ಪುತ್ತೂರು:ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಅವರ ಅಂತಿಮ ಯಾತ್ರೆ ವೇಳೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸಚಿವರು ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಬೆಳ್ಳಾರೆಯಲ್ಲಿ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಈ ವೇಳೆ ಆಗಮಿಸಿದ ಸಚಿವರಾದ ಸುನಿಲ್ ಕುಮಾರ್ , ಎಸ್ . ಆಂಗಾರ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ ಅವರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಆಕ್ರೋಶಿತ ಹಿಂದೂ ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರು ಸರಕಾರದ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿ ಧಿಕ್ಕಾರ ಕೂಗಿದರು. ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಾವಿರಾರು ಜನರ ಆಕ್ರೋಶದ ನಡುವೆ ಬಿಜೆಪಿಯ ನಾಯಕರೆಲ್ಲರೂ ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಸಾವಿರಾರು ಜನ ಜಮಾವಣೆ ಗೊಂಡು, ಕಲ್ಲು ತೂರಾಟ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ್ದಾರೆ.
ಸುಳ್ಯ ತಾಲೂಕಿನ ಬೆಳ್ಳಾರೆ ನೆಟ್ಟಾರು ನಿವಾಸಿ ಯಾಗಿರುವ ಪ್ರವೀಣ್ ಅವರ ನಿವಾಸದಲ್ಲಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಿವಾಸದಲ್ಲಿ ಅಂತ್ಯಕ್ರಿಯೆ ನಡೆಸಲು ತಯಾರಿ ನಡೆಸಲಾಗಿದ್ದು ಸಾವಿರಾರು ಜನರು ಜಮಾವಣೆಗೊಂಡಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಚಿಕನ್ ಸೆಂಟರ್ ಮುಚ್ಚುವ ವೇಳೆ ದುಷ್ಕರ್ಮಿಗಳು ಪ್ರವೀಣ್ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು. ಘಟನೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವಾರಣ ನಿರ್ಮಾಣವಾಗಿದ್ದು, ವ್ಯಾಪಕ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.