ರಸ್ತೆ ಸಂಪರ್ಕದೊಂದಿಗೆ ಶೀಘ್ರ ಸಮೀಪವಾಗಲಿದೆ ಹೊರನಾಡು- ಧರ್ಮಸ್ಥಳ: ಎಳನೀರು ಭಾಗದಲ್ಲಿ ರಸ್ತೆ, ವಿದ್ಯುತ್, ಹಕ್ಕುಪತ್ರ ವಿತರಣೆಗೆ ಕ್ರಮ: ಕಿಂಡಿ ಅಣೆಕಟ್ಟು ಮೂಲಕ ಅಂತರ್ಜಲ ಹೆಚ್ಚಾಗಿ ಸ್ಥಳೀಯ ಕೃಷಿಕರಿಗೆ ವರದಾನ: ಶಾಸಕ ಹರೀಶ್ ಪೂಂಜ ಹೇಳಿಕೆ ಎಳನೀರು ಪ್ರದೇಶದಲ್ಲಿ 11.20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ: ತವರು ಮನೆಗೂ ಹೋಗುವಂತಿರಲಿಲ್ಲ!, ರಸ್ತೆ ನಿರ್ಮಾಣದಿಂದ ಸಂಸೆ- ದಿಡುಪೆ ಭಾಗದ ಜನತೆಗೆ ಹೆಚ್ಚಿನ ಸಹಾಯ: ಕಳಸ ಗ್ರಾ.ಪಂ. ಅಧ್ಯಕ್ಷೆ ಸುಜಯಾ: ಸ್ಥಳೀಯ ಜನತೆಯ ಬಹುಕಾಲದ ಹೋರಾಟಕ್ಕೆ ಜಯ, ಯಾರೂ ಸಾಧಿಸದ್ದನ್ನು ಶಾಸಕರು ಸಾಧಿಸಿದರು: ಶೇಷಗಿರಿ

 

 

ಎಳನೀರು: ಆದ್ಯತೆ ಮೇರೆಗೆ ಎಳನೀರು ಭಾಗದ ಜನತೆಗೆ ಹಂತ ಹಂತವಾಗಿ ಸೌಲಭ್ಯಗಳನ್ನು ಒದಗಿಸಲು ಕ್ರಮ‌ಕೈಗೊಳ್ಳಲಾಗುವುದು. ಮುಖ್ಯವಾಗಿ ಇದೀಗ  ದಿಡುಪೆ -ಎಳನೀರು ಮೂಲಕ  ಸಂಸೆ  ಸಾಗುವ   ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಆದಷ್ಟು ಶೀಘ್ರವಾಗಿ ನಿರ್ಮಿಸಲಾಗುವುದು. ಈ ಮೂಲಕ ಜನರ ಹಲವು ವರ್ಷಗಳ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ. ಅದೇ ರೀತಿ  ಉಳಿದ   ದಿಡುಪೆ -ಸಂಸೆ  ರಸ್ತೆಯೂ ಅರಣ್ಯ ಇಲಾಖೆಯ ಮೂಲಕ  ಅನುಮತಿ ದೊರೆತು ಅದೂ  ಸುಸಜ್ಜಿತವಾಗಿ ನಿರ್ಮಾಣಗೊಳ್ಳುವ ಮೂಲಕ ಧರ್ಮಸ್ಥಳ ಹಾಗೂ ಹೊರನಾಡು ಕ್ಷೇತ್ರಗಳು ಇನ್ನಷ್ಟು ಹತ್ತಿರವಾಗಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಅವರು ಬುಧವಾರ ಎಳನೀರು ಪ್ರದೇಶದ 11.20ಕೋಟಿ ರೂ. ವೆಚ್ಚದ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ, ಎಳನೀರು ‌ಬ್ರಹ್ಮಸ್ಥಾನ ಬಳಿ ಸ್ಥಳೀಯ ಪ್ರದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

 

