ಕಾನೂನಿನ ಚೌಕಟ್ಟಿನಲ್ಲಿ ಯಾರಿಗೂ ಅನ್ಯಾಯವಾಗಬಾರದು.: ಸತೀಶ್ ಕೆ.ಜಿ.ಗುರುದೇವ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟನೆ.

 

ಬೆಳ್ತಂಗಡಿ: ‘ಕಾನೂನಿನ ಚೌಕಟ್ಟಿನಲ್ಲಿ ಯಾರಿಗೂ ಅನ್ಯಾಯವಾಗಬಾರದು. ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬರಿಗೂ ಉಚಿತ ಕಾನೂನು ಸೇವೆ ಸಿಗುತ್ತದೆ. ಮಹಿಳೆಯರಿಗೆ ವಿಶೇಷ ಕಾನೂನು ರಚನೆಯಾಗಿದ್ದು, ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಪ್ರಬಲವಾಗಿ ಪ್ರತಿಪಾದಿಸಬೇಕು’ ಎಂದು ಬೆಳ್ತಂಗಡಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಸತೀಶ್ ಕೆ. ಜಿ. ಹೇಳಿದರು.

ಅವರು ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬೆಳ್ತಂಗಡಿ, ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಭಾರತ ರಾಷ್ಟ್ರಾದ್ಯಂತ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

 

 

ಪ್ರತಿಯೊಬ್ಬರೂ ಯಾವುದೇ ತಪ್ಪನ್ನು ಮಾಡುವ ಮುನ್ನ ಯೋಚನೆ ಮಾಡಬೇಕು. ಪ್ರತಿ ತಪ್ಪಿಗೂ ಕಾನೂನಿನ ಅಡಿಯಲ್ಲಿ ಶಿಕ್ಷೆಗಳಿವೆ. ಮಹಿಳೆಯರಿಗೆ ತಿಳಿಯದ ಹಾಗೆ ಫೋಟೋ ತೆಗೆದರೆ ಕಾನೂನಿನ ಪ್ರಕಾರ ಅಪರಾಧವಾಗಿದ್ದು ಅದಕ್ಕೆ ಸೂಕ್ತ ಶಿಕ್ಷೆ ನೀಡಲಾಗುತ್ತದೆ’ ಎಂದರು.ಸಂಪನ್ಮೂಲ ವ್ಯಕ್ತಿ, ಮಂಗಳೂರು ಸೆನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುರೇಶ್ ಜಿ ನಾಯಕ್ ಸೈಬರ್ ಅಪರಾಧಗಳ ತಡೆಯುವ ಬಗ್ಗೆ ಮಾಹಿತಿ ನೀಡಿ, ‘ನಮ್ಮಿಂದ ಅಪರಾಧ ನಡೆಯದಿದ್ದರೂ ನಾವು ಸೈಬರ್ ಕ್ರೈಂ ಬಗ್ಗೆ ತಿಳಿದುಕೊಂಡಿರಬೇಕು. ಮೊಬೈಲ್ ಗೆ ಬರುವ ಅನಪೇಕ್ಷಿತ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು. ಅನಾಮಿಕರು ಕಳುಹಿಸಿದ ಲಿಂಕ್ ಡೌನ್‌ಲೋಡ್ ಮಾಡಕೂಡದು. ನಾವು ಹಾಗೆ ಮಾಡಿದ್ದೇ ಆದರೆ ನಮ್ಮ ಎಲ್ಲಾ ಮಾಹಿತಿಗಳನ್ನು ಸುಲಭವಾಗಿ ಅನಾಮಿಕರಿಗೆ ನೀಡಿದಂತಾಗುತ್ತದೆ. ಇನ್ನೊಬ್ಬರಿಗೆ ಪಾಸ್‌ವರ್ಡ್ ನೀಡಿ ಎಟಿಎಂ ನಿಂದ ಹಣ ತೆಗೆಯಕೂಡದು. ನಾವು ತಪ್ಪು ಮಾಡದೆ ನಮ್ಮ ಖಾತೆಯಿಂದ ಹಣ ಹೋಗಲು ಸಾಧ್ಯವಿಲ್ಲ. ಸೆಕೆಂಡ್ ಹ್ಯಾಂಡ್ ಮೊಬೈಲ್ , ವಾಹನ ಖರೀದಿ ತೆಗೆದುಕೊಳ್ಳುವಾಗಲೂ ನಾವು ಜಾಗರೂಕರಾಗಿರಬೇಕು. ಘರ್ಷಣೆಗೆ ಕಾರಣವಾಗುವ ಯಾವುದೇ ಸಂದೇಶ ಮತ್ತು ವೀಡಿಯೊ ಕಳುಹಿಸುವುದು ಅಪರಾಧವಾಗುತ್ತದೆ’ ಎಂದರು.

