ಸವಾಲುಗಳನ್ನು ಎದುರಿಸಿ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳೆಸಬೇಕು: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

 

 

ಬೆಳ್ತಂಗಡಿ: ವಿದೇಶಿ ಸಂಸ್ಕ್ರತಿಗಳ ಕಾರಣದಿಂದಲೋ ಅಥವಾ ನಮ್ಮಲ್ಲಿರುವ ದೌರ್ಬಲ್ಯ ದಿಂದಲೋ ನಮಗೆ ಸವಾಲುಗಳಿದೆ. ತಾರತಮ್ಯಗಳನ್ನು ಸೃಷ್ಟಿಸಿ, ನಮ್ಮಲ್ಲಿ ಒಡಕು ಮೂಡಿಸಿ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳುವ ಶಕ್ತಿಗಳು ಇಂದಿಗೂ ಪ್ರಯತ್ನ ಮಾಡುತ್ತಲೇ ಬಂದಿದೆ. ಆದರೆ ಪೂಜ್ಯರುಗಳ, ಸಾಧು ಸಂತರ ಸತತ ಪ್ರಯತ್ನದ ಫಲವಾಗಿ ಸಮಾಜ ಒಂದಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆದು ಇವತ್ತಿಗೂ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಸಾಧ್ಯವಾಗಿದೆ ಎಂದು
ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.‌

ಅವರು ಶುಕ್ರವಾರ ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಸಂಸ್ಥಾನಮ್ ಜಗದ್ಗುರು ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದಲ್ಲಿ ಭಾಗವಹಿಸಿ, ಪಾದಪೂಜೆ ನೆರವೇರಿಸಿ, ಮಾತನಾಡಿದರು.

 

ನಾವೊಂದು ಸಂಸ್ಕಾರದಲ್ಲಿ, ಸಂಸ್ಕೃತಿಯಲ್ಲಿ ಬೆಳೆಯುತ್ತಾ ಇದ್ದೇವೆಯೆಂದರೆ ಅದಕ್ಕೆ ಕಾರಣ ನಮ್ಮ ಪೂರ್ವಜರ ತ್ಯಾಗ, ಬಲಿದಾನ. ಪರಕೀಯರ ಆಳ್ವಿಕೆ, ಗುಲಾಮತನದ ಮಾನಸಿಕತೆಯಲ್ಲಿ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ, ರಕ್ಷಿಸಿಕೊಳ್ಳಬೇಕು ಅಂತ ನಮ್ಮ ಹಿರಿಯರು ಎಲ್ಲಾ ಪುಣ್ಯ ಪವಿತ್ರ ಕ್ಷೇತ್ರ ಗಳನ್ನು ರಕ್ಷಿಸಿದ್ದಾರೆ ಎಂದರು.

ನಾವು ನಂಬಿದ ಸನಾತನ ಧರ್ಮ ಸಂಸ್ಕೃತಿಯನ್ನು ವಿಶೇಷ ಭಾವಗಳನ್ನು
ಅವಹೇಳನ ಮಾಡುವ ಶಕ್ತಿಗಳು ಜಾಗೃತವಾಗಿದೆ. ಅದಕ್ಕೆ ಸ್ಪಷ್ಟ ಉತ್ತರ ಕೊಡಬೇಕಾಗಿದೆ.
ಹಗುರವಾಗಿ ಮಾತಾಡಿದರೆ ಒಪ್ಪುಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡುವ ಜಾಗೃತ ಸಮಾಜವಾಗಬೇಕಿದೆ. ನಮ್ಮ ಜವಾಬ್ದಾರಿ ಕರ್ತವ್ಯಗಳನ್ನು ಮರೆಯದ ಸ್ಥಿತಿಯೂ ಬೇಕಿದೆ ಎಂದರು.

