ಜಿಲ್ಲೆಯಾದ್ಯಂತ ಭಾರೀ ಮಳೆ, ನದಿಗಳಲ್ಲಿ ನೀರಿನ ಮಟ್ಟ ಏರಿಕೆ: ಮಕ್ಕಳ ಬಗ್ಗೆ ನಿಗಾ ಅವಶ್ಯ, ಆರೋಗ್ಯ, ಅನಾಹುತ ತಪ್ಪಿಸಲು ಮುನ್ನೆಚ್ಚರಿಕೆ ಮದ್ದು

 

 

ಬೆಳ್ತಂಗಡಿ: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ರೆಡ್ ಅಲರ್ಟ್ ಘೋಷಣೆಯಾಗಿದೆ ನದಿಗಳೆಲ್ಲ ಉಕ್ಕಿ ಹರಿಯುತ್ತಿದೆ, ಕೆರೆ ತೊರೆಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲಲ್ಲಿ ಗುಡ್ಡ ಕುಸಿತ ಮರ ಬೀಳುವುದು, ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿ ಬೀಳುತ್ತಿರುವ ಘಟನೆ ನಡೆಯುತ್ತಿದೆ. ಅದ್ದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವ ಅವಶ್ಯಕತೆ ಇದೆ. ಮಳೆಯ ಕಾರಣಕ್ಕೆ ಮಕ್ಕಳಿಗೆ ಶಾಲೆಗೆ ರಜೆ ಇರುವುದರಿಂದ ಕೆಲವು ಕಡೆಗಳಲ್ಲಿ ಮೀನು ಹಿಡಿಯಲು ಈಜಾಡಲು, ನೀರಿನಲ್ಲಿ ಆಟವಾಡಲು ಮಕ್ಕಳು ತೆರಳುತ್ತಾರೆ. ಅದಲ್ಲದೇ ಅಪಾಯಕಾರಿ ಸ್ಥಳಗಳಲ್ಲಿ, ನೀರಿನಲ್ಲಿ ನಿಂತು ಸೆಲ್ಫಿ ತೆಗೆದು ಗೆಳೆಯರಿಗೆ ಸ್ಟೇಟಸ್ ಹಾಕುವಂತಹ ಕೆಲವು ಪೋಸ್ಟ್ ಗಳು ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಅದ್ದರಿಂದ ಈ ಬಗ್ಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಿ  ಎಚ್ಚರ ವಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಹೊರ ಹೋಗದಂತೆ ನೋಡಿಕೊಳ್ಳಬೇಕಾಗಿದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ ಅಪಾಯ ಸಂಭವಿಸಿದ ನಂತರ ಕೊರಗಿದರೆ ಏನೂ ಪ್ರಯೋಜನ ಇಲ್ಲ ಅದ್ದರಿಂದ ಅಪಾಯ ಸಂಭವಿಸದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಇದು ಪ್ರಜಾಪ್ರಕಾಶ ನ್ಯೂಸ್ ತಂಡದ ಕಾಳಜಿಯಾಗಿದೆ.

error: Content is protected !!