ಭೋಜರಾಜ ಹೆಗ್ಡೆಯವರ ಮೌಲ್ಯಾಧಾರಿತ ಜೀವನ ಸಮಾಜಕ್ಕೆ ಮಾದರಿ: ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ: ಸಮಾಜಕ್ಕಾಗಿ ಹುಟ್ಟಿದವರು: ಶ್ರೀಧರ ಭಿಡೆ: ಬಾಲಾಪರಾಧಿಯಾಗಿದ್ದರಿಂದ ಜೈಲಿನಿಂದ ಬಿಡುಗಡೆಯಾಗಿದ್ದರು:‌ ಮಾಜಿ ಶಾಸಕ ವಸಂತ ಬಂಗೇರ: ಶತಾಯುಷಿಯಾಗಬೇಕಿತ್ತು: ಮಾಜಿ ಶಾಸಕ ಪ್ರಭಾಕರ ಬಂಗೇರ: ಸಾಹಿತ್ಯ ಜ್ಞಾನ ಹೊಂದಿದ್ದರು: ಕಸಾಪ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಬೆಳ್ತಂಗಡಿ ಗಾಂಧಿ ವಿಚಾರ ವೇದಿಕೆಯಿಂದ ಸ್ವತಂತ್ರ ಸೇನಾನಿ ಭೋಜರಾಜ ಹೆಗ್ಡೆ ಪಡಂಗಡಿಯವರಿಗೆ ನುಡಿನಮನ

 

 

