ಬೆಳ್ತಂಗಡಿ: ‘ಭಾರತೀಯ ಸಾಹಿತ್ಯ ಪರಿಷತ್ತಿನ ಮೂರನೇ ರಾಜ್ಯ ಮಟ್ಟದ ಸಮ್ಮೇಳನ ಜ. 8 ಮತ್ತು 9 ರಂದು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದೆ’ ಎಂದು ಸಮ್ಮೇಳನದ ಸ್ವಾಗತ ಸಮಿತಿ ಸಹ ಸಂಚಾಲಕ ಡಾ. ರವಿ ಎಂ.ಎನ್ ಹೇಳಿದರು.
ಅವರು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ ಪರಿಕಲ್ಪನೆಯಡಿ ನಡೆಯಲಿರುವ ಈ ಸಾಹಿತ್ಯೋತ್ಸವದಲ್ಲಿ ವಿವಿಧ ಗೋಷ್ಠಿಗಳು, ಕವಿ ಸಮ್ಮೇಳನ, ಪುಸ್ತಕ ಪ್ರದರ್ಶನ ಮಾರಾಟ, ವಸ್ತು ಪ್ರದರ್ಶನ ಮಳಿಗೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳ ರಸದೌತಣ ನಡೆಯಲಿದೆ ಎಂದರು.
ಜ. 8ರಂದು ಬೆಳಗ್ಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧಿವೇಶನವನ್ನು ಉದ್ಘಾಟಿಸಲಿದ್ದು, ಸಾಹಿತಿ ಡಾ.ನಾ. ಮೊಗಸಾಲೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ ಎಂದರು.
ವಸ್ತು ಪ್ರದರ್ಶನವನ್ನು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಪರಿಚಯವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ಪುಸ್ತಕ ಪ್ರಕಟಣೆ ಬಗ್ಗೆ ಮಾಹಿತಿಯನ್ನು ರಾಜ್ಯ ಸಹಕಾರ್ಯದರ್ಶಿ ಕ.ವೆಂ.ನಾಗರಾಜ ನೀಡಲಿದ್ದಾರೆ. ರಾಜ್ಯಾಧ್ಯಕ್ಷ ಪ್ರೊ.ಪ್ರೇಮ ಶೇಖರ ಸಮ್ಮೇಳನದ ಕುರಿತು ಅವಲೋಕನ ಮಾತುಗಳನ್ನಾಡಲಿದ್ದಾರೆ ಎಂದು ತಿಳಿಸಿದರು.
ಸಂಜೆ 4.30 ರಿಂದ 6 ಗಂಟೆಯವರೆಗೆ ನಡೆಯುವ ಗೋಷ್ಠಿಯಲ್ಲಿ ಸಾಹಿತ್ಯ ಪರಿಚಾರಕ ಹರ್ಷವರ್ಧನ ಶೀಲವಂತ, ಅಂಕಣಕಾರ ರೋಹಿತ್ ಚಕ್ರತೀರ್ಥ ಉಪನ್ಯಾಸ ನೀಡಲಿದ್ದು ವಿಮರ್ಶಕಿ ಡಾ.ಎನ್.ಆರ್.ಲಲಿತಾಂಬಾ ಅವಲೋಕನಗೈಯಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ರಾಜ್ಯದೆಲ್ಲೆಡೆಯ ವಿವಿಧ ತಂಡಗಳಿಂದ ನಡೆಯುವ ಸಾಂಸ್ಕತಿಕ ಕಾರ್ಯಕ್ರಮವನ್ನು ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ ಎಂದರು.