ಋಷಿಮುನಿಗಳು, ಸಾಧುಸಂತರು, ಪೂರ್ವಜರು ಸೃಷ್ಟಿಯ ಸತ್ಯದ ಜತೆಗೆ ಜೀವನದ ಸತ್ಯ, ಸಾರ್ಥಕಗಳ ಸತ್ಯವನ್ನು ಹೇಳಿದ್ದಾರೆ. ಅಂತಹ ಪರಂಪರೆಯನ್ನು ನಾವು ಅರಿತುಕೊಳ್ಳುವ ದೊಡ್ಡ ಪ್ರಯತ್ನ ಮಾಡಬೇಕು. ನಮ್ಮ ಶಿಕ್ಷಣದ ಮೂಲಕ ಜೀವನ ಸತ್ಯ ಅರಿಯುವ ಕೆಲಸವಾಗಬೇಕಿತ್ತು. ಶಿಕ್ಷಣ ಪರಂಪರೆ ತಪ್ಪಿ ಹೋಗಿದೆ. ಹೀಗಾಗಿ ಸೃಷ್ಟಿಯ ಸತ್ಯ ತಿಳಿಯಲು ರಾಮನ ತತ್ವ ವಿಚಾರಗಳನ್ನು ಅರಿತು ಅವರು ಹೋದ ಮಾರ್ಗಗಳಲ್ಲಿ ನಾವು ಹೋಗುವ ಸಂಕಲ್ಪವಾದಲ್ಲಿ ಇಂತಹಾ ಧರ್ಮ ಪರಂಪರೆ ಉಳಿಯಲು ಸಾಧ್ಯ. ಹೀಗಾಗಿ ಶ್ರದ್ಧಾಭಕ್ತಿಯ ಕೇಂದ್ರಗಳು, ಮಠಗಳನ್ನು ಉಳಿಸುವ ಪ್ರಯತ್ನ ಮಾಡೋಣ ಎಂದು ಹೇಳಿದರು.

 

 

 

ಚಾತುರ್ಮಾಸ್ಯದ ನಿರಂತರ ಸೇವೆಯಲ್ಲಿ ತೊಡಗುವುದು ಒಂದು ವ್ರತವೇ . ಅದನ್ನು ಶಾಸಕ ಹರೀಶ್ ಪೂಂಜ, ಆಡಳಿತ ಸಮಿತಿ ಹಾಗೂ ಚಾತುರ್ಮಾಸ್ಯ ಸಮಿತಿ ಅಚ್ಚಕಟ್ಟಾಗಿ ನಿಭಾಯಿಸಿದ್ದಾರೆ.
ಅಭಿವೃದ್ಧಿಪರ ಸ್ಪಷ್ಟ ನಿರ್ಧಾರದಲ್ಲಿ ಕೆಲಸ ಮಾಡುತ್ತಿರುವವರು ಶಾಸಕ ಹರೀಶ್ ಪೂಂಜ ಅವರು ಮೂರೇ ವರ್ಷದಲ್ಲಿ ವಿಧಾನಸೌಧ ಏನು ಎಂಬುದನ್ನು ಅರಿತುಕೊಂಡು
ಹಿಂದೆಂದು ಆಗದ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮಾತುಗಳನ್ನ ನಾನು ಕೇಳಿದ್ದೇನೆ. ಅಭಿವೃದ್ಧಿ ಅಷ್ಟನ್ನೇ ಕಣ್ಣಲ್ಲಿಟ್ಟು ಕರ್ತವ್ಯದ ಭಾಗವನ್ನ ಮರೆಯಬಾರದು. ಸನಾತನ ಸಂಸ್ಕೃತಿ, ಶ್ರದ್ಧಾ,ಭಕ್ತಿ ಉಳಿಸಿಕೊಳ್ಳುವ ಕೆಲಸವಾಗಬೇಕು. ಅದು ಇಂತಹ ಕಾರ್ಯಕ್ರಮದಲ್ಲಿ ಸಂಕಲ್ಪವಾಗಬೇಕು. ನಾವು ಹೊಣೆಗಾರಿಕೆ ಮರೆತರ ಮುಂದಿನ ಪೀಳಿಗೆಗೆ ಸಿಗದಂತಾಗುತ್ತದೆ ಎಂದು ಹೇಳಿದರು.

