ಬೆಳ್ತಂಗಡಿ: ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆ ಸಹಕಾರದೊಂದಿಗೆ ಜಮಾಅತ್ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಪ್ರಪ್ರಥಮ ವ್ಯಾಕ್ಸಿನೇಷನ್ ಅಭಿಯಾನ ಯಶಸ್ವಿಯಾಗಿದೆ. ಈ ಮೂಲಕ ವ್ಯಾಕ್ಸಿನ್ ಬಗ್ಗೆ ಸಮುದಾಯಕ್ಕಿದ್ದ ಸಂದೇಹ ನಿವಾರಣೆಯಾಗಿದೆ. ಮುಂದೆ ನಮ್ಮ ಜಮಾಅತ್ ಸಂಪೂರ್ಣ ವ್ಯಾಕ್ಸಿನೇಟೆಡ್ ಜಮಾಅತ್ ಎಂದು ಘೋಷಿಸುವ ಸಂದರ್ಭ ಬರುವ ಭರವಸೆ ಇದೆ ಎಂದು ಕಾಜೂರು ದರ್ಗಾ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹಿಂ ಹೇಳಿದರು.
ಅವರು ರಹ್ಮಾನಿಯ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿಯಿಂದ ಮಿತ್ತಬಾಗಿಲು ಗ್ರಾಮ ಪಂಚಾಯತ್ ಹಾಗೂ ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜಮಾಅತ್ ನವರಿಗೆ ಅನುಕೂಲವಾಗುವಂತೆ ಕಾಜೂರು ರಹ್ಮಾನಿಯ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರಥಮ ಹಂತದ ವೇಕ್ಸಿನೇಷನ್ ಅಭಿಯಾನ ಸಂದರ್ಭ ಮಾತನಾಡಿದರು.
ಈ ಶಿಬಿರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಟೋಕನ್ ವಿತರಿಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 409 ಮಂದಿಗೆ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದರು. ಮೊದಲ ವರಸೆ ಪೂರೈಸಿದವರಿಗೆ ಎರಡನೇ ವರಸೆಯ ಲಸಿಕೆಯನ್ನೂ ಈ ಸಂದರ್ಭದಲ್ಲಿ ನೀಡಲಾಯಿತು. ಕಾಜೂರು ಪ್ರಧಾನ ಧರ್ಮಗುರು ಸಯ್ಯದ್ ಕಾಜೂರ್ ತಂಙಳ್ ಅವರು ಇಂದಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಇಲಾಖೆ ಸಿಬ್ಬಂದಿ ರಕ್ಷಿತ್ ಹಾಗೂ ಪಂಚಾಯತ್ ಸದಸ್ಯ ಕೆ. ಶಾಹುಲ್ ಹಮೀದ್ ಅವರನ್ನು ಅಭಿನಂದಿಸಿದರು.
ಈ ಸಮಯದಲ್ಲಿ ಮಿತ್ತಬಾಗಿಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನಯಚಂದ್ರ ಸೇನೆರೆಬೊಟ್ಟು ಸಹಿತ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು, ಇಂದಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ಮುಖ್ಯಾಧಿಕಾರಿಗಳು ಮತ್ತು ಸಹಾಯಕರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದಿಕ್ ವಂದಿಸಿದರು.