ಬೈಕ್​ ಹಿಂಬದಿ ಸವಾರರಿಗೆ ನಿರ್ಬಂಧ ಆದೇಶ ಕೆಲವೇ ಗಂಟೆಗಳಲ್ಲಿ ಹಿಂದಕ್ಕೆ: ಆದೇಶಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ: ರಾತ್ರಿ 9 ಗಂಟೆಯವರೆಗೆ ಅಂಗಡಿ ತೆರೆಯಲು ನಿರ್ಬಂಧ ಸಡಿಲಿಕೆ: ನಾಳೆಯಿಂದ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿ ತೆರೆಯಲು ಅವಕಾಶ:

 

 

 

 

 

 

ಮಂಗಳೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾಳೆಯಿಂದ ಬೈಕ್​ನಲ್ಲಿ ಹಿಂಬದಿ ಯುವ ಪುರುಷ ಸವಾರರಿಗೆ ನಿರ್ಬಂಧಿಸಿದ ಆದೇಶವನ್ನು ಕೆಲವೇ ಗಂಟೆಗಳಲ್ಲಿ ವಾಪಸ್​​ ಪಡೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ನಡೆದ ಬಳಿಕ ಜಾರಿಯಲ್ಲಿದ್ದ ರಾತ್ರಿ ನಿಷೇಧಾಜ್ಞೆಯು ನಾಳೆ ಬೆಳಿಗ್ಗೆ ತೆರವಾಗಲಿದೆ.

ಇಂದು ಎಡಿಜಿಪಿ ಅಲೋಕ್ ಕುಮಾರ್ ಅವರು ನಡೆಸಿದ ಸಭೆಯ ಬಳಿಕ ರಾತ್ರಿ ಕರ್ಫ್ಯೂ ಸಡಿಲಿಕೆ ಬಳಿಕ ಬೈಕ್​​ನಲ್ಲಿ ಹಿಂಬದಿ ಯುವ ಪುರುಷ ಸವಾರರಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರಂತೆ ಸಂಜೆ 4 ಗಂಟೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಆಗಸ್ಟ್​ 5ರಿಂದ ಆಗಸ್ಟ್ 8ರ ಬೆಳಗ್ಗೆವರೆಗೆ ಸಂಜೆ 6ರಿಂದ ಬೆಳಿಗ್ಗೆ 6ವರೆಗೆ 18 ವರ್ಷಕ್ಕೆ ಮೇಲ್ಪಟ್ಟ 60 ವರ್ಷದೊಳಗಿನ ಪುರುಷರ ಬೈಕ್​ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.ಆದರೆ ಹಿಂಬದಿ ಸವಾರರಿಗೆ ನಿರ್ಬಂಧ ಆದೇಶಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಲು ಆರಂಭವಾಗಿದೆ. ಈ ಆದೇಶವನ್ನು ಸಂಜೆ 5 ಗಂಟೆಯ ಮೊದಲೇ ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ರಾತ್ರಿ ಕರ್ಫ್ಯೂ ಸಡಿಲಿಕೆ:

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ಸಂಜೆ 6ರಿಂದ ಬೆಳಗ್ಗೆ 6ರವರೆಗೆ ರಾತ್ರಿ ನಿರ್ಬಂಧದ ಆದೇಶ ನಾಳೆ ಬೆಳಗ್ಗೆ 6 ಗಂಟೆಗೆ ಕೊನೆಗೊಳ್ಳಲಿದೆ. ನಾಳೆಯಿಂದ ರಾತ್ರಿ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದ್ದು ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯವರೆಗೆ ಅಂಗಡಿ ತೆರೆಯಬಹುದಾಗಿದೆ. ಅದೇ ರೀತಿ ನಾಳೆಯಿಂದ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿ ತೆರೆಯಲು‌ ಅವಕಾಶ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ

error: Content is protected !!