ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ಇನ್ನಿಲ್ಲ

 

 

 

ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ (98) ಇಂದು ನ 09 ಮಂಗಳವಾರ ಸ್ವಗೃಹ ಪಡಂಗಡಿಯಲ್ಲಿ ನಿಧನ ಹೊಂದಿದ್ದಾರೆ.ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು ವಯೋಸಹಜವಾಗಿ  ಎರಡು ವರುಷಗಳಿಂದ ಅನಾರೋಗ್ಯದಿಂದ  ಮನೆಯಲ್ಲಿದ್ದರು.

ನೇರ ನಡೆ-ನುಡಿ, ಅಪ್ಪಟ ಗಾಂಧಿವಾದಿ, ಸದಾ ಖಾದಿ ವಸ್ತ್ರದಾರಿ, ಸರಳ ಜೀವನ, ಉನ್ನತಚಿಂತನೆ, ನಿತ್ಯಜೀವನದಲ್ಲಿ ಧರ್ಮದ ಅನುಷ್ಠಾನ, ಸದಾ ಪರರ ಹಿತಕ್ಕಾಗಿ ಶ್ರಮಿಸುವ ಭೋಜರಾಜ ಹೆಗ್ಡೆ ಅವರು 1923ರ ಮಾರ್ಚ್  13 ರಂದು ಪಡಂಗಡಿಯಲ್ಲಿ ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ದಂಪತಿ ಮಗನಾಗಿ ಜನಿಸಿದ್ದರು.

ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ 1942 ರಲ್ಲಿ ಆಯೋಜಿಸಿದ ಭಾರತ ಬಿಟ್ಟುತೊಲಗಿ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.

ಧಾರ್ಮಿಕ,ಸಾಮಾಜಿಕ, ಸಹಕಾರಿ,ಶೈಕ್ಷಣಿಕ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಅವರು ಉಜಿರೆ ರಬ್ಬರ್ ಸೊಸೈಟಿ, ಮುಂಡಾಜೆಯ ಶತಾಬ್ದಿ ವಿದ್ಯಾಲಯ ಸಮಿತಿಯ‌ ಉಪಾಧ್ಯಕ್ಷರಾಗಿ ಹಲವು ಕಾಲ ಸೇವೆ ಸಲ್ಲಿಸಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ,ವೀರೇಂದ್ರ ಪಾಟೀಲ್,
ರಾಮಕೃಷ್ಣ ಹೆಗ್ಗಡೆ ಸೇರಿದಂತೆ ಅನೇಕ ರಾಜಕೀಯ ನಾಯಕರ ನಿಕಟ ಸಂಪರ್ಕವನ್ನು ಹೊಂದಿದ್ದರು.ತುರ್ತು ಪರಿಸ್ಥಿತಿ ಸಂದರ್ಭ ಜೈಲುವಾಸವನ್ನು ಅನುಭವಿಸಿದ್ದರು.
ಸರಳ ಸಜ್ಜನಿಕೆಯಿಂದ, ನೇರ ನಡೆ ನುಡಿಗಳ ಮೂಲಕ ಎಲ್ಲರ ಪ್ರೀತಿಗೆ ಅವರು ಪಾತ್ರರಾಗಿದ್ದರು.

ಮಂಗಳೂರಿನಲ್ಲಿ ಗಾಂಧಿಪಾರ್ಕ್‌ನಲ್ಲಿ ನಡೆದ ಚಳುವಳಿಗೆ ಪಡಂಗಡಿಯಿಂದ ತನ್ನ ಶಿಕ್ಷಕ ಕುಂಞಣ್ಣ ರೈ ಅವರ ಸೈಕಲ್‌ನಲ್ಲಿ ಏರಿ ಮಂಗಳೂರಿಗೆ ತೆರಳಿ ಧರಣಿ ಕುಳಿತಿದ್ದರು.

ಪೊಲೀಸರು ಲಾಠಿ ಬೀಸಿದಾಗ ಅಂಜದೆ ಬ್ರಿಟಿಷರ ವಿರುದ್ಧ ಮತ್ತು ಅವರ ತೀರ್ಪಿನ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಈ ವೇಳೆ ಹೋರಾಟದಲ್ಲಿ ಧೋತಿ ಹರಿದಾಗ ಅಂದು ಖಾದಿ ಬಟ್ಟೆ ಖರೀದಿಸಿ ಧರಿಸಿದವರು ಇಂದಿನವರೆಗೆ ಖಾದಿ ದಿರಿಸನ್ನೇ ತೊಡುತ್ತಿದ್ದರು.

2005 ರಲ್ಲಿ ಇವರಿಗೆ ಮೂಡಬಿದಿರೆ ಜೈನ ಮಠದ ವತಿಯಿಂದ ತ್ಯಾಗಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮೃತರು  ಓರ್ವ ಪುತ್ರ ಓರ್ವ ಪುತ್ರಿ  .ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

 

ಮೂಡಬಿದ್ರೆ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಂತಾಪ

 

ಹಿರಿಯ ಸ್ವಾತಂತ್ರ್ಯ ಹೋರಾಟಗಾರ  ಪಡಂಗಡಿ ಬೋಜರಾಜ ಹೆಗ್ಡೆ  ನಿಧನಕ್ಕೆ ಮೂಡಬಿದ್ರೆ ಜೈನ ಮಠದ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಂತಾಪ ವ್ಯಕ್ತಪಡಿಸಿ ಉತ್ತಮ ಸದ್ಗತಿಗಾಗಿ ಪ್ರಾರ್ಥಿಸಿ ದ್ದಾರೆ.

error: Content is protected !!