ಗ್ರಾಮದಲ್ಲಿ ರಸ್ತೆ, ವಿದ್ಯುತ್, ಹಕ್ಕುಪತ್ರ ವಿತರಣೆಗೆ ಆದ್ಯತೆ ‌ಮೇರೆಗೆ‌‌ ಸಮಸ್ಯೆ ಶೀಘ್ರವಾಗಿ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಹಕ್ಕು ಪತ್ರ ವಿತರಣೆಯಲ್ಲಿ ಯಾವುದೇ ರಾಜಿ ಇಲ್ಲ, ನಿಜವಾದ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ತಾಲೂಕಿನ ಪ್ರತಿ ಗ್ರಾಮದ ಪ್ರತಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಧ್ಯೇಯವಾಗಿದೆ. ತಾಲೂಕಿನ ಅಭಿವೃದ್ಧಿಗೆ ಹಾಗೂ ಜನರ ಅಗತ್ಯ ಸೌಕರ್ಯಗಳ ಕುರಿತು ಹೆಚ್ಚಿನ ಮಹತ್ವ ನೀಡಲಾಗುವುದು ಎಂದರು.

 

 

ಬಂಗಾರಪಲ್ಕೆ ಬಳಿ 5 ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಿಂದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ‌ನೆರವೇರಿಸಲಾಗಿದೆ. ಸುಮಾರು 2 ತಿಂಗಳ ಅವಧಿಯಲ್ಲಿ ‌ಕಾಮಗಾರಿ ಪೂರ್ಣಗೊಂಡು ಜನರ ಪ್ರಯೋಜನಕ್ಕೆ ಲಭ್ಯವಾಗುವ ವಿಶ್ವಾಸವಿದೆ. ಕಿಂಡಿ ಅಣೆಕಟ್ಟು ‌ನಿರ್ಮಾಣದ‌ ಮೂಲಕ ಅಂತರ್ಜಲ ಪ್ರಮಾಣ‌ ಹೆಚ್ಚಾಗಿ ಸ್ಥಳೀಯ ಕೃಷಿಕರಿಗೆ ವರದಾನವಾಗಲಿದೆ ಎಂದರು.
ಎಳನೀರು ಪ್ರದೇಶವನ್ನು ಒಂದು ಗ್ರಾಮವೆಂದು ಪರಿಗಣಿಸಿ ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಗುತ್ಯಡ್ಕ, ಬಡಮನೆ ಪರಿಸರದ ರಸ್ತೆ ಅಭಿವೃದ್ಧಿ, ಕುಮ್ಕಿ ಸಮಸ್ಯೆ ಪರಿಹಾರ ಮೊದಲಾದ ಅಗತ್ಯ ವಿಷಯಗಳ ಬಗ್ಗೆ ಜನಸ್ನೇಹಿ ಯೋಜನೆ ರೂಪಿಸಲಾಗುವುದು. ಈಗಾಗಲೇ ‌ಚಾಲನೆ‌ ನೀಡಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಲಿದೆ. ಗುಣ ಮಟ್ಟದ ಕೆಲಸಕ್ಕೆ ಆದ್ಯತೆ ನೀಡಲಾಗಿದ್ದು, ಕಾಮಗಾರಿ ನಡೆಯುವ ಸಮಯ ಊರವರ ಸಹಕಾರವೂ ಅಗತ್ಯ ಎಂದರು.

ತವರು‌ ಮನೆಗೆ ಹೋಗಲೂ ಪರದಾಟ:

ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ ಮಾತನಾಡಿ, ನನ್ನ ತವರು ಮನೆ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿದ್ದು, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಾಗಲೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಶಾಸಕರ ಮುತುವರ್ಜಿಯಿಂದ ರಸ್ತೆ ನಿರ್ಮಾಣವಾಗುತ್ತಿದ್ದು, ಸಂಸೆ, ಕಳಸ, ಎಳನೀರು ಭಾಗದ ಜನತೆಗೆ ಅನುಕೂಲಕವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸೆ ವ್ಯಾಪ್ತಿಯ ಮುಖಂಡ ಶೇಷಗಿರಿ ಮಾತನಾಡಿ, ಇವರೆಗೆ ಹಲವು ಸಂಸದರು ದ.ಕ, ಚಿಕ್ಕಮಗಳೂರು ವ್ಯಾಪ್ತಿಗೆ ಆಯ್ಕೆಯಾಗಿದ್ದರೂ ಈ ರಸ್ತೆ ನಿರ್ಮಾಣಕ್ಕೆ ‌ಯಾವುದೇ ಕೊಡುಗೆ ನೀಡಲು ಸಾಧ್ಯವಾಗಿರಲಿಲ್ಲ. ಸ್ಥಳೀಯ ಜನತೆ ದಿಡುಪೆ- ಸಂಸೆ ಅಭಿವೃದ್ಧಿಗಾಗಿ ಹೋರಾಟವನ್ನೇ ನಡೆಸಿದ್ದರು. ಇದೀಗ ಹಲವು ದಶಕಗಳ ಬಳಿಕ ರಸ್ತೆ ಅಭಿವೃದ್ಧಿ ಹೊಂದುತ್ತಿರುವುದು ಉತ್ತಮ ವಿಚಾರ ಎಂದರು.
ಮಲವಂತಿಗೆ ಪಂಚಾಯಿತಿ ಸದಸ್ಯ ಪ್ರಕಾಶ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಜನತೆ ಬೆಳ್ತಂಗಡಿ ಪರಿಸರ ತಲುಪಲು ಹರಸಾಹಸಪಡಬೇಕಾಗಿತ್ತು. ಮಳೆಗಾಲದಲ್ಲಂತೂ ಓಡಾಟವೇ ಸ್ಥಗಿತಗೊಂಡು ಬೆಳ್ತಂಗಡಿಗೆ 120 ಕಿ.ಮೀ. ದೂರ ಸಂಚರಿಸಬೇಕಿತ್ತು. ರಸ್ತೆ ನಿರ್ಮಾಣದಿಂದ ಸ್ಥಳೀಯರಿಗೆ ಉಪಕಾರವಾಗಲಿದೆ. ಎಳನೀರು ಕಡಿಮೆ ಜನಸಂಖ್ಯೆ ಇರುವ ಪ್ರದೇಶವಾಗಿದ್ದು, ಸ್ಥಳೀಯ ಅಭಿವೃದ್ಧಿಗೆ ಕೆಲವು ಲಕ್ಷ ರೂ. ದೊರಕುವುದೇ ಅಪರೂಪವಾಗಿತ್ತು. ಇದೀಗ ಸುಮಾರು 11 ಕೋಟಿ. ರೂ.ಗೂ‌ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು ಸ್ಥಳೀಯರಿಗೆ ಹೊಸ ಚೈತನ್ಯ ತುಂಬಿದಂತಾಗಿದೆ ಎಂದರು.
ಶಾಸಕ ಹರೀಶ್ ಪೂಂಜ ಅವರನ್ನು ಸಂಸೆ ಜನಪ್ರತಿನಿಧಿಗಳು, ಅಭಿಮಾನಿಗಳು, ಎಳನೀರು ಜನತೆ ಗೌರವಿಸಿದರು. ಶಾಸಕರು ಬುಧವಾರ ದಿನಪೂರ್ತಿ ಸ್ಥಳೀಯ ಜೀಪಿನಲ್ಲಿ ಎಳನೀರು ಪ್ರದೇಶದ ವಿವಿಧ ಭಾಗಗಳಿಗೆ ತೆರಳಿ ಸ್ಥಳೀಯರ ಸಮಸ್ಯೆ ಆಲಿಸುವ ಜೊತೆಗೆ ವಿವಿಧ ಕಾಮಗಾರಿಗಳ ಉದ್ಘಾಟನೆ, ಚಾಲನೆ ನೀಡಿದರು. ಶಾಸಕರು ಆಗಮಿಸಿದ ವಿಚಾರದಿಂದ ಸ್ಥಳೀಯರು ಉತ್ಸಾಹದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಶಂಕುಸ್ಥಾಪನೆ, ಉದ್ಘಾಟನೆ:

‌50 ಲಕ್ಷ ರೂ. ವೆಚ್ಚದಲ್ಲಿ ಎಳನೀರು ಪ.ಪಂಗಡದ ಕಾಲನಿಗೆ ಕಿರು ಸೇತುವೆ ನಿರ್ಮಾಣ, 13 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾದ ಗುತ್ಯಡ್ಕ ಅಂಗನವಾಡಿ ಉದ್ಘಾಟನೆ, ರೂ.10 ಲಕ್ಷ ಅನುದಾನದಲ್ಲಿ ಕುರೆಕಲ್ ರಸ್ತೆ ಕಾಂಕ್ರಿಟೀಕರಣ, 10 ಲಕ್ಷ ರೂ. ಅನುದಾನದ ಗುತ್ಯಡ್ಕ ಶಾಲೆಯ ರಸ್ತೆ ಕಾಂಕ್ರಿಟೀಕರಣ, 9 ಲಕ್ಷ ರೂ. ವೆಚ್ಚದ ಬಡಮನೆ ರಸ್ತೆ ಕಾಂಕ್ರಿಟೀಕರಣ,‌ 8 ಲಕ್ಷ ರೂ. ವೆಚ್ಚದ ಬ್ರಹ್ಮ ಸ್ಥಾನದ ಸ್ಟೀಲ್ ಬ್ರಿಡ್ಜ್ , 10 ಲಕ್ಷ ರೂ. ವೆಚ್ಚದಲ್ಲಿ ಬಂಗಾರಪಲ್ಕೆ ರಸ್ತೆ ಕಾಂಕ್ರಿಟೀಕರಣ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಚಾಲನೆಯನ್ನು ಶಾಸಕ ಹರೀಶ್ ಪೂಂಜ‌ ನೀಡಿದರು.

ಶಾಲೆಗೆ ಭೇಟಿ:

ಗುತ್ಯಡ್ಕ‌ ಅಂಗನವಾಡಿ‌ ಉದ್ಘಾಟನೆ ಬಳಿಕ ಸರಕಾರಿ ಶಾಲೆಗೆ‌ ಭೇಟಿ ನೀಡಿ, ಸ್ಥಳೀಯ ಜನತೆಯನ್ನು‌ ಉದ್ದೇಶಿಸಿ‌ ಮಾತನಾಡಿದರು. ಶಾಲೆಯ ಸಮಸ್ಯಗಳಿಗೆ ಸ್ಪಂದಿಸುವ ಭರವಸೆ ನೀಡಿ ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು. ಈ ವೇಳೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಮುಖ್ಯಶಿಕ್ಷಕ ರವೀಂದ್ರ, ಸಹಶಿಕ್ಷಕರು, ಊರಿನ ನಾಗರೀಕರು ‌ಉಪಸ್ಥಿತರಿದ್ದರು.
ಮಲವಂತಿಗೆ ಗ್ರಾಪಂ ಅಧ್ಯಕ್ಷೆ ಅನಿತಾ ಕೆ., ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ, ನಾವೂರು ಗ್ರಾಪಂ ಅಧ್ಯಕ್ಷ ಗಣೇಶ ಗೌಡ, ಕಳಸ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ನಾಗಭೂಷಣ್, ಮಲವಂತಿಗೆ ಗ್ರಾಪಂ ಉಪಾಧ್ಯಕ್ಷ ದಿನೇಶ್ ಗೌಡ, ಸದಸ್ಯೆ ರೋಹಿಣಿ, ಆದಿನಾಥ ಸಂಘದ ಅಧ್ಯಕ್ಷ ಫಣೀಂದ್ರ ಜೈನ್, ಕೇಶವ ದಿಡುಪೆ, ಪ್ರಮೋದ್ ದಿಡುಪೆ, ಸುಬ್ರಹ್ಮಣ್ಯ ಗುತ್ಯಡ್ಕ, ವಿಜಯ್ ಬಡಮನೆ, ಸಣ್ಣ ನೀರಾವರಿ ಇಲಾಖೆಯ ಎ.ಇ. ಡಾ.ಆನಂದ ಬಂಜನ್, ಯೋಜನಾ ವಿಭಾಗದ ಎ.ಇ. ಉದಯಕುಮಾರ್ ಉಪಸ್ಥಿತರಿದ್ದರು.
ಎಸ್.ಟಿ.ಮೋರ್ಚಾ ತಾಲೂಕು ಅಧ್ಯಕ್ಷ ಹರೀಶ್ ಎಳನೀರು ಸ್ವಾಗತಿಸಿ, ಕಾರ್ಯಕ್ರಮ ‌ನಿರ್ವಹಿಸಿದರು. ರತ್ನಾಕರ ವಂದಿಸಿದರು.

error: Content is protected !!