ಬೆಳ್ತಂಗಡಿ:ದೇಶದ ಅನ್ನ , ನೀರು ಕುಡಿದು ದೇಶದ ಸಂವಿಧಾನದ ಪ್ರಕಾರ ನ್ಯಾಯಾಧೀಶ ಹುದ್ದೆ ಪಡೆದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತಿರಸ್ಕರಿಸುವ ಮೂಲಕ ದೇಶದ್ರೋಹಿ ಕೆಲಸ ಮಾಡಿದ್ದು , ತಕ್ಷಣ ಆತನನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಒತ್ತಾಯಿಸಿದರು.
ಅವರು ದಸಂಸ ( ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಶಾಖೆ ನೇತೃತ್ವದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನಡೆಸುವ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ತಿರಸ್ಕರಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಓರ್ವ ನ್ಯಾಯಾಧೀಶನಾಗಿರುವ ಮಲ್ಲಿಕಾರ್ಜುನ ಗೌಡ ಜಾತಿ ತಾರತಮ್ಯದ ಕಾರಣಕ್ಕಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ತಿರಸ್ಕರಿಸಿದ್ದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಈ ಬಗ್ಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ದಸಂಸ (ಅಂಬೇಡ್ಕರ್ ವಾದ) ದ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಮಾತನಾಡುತ್ತಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ವಿರೋಧಿಸುವವರು ದೇಶದಲ್ಲಿ ವಾಸಿಸಲು ಅನರ್ಹ. ಅತನ ಮೇಲೆ ದೇಶದ್ರೋಹದ ಆರೋಪದಡಿ ಕೇಸ್ ದಾಖಲಿಸಿ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ದಸಂಸ ( ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ಮಾತನಾಡುತ್ತಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ದೇಶದ್ರೋಹಿ ಕೆಲಸವನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯ ಹೈಕೋರ್ಟ್ ಮಧ್ಯ ಪ್ರವೇಶಿಸಿ ತಕ್ಷಣ ಸೇವೆಯಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಇಡೀ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಸಿದರು .
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಮಾತನಾಡಿ ನಮ್ಮ ರಾಜ್ಯದ ನ್ಯಾಯಾಧೀಶರೊರ್ವರ ದೇಶದ್ರೋಹಿ ಕೆಲಸದಿಂದ ಇಡೀ ನ್ಯಾಯಾಂಗ ವ್ಯವಸ್ಥೆಯೇ ತಲೆ ತಗ್ಗಿಸುವಂತಾಗಿದೆ. ಸಂವಿಧಾನ ಆಶಯಗಳನ್ನು ಒಪ್ಪಿ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿ ಇದೀಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಜಾತಿಯ ಕಾರಣಕ್ಕಾಗಿ ತಿರಸ್ಕರಿಸಿದ್ದನ್ನು ಸಹಿಸಲು ಅಸಾಧ್ಯ ಎಂದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಮೂರು ಮಾರ್ಗದ ತನಕ ಮಲ್ಲಿಕಾರ್ಜುನ ಗೌಡ ನ ಶವ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರತಿಕೃತಿಯನ್ನು ದಹಿಸಿ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆತಡೆ ತೆರವು ಸಂದರ್ಭದಲ್ಲಿ ಪ್ರತಿಭಟನಾಕಾರರು, ಪೋಲಿಸರ ನಡುವೆ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆಯಿತು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಉಪ ತಹಶೀಲ್ದಾರ್ ರವಿ ಕುಮಾರ್ ಅವರ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ದಸಂಸ ಮುಖಂಡರಾದ ಬಿ.ಕೆ ವಸಂತ್ , ನೇಮಿರಾಜ್ ಕಿಲ್ಲೂರು , ಶೇಖರ್ ಕುಕ್ಕೇಡಿ , ವೆಂಕಣ್ಣ ಕೊಯ್ಯೂರು , ಜಯಾನಂದ ಕೊಯ್ಯೂರು , ನಾರಾಯಣ ಪುದುವೆಟ್ಟು , ಶ್ರೀಧರ ಕಳೆಂಜ , ಬೇಬಿ ಸುವರ್ಣ , ನಾಗರಾಜ್ ಲಾಯಿಲ , ಶೇಖರ್ ಕಣಿಯೂರು , ಹರೀಶ್ ಕುಮಾರ್ ಲಾಯಿಲ , ಶೇಖರ್ ವೇಣೂರು ,ಶ್ರೀನಿವಾಸ ಉಜಿರೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.