ರೈತರು, ಕೃಷಿಕರು, ಅಡಿಕೆ ಬೆಳೆಗಾರರು, ಜನಸಾಮಾನ್ಯರ ಸಮಸ್ಯೆಗಳಿಗೆ ಸಂಸತ್ತಿನಲ್ಲಿ ಧ್ವನಿಯೆತ್ತುವ ಭರವಸೆ: ಡಾ.ಹೆಗ್ಗಡೆ ಹೇಳಿಕೆ: ಧರ್ಮಸ್ಥಳದಲ್ಲಿ ರಾಜ್ಯಸಭಾ ಸದಸ್ಯರ ಕಾರ್ಯಾಲಯ ಉದ್ಘಾಟನೆ

 

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನಲ್ಲಿ ಹಾಗೂ ರಾಜ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ ತನ್ನ ಯೋಚನೆ ಹಾಗೂ ಯೋಜನೆಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭೆ ಸದಸ್ಯ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ವಸಂತಮಹಲ್ ಬಳಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಕೃಷಿಕರು ಹಾಗೂ ಅಡಿಕೆ ಬೆಳೆಗಾರರು ಅನೇಕ ಸಮಸ್ಯೆಗಳಿಂದ ಇಂದು ಹತಾಶರಾಗಿದ್ದಾರೆ. ಅವರ ಬಗ್ಗೆ ಸಂಸತ್‍ನಲ್ಲಿ ಧ್ವನಿ ಎತ್ತುವುದಲ್ಲದೆ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

 

 

ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಅಧಿಕಾರಿಗಳು ಹಾಗೂ ಸ್ವಯಂ-ಸೇವಾ ಸಂಸ್ಥೆಗಳ ಮೂಲಕ ಜನಸಾಮಾನ್ಯರಿಗೆ ಅಧಿಕೃತ ಮಾಹಿತಿ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲಿ ಏಳು ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಈಗಾಗಲೆ ಪ್ರಾರಂಭಿಸಿದ್ದು ಜನಸಾಮಾನ್ಯರಿಗೆ ಆಧಾರ್ ಕಾರ್ಡ್, ಆರೋಗ್ಯ ವಿಮೆ, ನೆರೆ-ಬರ ಪರಿಹಾರ, ಕೂಲಿ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್, ಆಯುಷ್ಮಾನ್ ಕಾರ್ಡ್ ಮೊದಲಾದ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗಿದೆ.
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ದೃಢ ನಂಬಿಕೆ ಎಲ್ಲರಲ್ಲಿದೆ. ದೇವಸ್ಥಾನದಲ್ಲಿ ಧಾರ್ಮಿಕ ಪರಂಪರೆ, ಶಿಸ್ತು, ಸ್ವಚ್ಛತೆ, ನಂಬಿಕೆ-ನಡವಳಿಕೆ, ಸಂಪ್ರದಾಯ ಹಾಗೂ ಕಾಲ ಕಾಲಕ್ಕೆ ನಡೆಯಬೇಕಾದ ಕಟ್ಟುಕಟ್ಟಳೆಗಳನ್ನು ವ್ಯವಸ್ಥಿತವಾಗಿ ಚಾಚೂ ತಪ್ಪದೆ ಮಾಡಲಾಗುತ್ತದೆ.

 

 

 

 

ಜನರ ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರ ಕ್ರಮಗಳನ್ನು ವ್ಯವಸ್ಥಿತವಾಗಿ ಚಾಚೂ ತಪ್ಪದೆ ಮಾಡಲಾಗುತ್ತದೆ. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸರಿಯಾಗಿ ಸ್ಪಂದಿಸಿ ಸೃಜನಾತ್ಮಕ ಪರಿಹಾರ ಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ಧರ್ಮಸ್ಥಳದ ಹೆಗ್ಗಳಿಕೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ತಂತ್ರಜ್ಞಾನದ ಅಳವಡಿಕೆ ಹಾಗೂ ಮಹಿಳಾ ಸಬಲೀಕರಣ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ವಿಶೇಷ ಒತ್ತು ನೀಡಿದ್ದು ಇದು ಯಶಸ್ವಿಯಾಗಿದೆ ಎಂದರು.ರಾಜ್ಯಸಭಾ ಸದಸ್ಯನಾದರೂ ತನ್ನ ಆಹಾರ-ವಿಹಾರ, ಆಚಾರ-ವಿಚಾರ, ಧರಿಸುವ ಧಿರಿಸು, ಶಿಷ್ಟಾಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ತಾನು ಎಂದಿನಂತೆ ಜನಸಾಮಾನ್ಯರ ಮಧ್ಯೆ ಪ್ರೀತಿ-ವಿಶ್ವಾಸ ಗೌರವದಿಂದ ಇರುತ್ತೇನೆ. ಪಕ್ಷಾತೀತನಾಗಿ, ರಾಜಕೀಯ ರಹಿತವಾಗಿ ದೇಶ ಸೇವೆ ಮಾಡುವುದಾಗಿ ಭರವಸೆ ನೀಡಿದರು.

