ಬುಧವಾರ ದಿನಪೂರ್ತಿ ಎಳನೀರು ಪ್ರದೇಶದಲ್ಲಿ ಶಾಸಕ ಹರೀಶ್ ಪೂಂಜ: ಬೆಳ್ತಂಗಡಿ ಮುಕುಟ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ: ಚಿಕ್ಕಮಗಳೂರು ವ್ಯಾಪ್ತಿಯ ಜನಪ್ರತಿನಿಧಿಗಳೂ ಹಾಜರು: ದಶಕಗಳ ಹೋರಾಟಕ್ಕೆ ಕೊನೆಗೂ ಫಲಸಿಕ್ಕ ಸಂತೃಪ್ತಿಯಲ್ಲಿ ಸ್ಥಳೀಯರು: ಧೂಳು ಕೊಡವಿಕೊಂಡು ಬೆಟ್ಟ, ಗುಡ್ಡಗಳ ಹತ್ತಿ ಇಳಿದ ಯುವಕರು: ಶಾಸಕರಿಂದ ₹ 11 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ:

 

 

 

 

ಎಳನೀರು: ಬೆಳ್ತಂಗಡಿಯ ಕಾಶ್ಮೀರ ಎಂದೇ ಕರೆಯಲ್ಪಡುವ ತಾಲೂಕಿಗೆ ಕಿರೀಟದಂತೆ ಇರುವ ಪ್ರದೇಶ ಎಳನೀರು. ತಾಲೂಕಿನ ಮೂಲೆಯಲ್ಲಿದ್ದು, ಚಿಕ್ಕಮಗಳೂರು ಸಂಸೆಗೆ ಸಮೀಪದಲ್ಲಿರುವ ಪ್ರದೇಶ ಕುಗ್ರಾಮವೆಂದೇ ಹೊರ ಜಗತ್ತಿಗೆ ಪರಿಚಿತ. ಮೂಲ ಸೌಕರ್ಯಗಳನ್ನು ಇಂದಿಗೂ ಪಡೆಯಲೂ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಖ್ಯಾತ ಧಾರ್ಮಿಕ ಕೇಂದ್ರಗಳಾದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಲುಪಲು ಅತೀ ಕಡಿಮೆ ದೂರದ ರಸ್ತೆಯೂ ಈ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದರೂ, ಕಡಿದಾದ ಹಾಗೂ ಅಸಮರ್ಪಕ ರಸ್ತೆ ಹಾಗೂ ವನ್ಯಜೀವಿ ಧಾಮ ಮೊದಲಾದ ತಾಂತ್ರಿಕ ಕಾರಣಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದ ಕುರಿತು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

 

 

ಅದೇ ರೀತಿ ಕನಿಷ್ಠ ರಸ್ತೆ ನಿರ್ಮಿಸಲು ಹೋರಾಟದ ಹಾದಿ ಹಿಡಿದರೂ ಸಾಧ್ಯವಾಗದ ಸಂದರ್ಭದಲ್ಲಿ ಇದೀಗ ಶಾಸಕ ಹರೀಶ್ ಪೂಂಜ ಅವರು ಅನುದಾನ ಬಿಡುಗಡೆ ಮಾಡಿ ₹ 5 ಕೋಟಿ ವೆಚ್ಚದಲ್ಲಿ ದಿಡುಪೆ- ಎಳನೀರು- ಸಂಸೆ ಸಂಪರ್ಕ ಸರ್ವಋತು ರಸ್ತೆಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿರುವುದು ಸ್ಥಳೀಯರಲ್ಲಿ ಹೊಸ ಭರವಸೆ ಮೂಡಿಸಿದೆ.

 

ದಶಕಗಳ ಹೋರಾಟಕ್ಕೆ ಕೊನೆಗೂ ಫಲಸಿಕ್ಕ ಸಂತೃಪ್ತಿಯಲ್ಲಿ ಸ್ಥಳೀಯರು:

