ಬೆಳ್ತಂಗಡಿ ಪಟ್ಟಣ ಪಂಚಾಯಿತಿಯಿಂದ ಕೊಟ್ಯಂತರ ರೂ ಹಣ ಪೋಲು ರೆಂಕೆದ ಗುತ್ತು ಬಳಿ ನಡೆಯುತ್ತಿರುವ ಅನಗತ್ಯ ಕಾಮಗಾರಿಗಳ ಸೂಕ್ತ ತನಿಖೆ ನಡೆಸಬೇಕು ಪತ್ರಿಕಾಗೋಷ್ಠಿಯಲ್ಲಿ ಕೆ. ಸುಬ್ರಹ್ಮಣ್ಯ ಭಟ್ ಆಗ್ರಹ

 

 

 

 

ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 7 ರ ರೆಂಕೆದಗುತ್ತು ಬಳಿ ಜನರಿಂದ ಬೇಡಿಕೆ ಇಲ್ಲದ ಕೋಟ್ಯಾಂತರ ರೂಪಾಯಿ ಪೋಲು ಮಾಡುತ್ತಿರುವ ಅನಗತ್ಯ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಯಬೇಕು’ ಎಂದು 2023 ರ ವಿಧಾನಸಭಾ ಚುನಾವಣಾ ಅಭ್ಯರ್ಥಿ ಕೆ. ಸುಬ್ರಹ್ಮಣ್ಯ ಭಟ್ ಹೇಳಿದರು.

 

 

 

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ ಈ ಕಾಮಗಾರಿಯು ಶೌಚಾಲಯಗಳ ತ್ಯಾಜ್ಯ ನಿರ್ವಹಣೆಗಾಗಿ ಮಾಡುತ್ತಿದ್ದಾರೆ. ಆದರೆ ಈ ಪ್ರದೇಶದ ಎಲ್ಲಾ ಮನೆಗಳು ಹೊಸದಾಗಿ ನಿರ್ಮಿತವಾದವುಗಳು. ಎಲ್ಲಾ ಮನೆಗಳಲ್ಲೂ ವ್ಯವಸ್ಥಿತ ಶೌಚಾಲಯಗಳಿವೆ. ಹೊಸ ವ್ಯವಸ್ಥೆಗೆ ಯಾವುದೇ ಬೇಡಿಕೆ ಇಲ್ಲದಿರುವಾಗ ಈ ಕಾಮಗಾರಿ ಯಾಕೆ ಎಂದರು.

 

 

 

ಜನಾಭಿಪ್ರಾಯ ಸಂಗ್ರಹಿಸಿದಾಗ ಈ ಕಾಮಗಾರಿಗೆ ಯಾರ ಬೆಂಬಲವೂ ಇಲ್ಲ. ಅತ್ಯುತ್ತಮ ಸ್ಥಿತಿಯಲ್ಲಿರುವ ಕಾಂಕ್ರೀಟ್ ರಸ್ತೆಗಳನ್ನು ಮೆಷಿನ್ ಗಳಿಂದ ಪುಡಿಗಟ್ಟಲಾಗುತ್ತಿದೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಮೇಲ್ನೋಟಕ್ಕೆ ಕೋಟ್ಯಾಂತರ ರೂಪಾಯಿಗಳ ಹಣವನ್ನು ಬಿಲ್ ಮಾಡಿ ನಗದೀಕರಿಸಲು ನಡೆಸಿರುವ ಹುನ್ನಾರವಾಗಿದೆ.

 

 

ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಅನಗತ್ಯ ಕಾಮಗಾರಿಯ ಬಗ್ಗೆ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ನಿವಾಸಿ ಶಿವಾನಂದ ರೆಂಕೆದಗುತ್ತು ಮಾತನಾಡಿ ಈ ಅವೈಜ್ಞಾನಿಕ ತೆರೆದ ಒಳ ಚರಂಡಿ ಮತ್ತು ಅಸಮರ್ಪಕ ಇಂಗುಗುಂಡಿಯನ್ನು ತೆರವುಗೊಳಿಸುವಂತೆ ನಗರ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ನೀಡಿದರೂ ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಹಾಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ   ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದು ತಿಳಿಸಿದರು.

error: Content is protected !!