ಬೆಂಗಳೂರು: ಕಚೇರಿಯಲ್ಲಿ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿಯೊಂದಿಗೆ ಅಧಿಕಾರಿಯೊಬ್ಬರು ಅಸಭ್ಯ ವರ್ತನೆ ತೋರಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಫೋಟೊದಲ್ಲಿರುವ ವ್ಯಕ್ತಿ ಎನ್ನಲಾದ ದಕ್ಷಿಣ ಕನ್ನಡ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರತ್ನಾಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಫೋಟೋಗಳು ರಾಜ್ಯಾದ್ಯಂತ ವೈರಲ್ ಆಗಿತ್ತು. ವಿವಿಧ ಆಸ್ಪತ್ರೆ ಹಾಗೂ ಇಲಾಖೆಗಳ ಹೆಸರು ನಮೂದಿಸಿ ಊಹಾಪೋಹಗಳು ಉಂಟಾಗಿದ್ದವು. ದೌರ್ಜನ್ಯ ಆಗುತ್ತಿರುವ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಹಿಳಾ ಆಂತರಿಕ ದೂರು ಸಮಿತಿಯಲ್ಲೂ ದೂರು ಸ್ವೀಕೃತಿಯಾಗಿತ್ತು. ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಕುಷ್ಠರೋಗ ನಿವಾರಣಾಧಿಕಾರಿ ಕಚೇರಿಯಲ್ಲಿ ನಡೆದ ಘಟನೆ ಎಂದು ಬೆಳಕಿಗೆ ಬಂದಿದೆ.
ಫೋಟೋದಲ್ಲಿರುವ ಡಾ. ರತ್ನಾಕರ್ ಕಚೇರಿಯ 9 ಮಹಿಳಾ ಸಿಬ್ಬಂದಿಯೊಂದಿಗೆ ಇರುವ ಫೋಟೋದ ಗಂಭೀರತೆ ಅರಿತ ಸರ್ಕಾರ, ಶಿಸ್ತು ಕ್ರಮಕೈಗೊಂಡು ಅಮಾನತು ಆದೇಶ ಹೊರಡಿಸಿದೆ.
ಮಹಿಳಾ ಆಂತರಿಕ ದೂರು ಸಮಿತಿ ತನಿಖೆ ನಡೆಸಿದ್ದು, ಘಟನೆ ನಡೆದ ಕಚೇರಿಯ ಮಹಿಳಾ ಸಿಬ್ಬಂದಿಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮದ 2013ರ ಪ್ರಕಾರ ವೈದ್ಯಾಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಿದೆ. ತನಿಖಾ ವರದಿಗೆ ಜಿಲ್ಲಾಧಿಕಾರಿಗಳು ಪೂರಕ ದಾಖಲಾತಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಅವರ ವರದಿಯಂತೆ ಶಿಸ್ತುಕ್ರಮಕ್ಕಾಗಿ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ವೈದ್ಯಾಧಿಕಾರಿಯ ಕರ್ತವ್ಯ ನಿರ್ಲಕ್ಷ್ಯತೆ ಗಂಭೀರ ಸ್ವರೂಪದಲ್ಲಿದೆ ಹಾಗೂ ಸರ್ಕಾರಿ ನೌಕರರ ನಡೆಗೆ ಧಕ್ಕೆ ಬರುವಂತ ರೀತ ಕಂಡು ಬಂದ ಹಿನ್ನೆಲೆ ಶಿಸ್ತುಕ್ರಮ ಕೈಗೊಳ್ಳಲು ನಿರ್ಣಯಿಸಲಾಗಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಸಂಬಂಧಿಸಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಪಡಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶ ಹೊರಡಿಸಲಾಗಿದೆ.