ಬೆಳ್ತಂಗಡಿ: ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ಸ್ಥಳೀಯಾಡಳಿತ ಸಂಸ್ಥೆಗಳ 25 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತಿದೆ.
ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಘಟಾನುಘಟಿ ನಾಯಕರು ಚುನಾವಣಾ ಕ್ಷೇತ್ರಗಳಿಂದ ಹೊರಬಂದಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ, ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಪ್ರಚಂಡ ಮತಗಳಿಂದ ಗೆಲುವು :ಹರೀಶ್ ಪೂಂಜ
ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ನಗರ ಪಂಚಾಯತ್ ನಲ್ಲಿ ಮತ ಚಲಾಯಿಸಿದರು.ನಂತರ ಪ್ರತಿಕ್ರಿಯೆ ನೀಡಿದ ಅವರು ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯ ವಿಧಾನ ಪರಿಷತ್ ಗೆ ಆಯ್ಕೆಯಾಗುವ ಮೂಲಕ ರಾಜ್ಯದ ಅನೇಕ ಸಚಿವ ಪದವಿಯನ್ನು ಸಚಿವ ಸಂಪುಟದ ಸಹದ್ಯೋಗಿಯಾಗಿ ಸದಸ್ಯರಾಗಿ ಕೆಲಸವನ್ನು ನಿರ್ವಹಿಸಿರುತ್ತಾರೆ ರಾಜ್ಯ ಕಂಡ ಸರಳ ಪ್ರಾಮಾಣಿಕ ಸಜ್ಜನ ರಾಜಕಾರಣಿಯಾದ ಅವರು ಪ್ರಚಂಡ ಬಹುಮತಗಳಿಂದ ಮತ್ತೊಮ್ಮೆ ವಿಧಾನ ಪರಿಷತ್ ಗೆ ಆಯ್ಕೆಯಾಗುವುದು ಖಚಿತ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲೂ ಅತ್ಯಧಿಕ ಮತಗಳನ್ನು ಪಡೆದು ಶೇ 90 ಮತಗಳು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಿಗುತ್ತದೆ ಎಂಬ ಭರವಸೆ ಇದೆ.ಅದ್ದರಿಂದ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಪ್ರಚಂಡ ಗೆಲುವನ್ನು ಸಾಧಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಣದಲ್ಲಿರುವ ಅಭ್ಯರ್ಥಿಗಳೆಷ್ಟು?
25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 89 ಮಂದಿ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಚಿಕ್ಕಮಗಳೂರು ಕ್ಷೇತ್ರದಿಂದ ಒಬ್ಬ ಮಹಿಳಾ ಅಭ್ಯರ್ಥಿ ಮಾತ್ರ ಕಣದಲ್ಲಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದಾರೆ.
ಮತ ಎಣಿಕೆ
ಡಿಸೆಂಬರ್ 14ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. 20 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಡಿಸೆಂಬರ್ 16ಕ್ಕೆ ಪರಿಷತ್ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.