 

 

ಮುಖ್ಯ ಅತಿಥಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ. ಎಸ್ ಮಾತನಾಡಿ, ‘ನಮ್ಮ ದೇಶದಲ್ಲಿ ಎಲ್ಲರಿಗೂ ಬೇಕಾಗುವ ಹಾಗೆ ಕಾನೂನು ಇದೆ. ಎಲ್ಲರೂ ಹೊಂದಾಣಿಕೆಯಿಂದ ಉತ್ತಮ ಬದುಕನ್ನು ರೂಪಿಸುವ ನೆಲೆಯಿಂದ ಕಾನೂನುಗಳು ರೂಪಿಸಲಾಗಿದೆ. ನಮ್ಮ ಎಲ್ಲಾ ಸಂಘರ್ಷ ಮತ್ತು ತಪ್ಪುಗಳ ಮೂಲ ಮನಸ್ಸು. ಯಾರೊಬ್ಬರ ತಂಟೆಗೆ ಹೋಗದೇ ಇದ್ದಾಗ ಅದು ಶ್ರೇಷ್ಠ ಬದುಕಾಗುತ್ತದೆ’ ಎಂದರು.

‘ಕೆ. ವಸಂತ ಬಂಗೇರರು ಅಪಾರ ಶಿಸ್ತು ಮತ್ತು ನೇರ ನಡೆನುಡಿಯ ವ್ಯಕ್ತಿ. ಅವರ ಶ್ರೀ ಗುರುದೇವ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಉತ್ತಮ ಶಿಕ್ಷಣ ನೀಡಬೇಕು ಎಂಬುದಕ್ಕೆ ಸಾಕ್ಷಿಯಾಗಿ ಈ ಸಂಸ್ಥೆಯಲ್ಲಿ ಎಲ್ಲಾ ವರ್ಗ – ಧರ್ಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 5 ವರ್ಷ ಕಾಲ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಇದೇ ಕಾಲೇಜಿನಲ್ಲಿ ಪಡೆದುಕೊಂಡರೆ ನಿಷ್ಠಾವಂತ ವಿದ್ಯಾರ್ಥಿಯಾಗಿ ಹೊರಬರುವುದರಲ್ಲಿ ಯಾವುದೇ ಅನುಮಾನವಿಲ್ಲ ‘ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ‘ತಾಲ್ಲೂಕಿನ ಹಲವು ಕಾಲೇಜುಗಳ ಬಳಿ ಗಾಂಜಾ ಮಾರಾಟವಾಗುತ್ತಿದೆ. ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಹೋಗಿ ಗಲಾಟೆ ಮಾಡುವುದು ತಪ್ಪು. ಕಾನೂನಿನ ಬಗ್ಗೆ ನಾವು ಚೆನ್ನಾಗಿ ತಿಳಿದಿರಬೇಕು. ದೇಶದಲ್ಲಿ ಬಡವರು ನಿಜವಾಗಿಯೂ ಕಾನೂನಿಗೆ ಗೌರವ ಕೊಡುತ್ತಾರೆ. ಆದರೆ ಉಳ್ಳವರು ಮತ್ತು ಕೆಲ ರಾಜಕಾರಣಿಗಳು ತಪ್ಪು ಮಾಡುತ್ತಾರೆ. ಇಂದು ಬಡವರ ಭೂಮಿಗೆ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ಕಾನೂನಿನಲ್ಲಿ ಬಡವರ ಭೂಮಿಗಾಗಿ ಅಗತ್ಯ ತಿದ್ದುಪಡಿ ತರಬೇಕು’ ಎಂದರು.

ಅತಿಥಿ, ವಕೀಲ ಮನೋಹರ್ ಕುಮಾರ್ ಇಳಂತಿಲ ಪ್ರಶ್ನೋತ್ತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ವೇದಿಕೆಯಲ್ಲಿ ಸರ್ಕಾರಿ ವಕೀಲ ದಿವ್ಯರಾಜ್ ಇದ್ದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರಾದ
ಶಿವಕುಮಾರ್ ಎಸ್. ಎಂ., ಮುಮ್ತಾಜ್ ಬೇಗಂ, ಸುಭಾಷಿಣಿ ಆರ್, ಅಭೀಸ್ ಫ್ರಾನ್ಸಿಸ್, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಉಷಾಲತ ನಾಯಕ್ ಹಾಗೂ ಸಿಬ್ಬಂದಿ ವರ್ಗ, ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು

ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಆರ್ ಠೋಸರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಹೇಮಾವತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕರಾಗಿರುವ ಗಣೇಶ್ ಬಿ ಶಿರ್ಲಾಲ್ ವಂದಿಸಿದರು.

error: Content is protected !!