ನಾರಾಯಣ ಗುರುಗಳ ಜೀವನ ಚರಿತ್ರೆ ಪಠ್ಯದಿಂದ ತೆಗದು ಹಾಕಿದ್ದು ಖಂಡನೀಯ : ಸೇರಿಸದಿದ್ದಲ್ಲಿ  ಸಂಘದ ವತಿಯಿಂದ ಹೋರಾಟ :  ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

 

 

 

 

ಬೆಳ್ತಂಗಡಿ : ಕೇರಳದಲ್ಲಿ ಮೇಲ್ವರ್ಗದವರ ಅನಾಚಾರ, ದಬ್ಬಾಳಿಕೆಯಿಂದ ಮತಾಂತರಗೊಳ್ಳುತ್ತಿದ್ದ ಹಿಂದುಳಿದ ವರ್ಗಗಳಿಗೆ ಸ್ವರವಾಗಿ ಅವರನ್ನು ಹಿಂದೂ ಧರ್ಮದಲ್ಲಿ ಉಳಿಸಿ ಕೇರಳವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ ಮಹಾನ್ ಸಂತ ವಿದ್ಯೆಯ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟು ಕೇರಳದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಸಮಾಜ ಉದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ಸಮಾಜ ವಿಜ್ಞಾನ ಪಠ್ಯದಿಂದ ತೆಗೆದು ಹಾಕಿರುವುದು ಸರಿಯಲ್ಲ ಅದನ್ನು ಮತ್ತೆ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಳವಡಿಸಬೇಕು ಇಲ್ಲವಾದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಬೆಳ್ತಂಗಡಿ ಗುರುನಾರಾಯಣ ಸ್ವಾಮೀ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ತಾರಕಕ್ಕೇರಿದ್ದು ಸರ್ಕಾರ ಮತ್ತು ಶಿಕ್ಷಣ ಸಚಿವರು ಒಂದಷ್ಟು ತೇಪೆ ಹಚ್ಚುವ ಕಾರ್ಯದ ಮೂಲಕ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಬ್ರಹ್ಮಶ್ರೀ ನಾರಾಯಣಗುರು ಮತ್ತು ಪೆರಿಯಾರ್ ಅವರ ಜೀವನ ಚರಿತ್ರೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಟ್ಟಿರುವ ಬಗ್ಗೆ ಪ್ರಾರಂಭವಾದ ಹೋರಾಟ ಆ ನಂತರದ ದಿನಗಳಲ್ಲಿ ಭಗತ್‌ಸಿಂಗ್ ಚರಿತ್ರೆ ಕೈಬಿಟ್ಟಿರುವುದು ಜೊತೆಯಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಲಿಂಗಾಯತರು, ಒಕ್ಕಲಿಗ ಸಮಾಜ ಮುಂತಾದ ಮೇಲ್ವರ್ಗಗಳ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದಾಗ ಎಚ್ಚರಗೊಂಡ ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಸಚಿವರು ಪ್ರಸ್ತುತ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಖರಣಾ ಸಮಿತಿ ವಿಸರ್ಜಿಸಿರುತ್ತಾರೆ. ಅಲ್ಲದೆ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಸರ್ಕಾರ ಹೇಳಿದ್ದು, ಆದರೆ ಈಗ ಪರಿಷ್ಕೃತ ಪಠ್ಯ ಪುಸ್ತಕ ಕೂಡ ಹೊರ ಬಂದಿರುತ್ತದೆ.
