕಡ್ಡಾಯ ಮಾಡಿ, ಶಾಲಾ ಕಾಲೇಜುಗಳ ತರಗತಿಯೊಳಗೆ ಮಾತ್ರ ಹಿಜಾಬ್ ನಿಷೇಧಿಸಲಾಗಿದೆ ಎಂದು ವಾದ ಮಂಡಿಸಿದ್ದರು. ಇಬ್ಬರು ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಬಂದಿರುವ ಕಾರಣ ಕೇಸ್ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಯಾಗಿದ್ದು, ಮುಖ್ಯ ನ್ಯಾಯಮೂರ್ತಿಯವರ ಪೀಠದಿಂದ ಅಂತಿಮ ತೀರ್ಪು ಇನ್ನಷ್ಟೇ ಹೊರಬೀಳಲಿದೆ.

error: Content is protected !!