ಸ್ಥಳೀಯರೇ ತಿಳಿಸುವಂತೆ ಮಳೆಗಾಲದಲ್ಲಿ ಹೊರಜಗತ್ತನ್ನು ಸಂಪರ್ಕಿಸಲೂ ಪ್ರಯಾಸಪಡಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಕನಿಷ್ಠ ರಸ್ತೆ ಸಂಪರ್ಕವಾದರೂ ದೊರೆತಲ್ಲಿ ತುರ್ತು ಅವಶ್ಯಕತೆಗಳು, ಶಿಕ್ಷಣ, ಆರೋಗ್ಯ ಮೊದಲಾದ ವಿಚಾರಗಳಿಗೆ ಹೆಚ್ಚು ಅಲೆದಾಟ ನಡೆಸದೆ ಉಜಿರೆ, ಬೆಳ್ತಂಗಡಿ ಪ್ರದೇಶಗಳಿಗೆ ಆಗಮಿಸಬಹುದು ಎಂಬ ವಿಚಾರವನ್ನು ತಿಳಿಸುತ್ತಾರೆ. ಹಿಂದೆ ರಸ್ತೆ ನಿರ್ಮಾಣಕ್ಕೆ ನೂರಾರು ಸ್ಥಳೀಯರು ಹೋರಾಟದ ಹಾದಿಯನ್ನು ಹಿಡಿದಿದ್ದರು,

 

 

 

ಸ್ವತಃ ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಚಿಕ್ಕಮಗಳೂರು ವ್ಯಾಪ್ತಿ ಹಾಗೂ ಎಳನೀರು ಪ್ರದೇಶಗಳ ಜನತೆ ಮುಂದೆ ನಿಂತಿದ್ದರೂ ಹೋರಾಟ ಫಲಿಸಿರಲಿಲ್ಲ. ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಸಂಸದರು ಆಯ್ಕೆಯಾಗಿದ್ದರೂ ರಸ್ತೆ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಇದೀಗ ದಶಕಗಳ ಹೋರಾಟಕ್ಕೆ ಫಲ ಸಿಗುವ ಸೂಚನೆ ಲಭಿಸಿದೆ. ಇದೀಗ ಶಾಸಕರು ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಕೊಂಚಮಟ್ಟಿನ ನಿರಾಳತೆ ಲಭಿಸಲಿದೆ ಎನ್ನುವುದು ಸ್ಥಳೀಯರ ಅಭಿಮತ.

 

 

ದಿನಪೂರ್ತಿ ಎಳನೀರಿನಲ್ಲಿ ಶಾಸಕರ ಸುತ್ತು:

ಈಗಾಗಲೇ ಪೂರ್ಣಗೊಂಡ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ, ಹೊಸ ರಸ್ತೆ ನಿರ್ಮಾಣಕ್ಕೆ ಶಂಕು ಸ್ಥಾಪನೆ, ನಿರ್ಮಾಣಗೊಳ್ಳಲಿರುವ ಸೇತುವೆ, ಸೇತುವೆ ಸಹಿತ ಕಿಂಡಿ ಅಣೆಕಟ್ಟು, ಅಂಗನವಾಡಿ ಲೋಕಾರ್ಪಣೆ ಮೊದಲಾದ ಕಾರ್ಯಕ್ರಮಕ್ಕೆ ಮಾ.2ರಂದು ಶಾಸಕ ಹರೀಶ್ ಪೂಂಜ ಎಳನೀರು ಪ್ರದೇಶಕ್ಕೆ ಭೇಟಿ ನೀಡಿದ್ದು ದಿನಪೂರ್ತಿ ಪ್ರದೇಶಗಳ ವಿವಿಧ ಭಾಗಕ್ಕೆ ತೆರಳಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಭರವಸೆಯ ಮಾತುಗಳ ಮೂಲಕ ಸ್ಥಳೀಯರಿಗೆ ಬೆಂಬಲ ತುಂಬಿದರು.

 

 

ಜೀಪಿನಲ್ಲಿ ದಟ್ಟಡವಿಯ ನಡುವೆ ಏರು, ಇಳಿಜಾರಿನ ರಸ್ತೆಯಲ್ಲಿ ಸಾಗಿದರೂ ಕತ್ತಲು ಕವಿಯುವವರೆಗೂ ಉತ್ಸಾಹದಿಂದಲೇ ಪಾಲ್ಗೊಂಡು ಸ್ಥಳೀಯರ ಮಾತುಗಳನ್ನು ಆಲಿಸಿದರು. ತಡವಾಗಿದ್ದರೂ

 

 

ಇನ್ನೇನೂ ಹೊರಡುವ ಸಂದರ್ಭದಲ್ಲಿ ಕಳಸ ಎಸ್.ಡಿ.ಎಂ. ಐಟಿಐ ವಿದ್ಯಾರ್ಥಿಗಳ ಆದರಾತಿಥ್ಯ ಸ್ವೀಕರಿಸಿ, ಹಿತನುಡಿಗಳನ್ನು ಆಡುವ ಮೂಲಕ ಸ್ಪೂರ್ತಿ ತುಂಬಿದರು.