ಬೆಳ್ತಂಗಡಿ: ಪ್ರಪಂಚದಿಂದ ಓರ್ವ ಶ್ರೇಷ್ಠ ಮೌಲ್ಯಾಧಾರಿತ ಜೀವನ ನಡೆಸಿದ ವ್ಯಕ್ತಿಯ ನಿರ್ಗಮನವಾಗಿದೆ. ಭೋಜರಾಜ ಹೆಗ್ಡೆಯವರು ಮೌಲ್ಯಾಧಾರಿತ ಜೀವನ ಸಾಧಿಸಿ ತೋರಿ ಸಮಾಜಕ್ಕೆ ಮಾದರಿಯಾದರು. ಅವರು ನಮ್ಮ ತಾಲೂಕು ಹಾಗೂ ದೇಶಕ್ಕೆ ತಮ್ಮ ಕೈಲಾದ ಸೇವೆ ಮಾಡಿದರು. 13 ವರ್ಷದಿಂದ ‘ಸೌಹಾರ್ದ ವೇದಿಕೆ’ ಸಕ್ರಿಯ ಸದಸ್ಯರಾಗಿ ತಾಲೂಕಿನಲ್ಲಿ ನಡೆಸಿಕೊಂಡು ಬರುತ್ತಿರುವ ‘ಶಾಂತಿ ನಡಿಗೆ’ ಕಾರ್ಯಕ್ರಮದಲ್ಲಿ 96ರ ಹರೆಯದಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ದೇವರು ಅವರಿಗೆ ಸದ್ಗತಿ ನೀಡಲಿ ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ನುಡಿದರು.
ಅವರು ಸರಕಾರಿ‌ ನೌಕರರ ಏಕತಾ ಭವನದಲ್ಲಿ ಮಂಗಳವಾರ ಗಾಂಧಿ ವಿಚಾರ ವೇದಿಕೆ ಬೆಳ್ತಂಗಡಿ ತಾಲೂಕು ಘಟಕದಿಂದ ಸ್ವತಂತ್ರ ಸೇನಾನಿ ಭೋಜರಾಜ ಹೆಗ್ಡೆ ಪಡಂಗಡಿ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿಯವರೊಂದಿಗೆ ಮಾತು:
ಗಾಂಧಿ ವಿಚಾರ ವೇದಿಕೆ ಮಾತೃ ಸಮಿತಿ ಸಂಸ್ಥಾಪಕ ಶ್ರೀಧರ ಜಿ. ಭಿಡೆ
ಮಾತನಾಡಿ, ಭೋಜರಾಜ ಹೆಗ್ಡೆ ಅವರು ಅವರಿಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಕಾರು, ಐಷಾರಾಮಿ ಜೀವನ ಮೊದಲಾದ ಆಡಂಬರದ ಜೀವನದ ಚಿಂತನೆಯೂ ಅವರಲ್ಲಿ ಇರಲಿಲ್ಲ. ಸದಾ ಸಮಾಜ ಸೇವೆ ಮಾಡುತ್ತಾ ಜೀವನ ಸಾಗಿಸಿದರು. ಅವರು ಸಮಾಜಕ್ಕಾಗಿಯೇ ಹುಟ್ಟಿದರು. ನಮಗಾಗಿ, ನಮ್ಮ ಅನುಕೂಲಕ್ಕಾಗಿ ಜೀವನ ಸಾಗಿಸಿದರು. ಯಾವುದೇ ಬೇಧವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತಿದ್ದ ವಿಚಾರ ಎಲ್ಲರನ್ನೂ ಆಕರ್ಷಿಸುತ್ತಿತ್ತು. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಮೊದಲಾದ ರಾಜಕೀಯ ನಾಯಕರ ಒಡನಾಟವನ್ನೂ ಹೊಂದಿದ್ದರು‌. ಅವರೇ ತಿಳಿಸಿದಂತೆ ಒಂದು ಬಾರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಮಂಗಳೂರಿಗೆ ಆಗಮಿಸಿದ್ದ ವೇಳೆ ಸರ್ಕ್ಯೂಟ್ ಹೌಸ್ ನಲ್ಲಿ ಉಳಿದುಕೊಂಡಿದ್ದರು. ಭಾರತ ಸೇವಾದಳದಲ್ಲಿದ್ದ ಹಿನ್ನೆಲೆ ಭೋಜರಾಜ ಹೆಗ್ಡೆಯವರು ಶಾಸ್ತ್ರೀಯವರು ತಂಗಿದ ಕೊಠಡಿಬಳಿಯೇ ಇದ್ದರು‌. ರಾತ್ರಿ ಶಬ್ದ ಕೇಳಿಸಿಕೊಂಡ ಹಿನ್ನೆಲೆ ಶಾಸ್ತ್ರೀಯವರ ಕೊಠಡಿ ಬಾಗಿಲು ಬಡಿದು, ಶಬ್ದ ಕೇಳಿದ ಮಾಹಿತಿ ತಿಳಿಸಿದರು. ಆಗ ಶಾಸ್ತ್ರೀಯವರು ನನ್ನ ಬಳಿ ನಾಳೆಗೆ ಧರಿಸಲು ಬಟ್ಟೆ ಇಲ್ಲ, ಇಂದು ಹಾಕಿದ ಬಟ್ಟೆಯನ್ನೇ ಒಗೆದು ಫ್ಯಾನ್ ಕೆಳಗೆ ಹಾಕಿದ್ದೇನೆ‌, ಒಣಗದಿದ್ದರೆ ನಾಳೆ ಇಸ್ತ್ರಿ ಹಾಕಿಸಿ ತರಬೇಕು ಎಂದು ತಿಳಿಸಿದ್ದರು. ಎಂಬ ವಿಚಾರವನ್ನು ವಿವರವಾಗಿ ತಿಳಿಸಿದರು. ‌

 

 

ಮಾರ್ಚ್‌ನಲ್ಲಿ ನೂರು ವರ್ಷ ಪೂರೈಸುತ್ತಿದ್ದರು:

ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಮಂಗಳೂರಿಗೆ ಗಾಂಧಿಯವರು ಬರುವ ಸಂದರ್ಭದಲ್ಲಿ ಸ್ವಾತಂತ್ರ್ಯ‌ ಹೋರಾಟದಲ್ಲಿದ್ದರು. ಈ ಸಂದರ್ಭ ಜೈಲಿನ ಬಾಗಿಲವರೆಗೂ ಹೋದವರು ಬಾಲಾಪರಾಧಿ ಎಂಬ ಕಾರಣಕ್ಕೆ ಬಿಡುಗಡೆಯಾಗಿದ್ದರು.‌ ಆದ್ದರಿಂದ ತಾಂತ್ರಿಕವಾಗಿ ದಾಖಲೆ ಆಗದ್ದರಿಂದ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿ ಸಿಗುತ್ತಿರಲಿಲ್ಲ. ಅವರಿಗೆ ನಾನು ನೀವು 105 ವರ್ಷಗಳ ಬದುಕಬೇಕು ಎಂದಿದ್ದೆ. ಮಾರ್ಚ್‌ನಲ್ಲಿ ಅವರು ನೂರು ವರ್ಷವನ್ನು ಪೂರೈಸುತ್ತಿದ್ದರು‌. ಅಲ್ಲಿಯವರೆಗೆ ಬದುಕುತ್ತಾರೆ ಎಂಬ ನಂಬಿಕೆಯೂ ನಮ್ಮಲ್ಲಿತ್ತು, ಆದರೆ ವಿಧಿ ಬೇರೇಯದೇ ಚಿಂತನೆ ನಡೆಸಿತ್ತು.

ಊಟದ ಸಂದರ್ಭ ಮಾತನಾಡುತ್ತಿರಲಿಲ್ಲ:

ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ, ಗಾಂಧಿಯವರ ತತ್ವ ಅಳವಡಿಸಿಕೊಳ್ಳುವ ಜೊತೆಗೆ ವಸ್ತ್ರವೂ ಅದೇ ಶೈಲಿಯಲ್ಲಿ ಇತ್ತು. ಯಾರೇ ಜೈನ ಮುನಿಗಳು ತಾಲೂಕಿಗೆ ಆಗಮಿಸಿದರೂ ಅವರು ತಾಲೂಕಿನಿಂದ ನಿರ್ಗಮಿಸುವವ ವರೆಗೆ ಅವರ ಪರಿಚಾರಿಕೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಅವರು ಊಟದ ಸಂದರ್ಭದಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಕೆಣಕಿ ಮಾತನಾಡಲು ಯತ್ನಿಸಿದರೂ ಪ್ರಯತ್ನ ವಿಫಲವಾಗುತ್ತಿತ್ತು. ಊಟದ ಮುಗಿದ ಬಳಿಕವಷ್ಟೇ ಮಾತನಾಡುತ್ತಿದ್ದರು. ಅವರ ಜೀವನ ಶೈಲಿ ಅನುಕರಣೀಯವಾಗಿದ್ದು, ಶತಾಯುಷಿಯಾಗಬೇಕಿತ್ತು ಎಂದರು.

ಸಾಹಿತ್ಯ ಪ್ರೇಮಿಯಾಗಿದ್ದರು:

