ಯಾವುದೇ ಹುದ್ದೆಯನ್ನು ಕೀಳಾಗಿ ಕಾಣದೆ ಪ್ರಾಮಾಣಿಕವಾಗಿ ದುಡಿದಾಗ ಅಪ್ರತಿಮ ಸ್ಥಾನ ಖಚಿತ: ಬೆಂಗಳೂರು ವಿಭಾಗ ಸಿಐಡಿ ಎಸ್ಪಿ ರವಿ ಚೆನ್ನಣ್ಣನವರ್ ಅಭಿಮತ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಇಚ್ಚಿಲದ 33ನೇ ಮನೆ ಹಸ್ತಾಂತರ ಕಾರ್ಯಕ್ರಮ

 

 

ಬೆಳ್ತಂಗಡಿ: ಯಾವುದೇ ಹುದ್ದೆ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಸಿಕ್ಕ ಹುದ್ದೆಯಲ್ಲಿ ಕೀಳರಿಮೆ ತೋರದೆ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಪ್ರಾಮಾಣಿಕವಾಗಿ ದುಡಿದರೆ ಅಪ್ರತಿಮ ಸ್ಥಾನ ಲಭಿಸುತ್ತದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಸ್ಥಿತಪ್ರಜ್ಞರಾಗಿ ಉತ್ತಮ ಕೆಲಸ ನಿರ್ವಹಿಸಿದರೆ ಸಮಾಜದ ಉದ್ಧಾರಕ್ಕೆ ಕೊಡುಗೆ ಸಲ್ಲಿಸಿದಂತಾಗುವುದು. ರಾಜಕೇಸರಿ ಸಂಘಟನೆ ಸಕಾರಾತ್ಮಕ ಚಿಂತನೆಯಿಂದ ಕ್ರಾಂತಿಮಾಡುವ ಸೇವೆ ಅನುಭವ ಮಂಟಪಕ್ಕೆ ಸಮಾನವಾಗಿದೆ ಎಂದು ಬೆಂಗಳೂರು ವಿಭಾಗದ ಸಿಐಡಿ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಹೇಳಿದರು.

 

 

ಅವರು ಉಜಿರೆಯ ಇಚ್ಚಿಲದಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ವತಿಯಿಂದ ಇಚ್ಚಿಲದ ಕುಶಲ ಮತ್ತು ಮಕ್ಕಳಿಗೆ 33ನೇ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಕೀ ಒಪ್ಪಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಸರಕಾರವೇ ಎಲ್ಲವನ್ನೂ ಮಾಡಲಿ ಎಂದು ಜನಸಾಮಾನ್ಯರು ಬಯಸುವುದು ಸರಿಯಲ್ಲ.

 

 

ಸಾಮಾನ್ಯ ವ್ಯಕ್ತಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಂತೆ ಮುಕ್ತ ವಾತಾವರಣ ಬಯಸುತ್ತಾನೆ. ಜನರಿಗೆ ಕೊರತೆಗಳಿಲ್ಲದ ಭಯಮುಕ್ತ ವಾತಾವರಣ ಇರಬೇಕು. ಇದಕ್ಕೆ ಗ್ರಾಮಗಳ ಮೂಲಭೂತ ಸೌಕರ್ಯಗಳಲ್ಲಿ ಕೊರತೆ ಉಂಟಾಗದಂತೆ ಸರಕಾರಿ ಯೋಜನೆಗಳನ್ನು ಜನರ ಬಳಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಮಾಡಿದರೆ ಕುಂದುಕೊರತೆಗಳು ಕಂಡುಬರುವುದಿಲ್ಲ.

 

 

ನೊಂದ ವ್ಯಕ್ತಿಗಳು ಬಂದಾಗ ಅಧಿಕಾರಿಗಳು ದರ್ಪ ತೋರಿಸಿದರೆ ಅವರ ಶಾಪಕ್ಕೆ ಗುರಿಯಾಗುತ್ತಾನೆ ಎಂದು ಹೇಳಿದರು.
ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಣವಿದ್ದವರು ಬೇಕಾದಷ್ಟು ಮನೆ ನಿರ್ಮಾಣ ಮಾಡಬಹುದು. ಆದರೆ ಕೂಲಿ ಕಾರ್ಮಿಕರು ತಾವೇ ಸ್ವತಃ ಮನೆ ನಿರ್ಮಿಸಿ ನಿರ್ಗತಿಕರಿಗೆ ಹಸ್ತಾಂತರಿಸುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದರು.

 

 

ಟ್ರಸ್ಟ್ ನ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಜಿರೆ ಸಾನಿಧ್ಯಸೇವಾ ಕೇಂದ್ರದ ಆಡಳಿತಾಧಿಕಾರಿ ಡಾ. ವಸಂತಕುಮಾರ್ ಶೆಟ್ಟಿ, ಕಟ್ಟೆಮಾರ್ ಶ್ರೀ ಕ್ಷೇತ್ರ ಮಂತ್ರದೇವತೆ ಸಾನಿಧ್ಯದ ಆಡಳಿತ ಮುಖ್ಯಸ್ಥ ಮನೋಜ್ ಕಟ್ಟೆಮಾರ್, ಶಿರಹಟ್ಟಿ ಸಾವಯವ ಕೃಷಿಕ ಮಹೇಶ್ ಛಬ್ಬಿ, ಕಸ್ತೂರಿ ಚಾನೆಲ್‌ ನಿರೂಪಕಿ ದೀಪಿಕಾ ಬಿ., ಉದ್ಯಮಿ ಸೀತಾರಾಮ ಶೆಟ್ಟಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಶಿಧರ ಕಲ್ಮಂಜ, ತಾಲೂಕು ಆಸ್ಪತ್ರೆಯ ಪ್ರೋಗ್ರಾಮ್ ಮ್ಯಾನೇಜರ್ ಅಜಯ್, ಉದ್ಯಮಿ ಹೇಮಂತಗೌಡ, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಗುರುಪ್ರಸಾದ್ ಕೋಟ್ಯಾನ್, ರಾಜಕೇಸರಿ ಟ್ರಸ್ಟ್ ಜಿಲ್ಲಾಧ್ಯಕ್ಷ ಅಶೋಕ್ ಪೂಜಾರಿ ಮಾಲೇಮಾರ್, ರಾಜ ಕೇಸರಿ ತಾಲೂಕು ಅಧ್ಯಕ್ಷ ಕಾರ್ತಿಕ್, ಬಂಟ್ವಾಳ ವಿಭಾಗದ ಅಧ್ಯಕ್ಷ ನವೀನ್ ಮಾಣಿ, ಪುತ್ತೂರು ವಿಭಾಗದ ಅಧ್ಯಕ್ಷ ಸಮಿತ್ ಮತ್ತಿತರರು ಉಪಸ್ಥಿತರಿದ್ದರು.

 

 

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟದಬೈಲಿನ ಶಿಕ್ಷಕ ಎಡ್ವರ್ಡ್ ಡಿ’ಸೋಜಾ, 2019-20 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ಪೊಲೀಸ್ ಇಲಾಖೆಯ ವೆಂಕಟೇಶ್ ನಾಯ್ಕ್ ಅವರನ್ನು ಟ್ರಸ್ಟ್ ವತಿಯಿಂದ ಸಮ್ಮಾನಿಸಲಾಯಿತು. ನಾಗೇಶ್ ನೆರಿಯ ಸ್ವಾಗತಿಸಿ, ಲೋಹಿತ್ ಪ್ರಸ್ತಾವಿಸಿದರು.

error: Content is protected !!