 

 

ಧೂಳು ಕೊಡವಿಕೊಂಡು ಬೆಟ್ಟ, ಗುಡ್ಡಗಳ ಹತ್ತಿ ಇಳಿದ ಯುವಕರು:

ಮುಖ್ಯವಾಗಿ ಶಿಕ್ಷಣ, ವೈದ್ಯಕೀಯ ವ್ಯವಸ್ಥೆಗಳಿಗೆ ರಸ್ತೆ ಸಂಪರ್ಕದ ಕೊರತೆಯಿಂದ ಕಷ್ಟಪಟ್ಟಿದ್ದ ಜನತೆ ಸರ್ವಋತು ರಸ್ತೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುವ ಕುರಿತು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಕ್ಷ ರೂ.ಗಳ ಆಗಮಿಸುತ್ತಿರಲಿಲ್ಲ, ಇದೀಗ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂಬ ವಿಚಾರದಿಂದ ಶಾಸಕರನ್ನು ಸಂಸೆ ಮಾರ್ಗದ ಗಡಿಯ ಬಳಿಯೇ ಸಾರ್ವಜನಿಕರು ಬರಮಾಡಿಕೊಂಡರು.

 

 

 

ವಿವಿಧ ಕಾರ್ಯಕ್ರಮಗಳಿಗೆ ಶಾಸಕರು ಎಳನೀರು, ಗುತ್ಯಡ್ಕ, ಕುರೆಕಲ್, ಬಂಗಾರಪಲ್ಕೆ, ಬಡಮನೆ ಮೊದಲಾದ ಧೂಳುಮಯ ರಸ್ತೆಯಲ್ಲಿ ಸಾಗುವ ಸಂದರ್ಭದಲ್ಲೂ, ಏರು ದಾರಿ ಧೂಳು ಲೆಕ್ಕಿಸದೆ ಶಾಸಕರನ್ನು ಹಿಂಬಾಲಿಸಿಕೊಂಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಶಾಸಕರನ್ನು ಶಾಲು ಹೊದೆಸಿ, ಹಾರ ಹಾಕಿ ಗೌರವಿಸುವ ಮೂಲಕ ಗೌರವಿಸಿದರು.

 

 

 

ಚಿಕ್ಕಮಗಳೂರು ವ್ಯಾಪ್ತಿಯ ಜನಪ್ರತಿನಿಧಿಗಳೂ ಹಾಜರಿ:

ಶಿಲಾನ್ಯಾಸ ಹಾಗೂ ಎಳನೀರು ಬ್ರಹ್ಮಸ್ಥಾನ ದೇಗುಲ ಬಳಿ ಹಮ್ಮಿಕೊಂಡಿದ್ದ ಸಭಾಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವ್ಯಾಪ್ತಿಯ ಜನಪ್ರತಿನಿಧಿಗಳೂ ಭಾಗವಹಿಸಿದ್ದು ವಿಶೇಷವಾಗಿತ್ತು. ಕಳಸ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸುವ ಜೊತೆಗೆ ಹಲವು ವರ್ಷಗಳಿಂದ ಚಿಕ್ಕಮಗಳೂರು ಹಾಗೂ ದ.ಕ. ಜಿಲ್ಲೆಯನ್ನು ಬೆಸೆಯುವ ಅತೀ ಸಮೀಪದ ಹಾದಿ ಗ್ರಹಣಮುಕ್ತವಾದುದನ್ನು ಮುಕ್ತವಾಗಿ ಪ್ರಶಂಸಿಸಿದರು.

 

 

 

ಬೆಳ್ತಂಗಡಿಯ ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ:

 

ಶಾಸಕ ಹರೀಶ್ ಪೂಂಜ ಅವರು ಬುಧವಾರ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳನೀರು ಶಾಸಕರಿಂದ 11 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿದರು.

 

 

ಬಂಗಾರ ಪಲ್ಕೆ ಬಳಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಎಳನೀರು ಪರಿಸರದ ಜನರ ಅನುಕೂಲಕ್ಕಾಗಿ ಪಶ್ಚಿಮವಾಹಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸೇತುವೆ ಸಹಿತ ಕಿಂಡಿ ಅಣೆಕಟ್ಟು, 5 ಕೋಟಿ ರೂ. ವೆಚ್ಚದಲ್ಲಿ ದಿಡುಪೆ-ಎಳನೀರು-ಸಂಸೆ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ,

 

 

