ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮಾ. 1ರಂದು ಮಂಗಳವಾರ ಶಿವರಾತ್ರಿ ವಿಶೇಷ ದಿನವಾಗಿದ್ದು ಅಂದು ನಾಡಿನೆಲ್ಲೆಡೆಯಿಂದ ಭಕ್ತಾದಿಗಳು ಆಗಮಿಸಲಿದ್ದಾರೆ. ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾದಯಾತ್ರೆಯಲ್ಲಿ ಬರುವ ಕುರಿತು ಧರ್ಮಸ್ಥಳಕ್ಕೆ ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮೊದಲಾದ ಊರುಗಳಲ್ಲಿ ಧರ್ಮಸ್ಥಳ ಪಾದಯಾತ್ರಿಗಳ ಸಂಘದ ಆಶ್ರಯದಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಪಾದಯಾತ್ರೆ ಈಗಾಗಲೇ ಆರಂಭಿಸಿದ್ದು ಸೋಮವಾರ ಉಜಿರೆಗೆ ತಲುಪಲಿದ್ದಾರೆ. ಮಂಗಳವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಪಾದಯಾತ್ರೆಯಲ್ಲಿ ಜೊತೆಗೆ ಭಜನೆ, ಪ್ರಾರ್ಥನೆ ಮಾಡುತ್ತಾ ಆಗಮಿಸುತ್ತಾರೆ. ಧರ್ಮಸ್ಥಳದಲ್ಲಿ ಪ್ರವೇಶ ದ್ವಾರದ ಬಳಿ ಪಾದಯಾತ್ರಿಗಳಿಗಾಗಿ ಸ್ವಾಗತ ಕಛೇರಿ ತೆರೆಯಲಾಗಿದ್ದು, ಅಲ್ಲಿ ಸ್ವಯಂಸೇವಕರು, ವೈದ್ಯರು, ದಾದಿಯರು ಪಾದಯಾತ್ರಿಗಳ ಸ್ವಾಗತ ಮತ್ತು ಸೇವೆಗಾಗಿ ಸಿದ್ಧರಿದ್ದಾರೆ. ಉಚಿತ ಪಾನೀಯ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಜಿರೆಯಲ್ಲಿರುವ ಎಸ್.ಡಿ.ಎಂ. ಆಸ್ಪತ್ರೆ ನೇತೃತ್ವದಲ್ಲಿ ಸಂಚಾರಿ ಆಸ್ಪತ್ರೆ, ವೈದ್ಯಕೀಯ ಶಿಬಿರ, ಉಚಿತ ಶುಶ್ರೂಷೆ, ಅಂಬುಲೆನ್ಸ್ ಸೇವೆ ಸದಾ ಲಭ್ಯವಿದೆ.
ಬೆಂಗಳೂರಿನ ಖ್ಯಾತ ವೈದ್ಯ ಡಾ. ಕೆ.ಎಲ್. ಪಂಚಾಕ್ಷರಿ ನೇತೃತ್ವದಲ್ಲಿ ಡಾ. ನಾಗರಾಜು, ಡಾ. ಮಂಜುನಾಥ್, ಮತ್ತು ಡಾ. ರೇಣುಕಾ ಸ್ವಯಂ ಪ್ರೇರಣೆಯಿಂದ ಉಚಿತ ವೈದ್ಯಕೀಯ ಸೇವೆ ನೀಡಲಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಗೆ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಅಹೋ ರಾತ್ರಿ ಭಕ್ತಾದಿಗಳು ಶಿವಪಂಚಾಕ್ಷರಿ ಪಠಣ, ಭಜನೆ ಹಾಡುವರು.
ದೇವಸ್ಥಾನದಲ್ಲಿ ನಾಲ್ಕು ಜಾವಗಳಲ್ಲಿ ಭಕ್ತರಿಂದ ವಿಶೇಷವಾಗಿ ಶತರುದ್ರಾಭಿಷೇಕ ಸೇವೆ ನಡೆಯಲಿದೆ. ಶಂಖ, ಕೊಂಬು, ಕಹಳೆ, ಮೊದಲಾದ ಜಾನಪದ ಕಲಾವಿದರು ಆಗಮಿಸಿ ಕಲಾ ಸೇವೆ ನಡೆಸಲಿದ್ದಾರೆ.