ಜನವರಿ 9ರಂದು ಬೆಳಗ್ಗೆ ಸಮನ್ವಯ ಕವಿ ಸಮ್ಮಿಲನದಲ್ಲಿ ಸೂರ್ಯ ಹೆಬ್ಬಾರ್ ಬೆಂಗಳೂರು, ಸುಜಾತಾ ಹೆಗಡೆ ಉಮ್ಮಚಿಗಿ, ಅನಿತಾ ಪೂಜಾರಿ ಮುಂಬೈ, ತನ್ಮಯಿ ಪ್ರೇಮಕುಮಾರ್ ಚಿಕ್ಕಮಗಳೂರು, ವೆಂಕಟೇಶನಾಯಕ ಮಂಗಳೂರು, ವಿದ್ಯಾಶ್ರೀ ಅಡೂರು ಮುಂಡಾಜೆ, ಸೋಮಶೇಖರ ಕೆ ತುಮಕೂರು, ಪೂರ್ಣಿಮಾ ಸುರೇಶ ಹಿರಿಯಡಕ, ಹೃತ್ಪೂರ್ವಕ ಕೋರ್ನ ಮಡಿಕೇರಿ, ಚಿನ್ಮಯ ಬೆಂಗಳೂರು, ಸುಭಾಷಿಣಿ ಬೆಳ್ತಂಗಡಿ, ಅಣ್ಣಪ್ಪ ಅರಬಗಟ್ಟೆ ತೀರ್ಥಹಳ್ಳಿ, ಮಾಣಿಮಾಡ ಜಾನಕೀ ಮಾಚಯ್ಯ ಮಡಿಕೇರಿ, ಸುಷ್ಮಾ ಗುರುಪುತ್ರ ಗೋಕಾಕ, ಡಾ.ಸ್ನೇಹಾ ಫಾತರಪೇಕರ ಅಂಕೋಲ, ವೀರೇಶ ಬಿ.ಅಜ್ಜಣ್ಣನವರ್ ಹರಿಹರ, ಡಾ.ಮೀನಾಕ್ಷಿ ರಾಮಚಂದ್ರ ಮಂಗಳೂರು ಮತ್ತು ಪರಿಣಿತ ರವಿ ಎರ್ನಾಕುಲಂ ಸ್ವರಚಿತ ಕವಿತೆ ವಾಚನ ಮಾಡಲಿದ್ದಾರೆ. ಕವಿಯತ್ರಿ ಪ್ರೊ.ಸುಮಾ ವಸಂತ ಸಾವಂತ್ ಅವಲೋಕನಗೈಯಲಿದ್ದಾರೆ ಎಂದರು.
ಬೆಳಗ್ಗೆ 11.30 ರಿಂದ ನಡೆಯುವ ‘ಕನ್ನಡ ನುಡಿಯಲ್ಲಿ ಸ್ವಾತಂತ್ರ್ಯ’ ಗೋಷ್ಠಿಯಲ್ಲಿ ಅಂಕಣಕಾರ ಡಾ. ರೋಹಿಣಾಕ್ಷ ಶಿರ್ಲಾಲು, ಉಪನ್ಯಾಸಕಿ ಪವಿತ್ರಾ ಮೃತ್ಯುಂಜಯಸ್ವಾಮಿ ಉಪನ್ಯಾಸ ನೀಡಲಿದ್ದು ಅಂಕಣಕಾರ ಪ್ರಭಾಕರ ಕಾರಂತ ಅವಲೋಕನಗೈಯಲಿದ್ದಾರೆ . ಮಧ್ಯಾಹ್ನ 2.30 ರಿಂದ 4ಗಂಟೆಯವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪ್ರೊ.ಪ್ರೇಮ ಶೇಖರ ಮತ್ತು ಸಾಹಿತಿ ಡಾ.ನಾ ಮೊಗಸಾಲೆ ಉಪಸ್ಥಿತರಿದ್ದು, ಮೈಸೂರು ಆಕಾಶವಾಣಿಯ ದಿವಾಕರ ಹೆಗಡೆ ಸಮಾರೋಪ ಭಾಷಣ ಮಾಡುವರು. ಸಮಸ್ತ ಭಾರತೀಯ ಭಾಷೆಗಳ ನಡುವೆ ಸೌಹಾರ್ದ ಭಾವವನ್ನು ಜಾಗೃತಗೊಳಿಸುವ ಧ್ಯೇಯೋದ್ದೇಶ ಈ ಸಮಾವೇಶದ್ದಾಗಿದೆ. ಸಾಹಿತ್ಯಾಭಿಮಾನಿಗಳಿಗೆ ಪ್ರತಿನಿಧಿಗಳಿಗೆ ಊಟೋಪಚಾರ, ವಸತಿ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಶರತ್ ಕೃಷ್ಣ ಪಡಿವೆಟ್ನಾಯ, ಕಾರ್ಯದರ್ಶಿ ಕೆ.ಪ್ರಕಾಶ್ ನಾರಾಯಣ್, ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ರಮೇಶ್ ಮಯ್ಯ, ಮಾಧ್ಯಮ ಸಮಿತಿ ಸಂಚಾಲಕ ಡಾ.ಭಾಸ್ಕರ ಹೆಗಡೆ, ಕೋಶಾಧಿಕಾರಿ ಕೇಶವ ಭಟ್ ಇದ್ದರು.