ಕನ್ನಡ ಸಾಹಿತ್ಯ ಪರಿಷತ್ ‌ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮಾತನಾಡಿ, ಭೋಜರಾಜ ಹೆಗ್ಡೆಯವರಿಗೆ ಸಾಹಿತ್ಯದ ಬಗ್ಗೆ ಅಪಾರ ಜ್ಞಾನವಿತ್ತು. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿಯೂ ಭಾಗವಹಿಸಿದ್ದರು. ಉಪನ್ಯಾಸಗಳ ಕುರಿತು ಚರ್ಚೆ, ಸಾಹಿತ್ಯ ವಿಮತ್ಶೆಯನ್ನೂ ಮಾಡುತ್ತಿದ್ದರು. ಅದೇ ರೀತಿ ಪುಸ್ತಕಗಳನ್ನೂ ಕೊಡುಗೆಯಾಗಿ ನೀಡುತ್ತಿದ್ದರು. ಅವರ ಜೀವನದ ಶಿಸ್ತು, ಆದರ್ಶ ಮಾದರಿಯಾಗಿದೆ ಎಂದರು. ‌
ಮಾಜಿ ಸೈನಿಕರ ಸಂಘದ ತಾ.‌ಕೋಶಾಧಿಕಾರಿ ಜಗನ್ನಾಥ ಶೆಟ್ಟಿ, ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ‌ ಜಿಲ್ಲಾ ಸಂ.ಕಾರ್ಯದರ್ಶಿ ಕಾಂಚೋಡು ಗೋಪಾಲಕೃಷ್ಣ ಭಟ್, ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಶ್ರೀ ಮಹಾಮ್ಮಾಯಿ ಸೇವಾ ಸಂಘ ಲಾಯಿಲ ಅಧ್ಯಕ್ಷ ಈಶ್ವರ ಭೈರ, ಹಿರಿಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಶಶಿಕಿರಣ್ ಜೈನ್, ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ಲಾಯಿಲ, ದಲಿತ ಸಂಘರ್ಷ ಸಮಿತಿ ಸಂಚಾಲಕ ನೇಮಿರಾಜ್ ಕಿಲ್ಲೂರು, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ವಿಶ್ವಕರ್ಮ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಸತೀಶ್ ಆಚಾರ್ಯ, ಕಾರ್ಮಿಕ ಹೋರಾಟಗಾರ ಬಿ‌.ಎಮ್ ಭಟ್, ಜೈನ್ ಮಿಲನ್ ಅಧ್ಯಕ್ಷ ಶಾಂತಿರಾಜ್ ಜೈನ್, ತಾ.‌ ಕರ್ನಾಟಕ ಮುಸ್ಲಿಂ ಜಮಾಅತ್ ಮಾಧ್ಯಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಮೊದಲಾದವರು ತಮ್ಮ ಸಂಘಟನೆ ಮತ್ತು ಸಮುದಾಯವನ್ನು ಪ್ರತಿನಿಧಿಸಿ ನುಡಿನಮನ, ಪುಷ್ಪ ನಮನ ಸಲ್ಲಿಸಿದರು.

ನಿರ್ಣಯ:

ನುಡಿನಮನ ಕಾರ್ಯಕ್ರಮದ ಬಳಿಕ ಅವರ ಭಾವಚಿತ್ರವನ್ನು ಮತ್ತು ಶ್ರದ್ಧಾಂಜಲಿ ನಿರ್ಣಯವನ್ನು‌ ಕಾರ್ಯಕ್ರಮದಲ್ಲಿ ಪಡೆಯಲಾಯಿತು. ಬಳಿಕ ಭೋಜರಾಜ್ ಹೆಗ್ಡೆ ಅವರ ಪುತ್ರಿ ವೀಣಾ, ಸೊಸೆ ಹಾಗೂ ಪತ್ನಿಯ ಸಹೋದರಿ(ನಾದಿನಿ) ಅವರ ಕೈಗೆ ಅವರ ಪಡಂಗಡಿ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ತಾಲೂಕು ಸಂಘದ ಕಾರ್ಯಾಧ್ಯಕ್ಷ ದೇವಿಪ್ರಸಾದ್, ಮಾತೃ ಸಮಿತಿ ಸದಸ್ಯರಾದ ಹರಿಪ್ರಸಾದ್ ಹೊಸಂಗಡಿ, ಅಶ್ರಫ್ ಆಲಿಕುಂಞಿ ಮುಂಡಾಜೆ ನಿಯೋಗದಲ್ಲಿದ್ದರು.
ಮಂಜುಳಾ ಡಿ. ಪ್ರಸಾದ್ ‘ರಘುಪತಿ ರಾಜಾರಾಂ’ ಗಾಯನ‌ ನಡೆಸಿದರು. ಜಾನಪದ ಕಲಾವಿದ ಹೆಚ್. ಕೃಷ್ಣಯ್ಯ ಲಾಯಿಲ ಸೌಹಾರ್ದ ಹಾಡು ಹಾಡಿದರು.
ಕಾರ್ಯಕ್ರಮ ಪ್ರಧಾನ ಸಂಯೋಜಕ, ಗಾಂಧಿ ವಿಚಾರವೇದಿಕೆ ಕಾರ್ಯಾಧ್ಯಕ್ಷ ದೇವಿಪ್ರಸಾದ್ ಪ್ರಸ್ತಾವನೆಗೈದರು. ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಶಿಕ್ಷಕ‌ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: Content is protected !!