50 ಲಕ್ಷ ರೂ. ವೆಚ್ಚದಲ್ಲಿ ಎಳನೀರು ಪ.ಪಂಗಡದ ಕಾಲನಿ ರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 13 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾದ ಗುತ್ಯಡ್ಕ ಅಂಗನವಾಡಿ ಉದ್ಘಾಟನೆ, 8 ಲಕ್ಷ ರೂ. ವೆಚ್ಚದ ಬ್ರಹ್ಮ ಸ್ಥಾನ ಬಳಿ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ, 10 ಲಕ್ಷ ರೂ. ಅನುದಾನದಲ್ಲಿ ಕುರೆಕಲ್ ರಸ್ತೆ ಕಾಂಕ್ರಿಟೀಕರಣ,

 

 

 

10 ಲಕ್ಷ ರೂ. ವೆಚ್ಚದ ಬಂಗಾರಪಲ್ಕೆ ರಸ್ತೆ ಕಾಂಕ್ರಿಟೀಕರಣ, 10 ಲಕ್ಷ ರೂ. ಅನುದಾನದ ಗುತ್ಯಡ್ಕ ಶಾಲೆಯ ರಸ್ತೆ ಕಾಂಕ್ರಿಟೀಕರಣ, 9 ಲಕ್ಷ ರೂ. ಬಡಮನೆ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟನೆ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. 150 ಮನೆ, 600ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಎಳನೀರು ಪ್ರದೇಶಕ್ಕೆ ಸದ್ಯ ಕಿಂಡಿ ಅಣೆಕಟ್ಟು, ಸೇತುವೆ, ರಸ್ತೆ ಅಭಿವೃದ್ಧಿಯ ಕುರಿತು ಕೊನೆಗೂ ಭರವಸೆ ಲಭಿಸಿದ್ದು, ಅಗತ್ಯ ಕಾಮಗಾರಿಗಳಿಗೆ ಚಾಲನೆ ದೊರೆತಿದೆ.

 

 

 

ಮುಂದಿನ ಹಂತದಲ್ಲಿ ಹಕ್ಕುಪತ್ರ ವಿತರಣೆ, ವಿದ್ಯುತ್ ಸೌಲಭ್ಯ ಸೇರಿದಂತೆ ಎಳನೀರಿನ ಉಳಿದ ಸಮಸ್ಯೆಗಳು ಹಾಗೂ ರಸ್ತೆ ಕಾಮಗಾರಿ ನಡೆಸುವ ಕುರಿತು ಶಾಸಕರು ಭರವಸೆ ನೀಡಿರುವುದು ಜನರಲ್ಲಿ ಹರ್ಷದ ವಾತಾವರಣ ಮೂಡಿಸಿದೆ.

 

 

ಕಾರ್ಯಕ್ರಮದಲ್ಲಿ ಮಲವಂತಿಗೆ ಗ್ರಾಪಂ ಅಧ್ಯಕ್ಷೆ ಅನಿತಾ ಕೆ,ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ,ನಾವೂರು ಗ್ರಾಪಂ ಅಧ್ಯಕ್ಷ ಗಣೇಶ ಗೌಡ,ಕಳಸ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ನಾಗಭೂಷಣ್,ಮಲವಂತಿಗೆ ಗ್ರಾಪಂ ಉಪಾಧ್ಯಕ್ಷ ದಿನೇಶ್ ಗೌಡ,ಸದಸ್ಯೆ ರೋಹಿಣಿ,ಆದಿನಾಥ ಸಂಘದ ಅಧ್ಯಕ್ಷ ಫಣೀಂದ್ರ ಜೈನ್,ಮುಖಂಡರಾದ ಶೇಷಗಿರಿ,ಕೇಶವ ದಿಡುಪೆ,ಪ್ರಮೋದ್ ದಿಡುಪೆ,ಸುಬ್ರಹ್ಮಣ್ಯ ಗುತ್ಯಡ್ಕ,ವಿಜಯ್ ಬಡಮನೆ, ಸಣ್ಣ ನೀರಾವರಿ ಇಲಾಖೆಯ ಎ.ಇ. ಡಾ.ಆನಂದ ಬಂಜನ್,ಯೋಜನಾ ವಿಭಾಗದ ಎ.ಇ. ಉದಯಕುಮಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಮಲವಂತಿಗೆ ಪಂಚಾಯಿತಿ ಸದಸ್ಯ ಎಳನೀರು  ಪ್ರಕಾಶ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಟಿ.ಮೋರ್ಚಾ ತಾಲೂಕು ಅಧ್ಯಕ್ಷ ಹರೀಶ್ ಎಳನೀರು ಸ್ವಾಗತಿಸಿದರು.ರತ್ನಾಕರ ವಂದಿಸಿದರು.

error: Content is protected !!