ಹಿರಿಯ ಪೂಜ್ಯರಾದ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ತ್ಯಾಗಮಯ ಜೀವನದ ಸಾರಾಂಶವನ್ನು ಉಳಿಸಿಕೊಂಡು ಹೋಗುವ ಕೆಲಸ ಈಗೀನ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯಿಂದಾಗಿದೆ. ಅದನ್ನು ಹತ್ತು ಹಲವಾರು ವಿಧದ ವರ್ಷಗಳಿಂದ ಕಂಡಿದ್ದೇನೆ. ಅದು ಧರ್ಮಸಂಸತ್ ನಡೆಸುವಾಗಲೆ ಅವರ ಶಕ್ತಿ ಅರಿವಾಗಿದೆ. ನಾಡಿನ ಎಲ್ಲಾ ಮಠ ಮಂದಿರಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಾ ಬಂದಿದೆ. ಅದೇ ರೀತಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಆಶೀರ್ವಾದ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಿಂದ ನಮ್ಮ ನಾಡಿನಲ್ಲಿ ಆಧ್ಯಾತ್ಮಿಕವಾದ ಶಕ್ತಿ ಜಾಗ್ರತವಾಗಿರುವುದನ್ನು ನೋಡಿದ್ದೇವೆ. ನಾವು ಭವಿಷ್ಯದ ಜನಾಂಗಕ್ಕೆ ಉತ್ತಮವಾದ ಧರ್ಮ ಸಂಸ್ಕೃತಿಯ ಆಧ್ಯಾತ್ಮಿಕ, ದೈವ ಭಕ್ತಿಯ ತಳಹದಿಯ ವಾತಾವರಣ ಸೃಷ್ಟಿಸಬೇಕು ಎಂದರು.‌

ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ, ಆಶೀರ್ವದಿಸಿದರು.

ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ,
ಶಾಸಕ ಹರೀಶ್ ಪೂಂಜ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಸಮಿತಿ ಪದಾಧಿಕಾರಿಗಳಾದ ಪ್ರಶಾಂತ್ ಪಾರೆಂಕಿ, ಹರೀಶ್ ಸಾಲಿಯಾನ್, ಗಣೇಶ್ ಗೌಡ ನಾವೂರು, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಶಶಿಧರ್ ಕಲ್ಮಂಜ, ಪಡುಮಲೆ ಕ್ಷೇತ್ರದ ಟ್ರಸ್ಟಿ ಅಧ್ಯಕ್ಷ ಶ್ರೀಧರ ಪೂಜಾರಿ, ಗುರುದೇವ ಮಠದ ಟ್ರಸ್ಟಿ ತುಕರಾಮ್ ಸಾಲಿಯಾನ್, ಉದ್ಯಮಿ ಅಶ್ವಥ್ ಹೆಗ್ಡೆ ಬಳಂಜ,  ತಾಲೂಕು ಬಿಜೆಪಿ ಮಹಿಳಾ ಮೋರ್ಚಾ  ಅಧ್ಯಕ್ಷೆ ವಿಜಯ ಆರಂಬೋಡಿ, ಕಾರ್ಯದರ್ಶಿಗಳಾದ ಅಮಿತಾ ಕೆ. ಗೌಡ ಹಾಗೂ ಸವಿತ ಶೆಟ್ಟಿ ಲಾಯಿಲ, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ., ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ ಮೊದಲಾದವರು ಉಪಸ್ಥಿತರಿದ್ದರು.ಸಮಿತಿಯ ಪದಾಧಿಕಾರಿ ಸೀತಾರಾಮ ಬೆಳಾಲು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

error: Content is protected !!