ಎಲ್ಲಿಯೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ರಾಜ್ಯ ಸಭೆಯು ಹಿರಿಯ ಹಾಗೂ ಅನುಭವಿ ಸದಸ್ಯರ ವೇದಿಕೆಯಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರೆ ಹೆಗ್ಗಡೆಯವರ ಸೇವೆ, ಸಾಧನೆ ಮತ್ತು ವರ್ಚಸ್ಸನ್ನು ಗಮನಿಸಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ.
ಸಾಮಾನ್ಯವಾಗಿ ಸಂಸದರ ಕಾರ್ಯಾಲಯ ಜಿಲ್ಲಾ ಕೇಂದ್ರದಲ್ಲಿಯೂ, ಶಾಸಕರ ಕಾರ್ಯಾಲಯ ತಾಲೂಕು ಕೇಂದ್ರದಲ್ಲಿಯೂ ಇರುತ್ತದೆ. ಆದರೆ, ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸದರ ಕಾರ್ಯಾಲಯ ಆರಂಭವಾಗಿರುವುದು ದೇಶದಲ್ಲೇ ಇದು ಪ್ರಥಮ ಹಾಗೂ ಐತಿಹಾಸಿಕ ಘಟನೆಯಾಗಿದೆ. ಇದುವೆ “ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಎಂದು ಬಣ್ಣಿಸಿದರು.
ಒಬ್ಬರು ರಾಜ್ಯಸಭಾ ಸದಸ್ಯರು, ಮೂರು ಮಂದಿ ಶಾಸಕರು ಹಾಗೂ ಅತಿ ಹೆಚ್ಚು ಅಂದರೆ 81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕು ಸರ್ವ ರೀತಿಯಿಂದಲೂ ವಿಶಿಷ್ಟವಾಗಿದೆ ಎಂದು ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದರು.
ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನೇತೃತ್ವ ವಹಿಸಿದ ಮೂವರೂ ಪ್ರಸ್ತುತ ಶಾಸಕರಾಗಿದ್ದಾರೆ ಎಂದರು.
ಶಾಸಕರು ಹೆಗ್ಗಡೆಯವರಿಗೆ ಪ್ರೀತಿ-ವಿಶ್ವಾಸ, ಒಗ್ಗಟ್ಟಿನ ಸಂಕೇತವಾದ ರಕ್ಷಾಬಂಧನ ಕಟ್ಟಿ ಅಭಿನಂದಿಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಸಮಾಜ ಸೇವೆಯೇ ದೇವರ ಸೇವೆ ಎಂದು ಭಾವಿಸಿ ಜನತಾ –ಜನಾರ್ದನ ಸೇವೆ ಮಾಡಿದ ಹೆಗ್ಗಡೆಯವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಅತ್ಯಂತ ಗೌರವಪೂರ್ವಕವಾಗಿ ದೊರಕಿದೆ. ರಾಜ್ಯ ಸಭೆಯು ಹಿರಿಯರ, ಅನುಭವಿಗಳ ಹಾಗೂ ತಜ್ಞರ ವೇದಿಕೆಯಾಗಿದ್ದು ಸಮಗ್ರ ದೇಶದ ಅಭಿವೃದ್ಧಿಯೇ ಅದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಾಶ್ಮಿರದಿಂದ ಕನ್ಯಾಕುಮಾರಿವರೆಗೆ ಇಡಿ ದೇಶದ ಪ್ರಗತಿಗೆ ಹೆಗ್ಗಡೆಯವರ ಸೇವೆ ದೊರಕಲಿದೆ ಎಂದು ಅವರು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡಿ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ರಾಜ್ಯಸಭೆಗೆ ವಿಶೇಷ ಶೋಭೆ ಬಂದಿದೆ. ಶ್ರೀ ಮಂಜುನಾಥ ಸ್ವಾಮಿಯ ಪ್ರತಿನಿಧಿಯಾದ ಹೆಗ್ಗಡೆಯವರಿಗೆ ಸರ್ವರೀತಿಯ ಯಶಸ್ಸು ದೊರಕಲೆಂದು ಅವರು ಹಾರೈಸಿದರು.
ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡಬಿದ್ರೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಕಾರ್ಯ ನಿರ್ವಹಣಾಧಿಕಾರಿ ಎಂ.ವೈ. ಹರೀಶ್, ಪೂರಣ್‍ವರ್ಮ ಉಪಸ್ಥಿತರಿದ್ದರು.
ಸಂಸದರ ಆಪ್ತಕಾರ್ಯದರ್ಶಿ ಕೆ.ಎನ್. ಜನಾರ್ದನ್ ಸ್ವಾಗತಿಸಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಧನ್ಯವಾದವಿತ್ತರು.
ಗ್ರಾಮಾಭಿವೃದ್ಧಿ ಯೋಜನೆಯ ಶಿವಕುಮಾರ್ ಮತ್ತು ಸುಷ್ಮಾ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!