ಕಾರು ಮತ್ತು ಬೈಕ್​ ಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಚಿನ್ನಿ ರಮೇಶ್​ ದೋಷಮುಕ್ತ: ಬೆಳ್ತಂಗಡಿಯ ಕುತ್ಲೂರಿನಲ್ಲಿ ನಡೆದಿದ್ದ ಘಟನೆ:

 

 

 

ಬೆಳ್ತಂಗಡಿ : ನಸುಕಿನ ವೇಳೆ ಮನೆಯೊಂದರ ಬಾಗಿಲು ಬಡಿದು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮನೆಯ ಹೊರಗೆ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಗೆ ಬೆಂಕಿ ಹಚ್ಚಿ ಲಕ್ಷಾಂತರ ರೂ‌. ನಷ್ಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾವೋವಾದಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಆರೋಪ ಇರುವ ಚಿನ್ನಿ ರಮೇಶ್ ನನ್ನು ದೋಷಮುಕ್ತಗೊಳಿಸಿ ಮಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

 

 

 

 

2013ರ ನವೆಂಬರ್ 9ರಂದು ನಸುಕಿನ ವೇಳೆ 2 ಗಂಟೆಗೆ ಬೆಳ್ತಂಗಡಿಯ ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ನಲ್ಲಿರುವ ರಾಮಚಂದ್ರ ಭಟ್ ಎಂಬವರ ಮನೆಗೆ ಮಾವೋವಾದಿ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಚಿನ್ನಿ ರಮೇಶ್ ಅಲಿಯಾಸ್ ಶಿವಕುಮಾರ್ ತನ್ನ ಸಹಚರರೊಂದಿಗೆ ಆಗಮಿಸಿ ಬಾಗಿಲು ಬಡಿದಿದ್ದಾನೆ.ಯಾರೂ ಮನೆಯಿಂದ ಹೊರಗೆ ಬಾರದಿದ್ದಾಗ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಓಮ್ನಿ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಮಾಲೀಕರಿಗೆ ಸುಮಾರು 2,69,555 ರೂ ನಷ್ಟ ಉಂಟಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

 

 

 

 

ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್ ನನ್ನು ಉಡುಪಿಯಲ್ಲಿ ಎಸ್ ಪಿಯಾಗಿದ್ದ ಅಣ್ಣಾಮಲೈ‌ ಅವರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು, ಈ ಪ್ರಕರಣದ ಆರೋಪಿತನೆಂದು ಗುರುತಿಸಿ ಪ್ರಕರಣವನ್ನು ಮರುತನಿಖೆಗೆ ಆದೇಶಿಸಲಾಗಿತ್ತು.ಮರು ತನಿಖೆ ಆರಂಭಿಸಿದ ಡಿವೈಎಸ್ ಪಿ ರವೀಶ್ ಸಿ.ಆರ್. ಆರೋಪಿ ಚಿನ್ನಿ ರಮೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪ ಪಟ್ಟಿ ತಯಾರಿಸಿ 2017ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ಆರಂಭಿಸಿದ ಮಂಗಳೂರು ಜಿಲ್ಲಾ ಪ್ರಧಾನ ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ ಒಟ್ಟು 22 ಸಾಕ್ಷಿಗಳಲ್ಲಿ 9 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಇದರಲ್ಲಿ ಐವರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. 2013ರ ಸಂದರ್ಭ ಕುತ್ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುತ್ತಿದ್ದ ಸಂದರ್ಭ ದೂರುದಾರ ರಾಮಚಂದ್ರ ಭಟ್ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದರು.ಈ ಹಿನ್ನೆಲೆಯಲ್ಲಿ ನಕ್ಸಲರು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ನ್ಯಾಯಾಲಯವು ಅಂತಿಮ ನಿರ್ಣಯವನ್ನು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್ ನನ್ನು ದೋಷ ಮುಕ್ತಗೊಳಿಸಿ ಆದೇಶಿಸಿದೆ. ಚಿನ್ನಿ ರಮೇಶ್ ವಿರುದ್ಧ ಚಿಕ್ಕಮಗಳೂರಿನಲ್ಲಿ 4 ಕೇಸ್ ಗಳು ವಿಚಾರಣೆಯಲ್ಲಿದ್ದು, ಪ್ರಸ್ತುತ ಬೆಂಗಳೂರು ಜೈಲ್ ನಲ್ಲಿದ್ದಾನೆ.

error: Content is protected !!