ಈ ದಿನದ ಪತ್ರಿಕೆಗಳನ್ನು ಗಮನಿಸಿದಾಗ ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಪಠ್ಯ ಬದಲಾವಣೆ ಬಗ್ಗೆ ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳಿಕೆ ನೀಡಿದ್ದು ಈ ಹೇಳಿಕೆಯನ್ನು ನಾವು ಗೌರವಪೂರ್ವಕವಾಗಿ ಸ್ವಾಗತಿಸುತ್ತೇವೆ. ಜೊತೆಗೆ ಮುಖ್ಯಮಂತ್ರಿಗಳಿಗೆ ನಾರಾಯಣಗುರುಗಳ ಬಗ್ಗೆ ನಿಜವಾಗಿ ಪ್ರಾಮಾಣಿಕ ಗೌರವ, ಕಾಳಜಿ ಇದ್ದರೆ ಈಗಾಗಲೇ ಬಿಡುಗೊಂಡಿರುವ ಹತ್ತನೇ ತರಗತಿಯ ಸಮಾಜವಿಜ್ವಾನ ಪುಸ್ತಕಕ್ಕೆ ಪೂರಕ ಪಠ್ಯವಾಗಿ ಈ ಹಿಂದೆ ಇದ್ದ ನಾರಾಯಣ ಗುರುಗಳ ಪಠ್ಯವನ್ನು ಪ್ರಕಟಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. ಇಲ್ಲವಾದಲ್ಲಿ ಈ ಬಗ್ಗೆ ಸಮಸ್ತ ಶೋಷಿತ ಸಮಾಜದಿಂದ ತಾವು ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆಯನ್ನು ಸಹ ನೀಡುತ್ತಿದ್ದೇವೆ ಎಂದರು.
ಮೊನ್ನೆ ಮೊನ್ನೆ ದೆಹಲಿಯ ಜನವರಿ 26ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರದ ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಸಂದರ್ಭ ಗುರುಗಳಿಗೆ ಆಗಿರುವ ಅವಮಾನವನ್ನು ನಮ್ಮ ಸಮಾಜ ಇನ್ನೂ ಮರೆತಿಲ್ಲ. ಈಗ ಮತ್ತೊಮ್ಮೆ ಹಿಂದುಳಿದ ವರ್ಗಗಳ, ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಬರುವ ಬಿಲ್ಲವ, ಈಡಿಗ, ನಾಮಧಾರಿಯಾಗಿ 26 ಪಂಗಡಗಳನ್ನು ಒಳಗೊಂಡ ನಾರಾಯಣಗುರುಗಳನ್ನು ಆರಾಧಿಸಿಕೊಂಡು ಬರುತ್ತಿರುವ ಸಮಾಜದ ಅವಶ್ಯಕತೆ ಇಲ್ಲವೆಂದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಂತೆ ಕಾಣುತ್ತಿದೆ. ಆದ್ದರಿಂದ ಈಗ ಮತ್ತೊಮ್ಮೆ ಸರ್ಕಾರ ಹಾಗೂ ಶಿಕ್ಷಣ ಸಚಿವರಿಗೆ ಈ ಮೂಲಕ ನಮ್ಮ ಸಂಘದ ಪರವಾಗಿ ಎಚ್ಚರಿಕೆ ಕೊಡುತ್ತಿದ್ದೇವೆ. ಸಮಾಜದ ಆಗ್ರಹದಂತೆ ಈ ಹಿಂದಿನಂತೆ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿಯೇ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಈ ಬಗ್ಗೆ ನಮ್ಮ ಸಂಘದ ವತಿಯಿಂದ ಸೂಕ್ತ ಹೋರಾಟ ಹಮ್ಮಿಕೊಳ್ಳಲಾಗುವುದು. ಅದಕ್ಕೆ ಸರ್ಕಾರ ಆಸ್ಪದ ನೀಡದೆ ಈಗ ಆಗಿರುವ ಪ್ರಮಾದವನ್ನು ಸರಕಾರ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಶೇಖರ ಬಂಗೇರ, ಕಾರ್ಯದರ್ಶಿ ಜಯವಿಕ್ರಮ, ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ನಿರ್ದೇಶಕರಾದ ಲಕ್ಷ್ಮಣ್ ಪೂಜಾರಿ, ದಿನೇಶ್ ಬೆಳಾಲು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಕಾರ್ಯದರ್ಶಿ ಶಾಂಭವಿ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ನಿತೇಶ್ ಹೆಚ್, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಯೋಗೀಶ್, ಯುವವಾಹಿನಿ ಬೆಳ್ತಂಗಡಿ ಘಟಕದ ಉಪಾಧ್ಯಕ್ಷ ಜಯರಾಜ್ ಉಪಸ್ಥಿತರಿದ್ದರು.

error: Content is protected !!