ಸದಾ ಸಮಾಜದ ಏಳಿಗೆ ಬಯಸುವವರು ಗುರುಗಳು: ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿಕೆ: ದೇವರಗುಡ್ಡೆ ಗುರುದೇವ ಮಠದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಪೀಠಾಧೀಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು ಪಾದಪೂಜೆ

ಬೆಳ್ತಂಗಡಿ: ಅನೇಕ ಸಾಧು ಸಂತರು ದೇಶದ ಕಲ್ಯಾಣಗೋಸ್ಕರ ಕಠಿಣವಾದ ಚಾತುರ್ಮಾಸ್ಯ ವ್ರತವನ್ನು ಮಾಡುತ್ತಿದ್ದಾರೆ. ಅವರು ಕೈಗೊಂಡ ವ್ರತದ ಫಲಗಳು ಭಕ್ತರಿಗೆ ತಲುಪುತ್ತದೆ. ಗುರುವಿಗೆ ಜಾತಿ, ಧರ್ಮ ಇಲ್ಲ. ಮನುಷ್ಯನ ಜೀವನದಲ್ಲಿ ಗುರು ಇರಬೇಕು. ನಮ್ಮ ಮುಂದೆ ಗುರಿ ಇದ್ದರೆ ಹಿಂದೆ ಗುರುಗಳ ಮಾರ್ಗದರ್ಶನ ಬೇಕೇ ಬೇಕು. ಯಾವಾಗಲೂ ಗುರುಗಳು ಸಮಾಜದ ಏಳಿಗೆಯನ್ನೇ ಬಯಸುವವರು ಎಂದು‌ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಹೇಳಿದರು.

ಅವರು ಕನ್ಯಾಡಿ ದೇವರಗುಡ್ಡೆ ಗುರುದೇವ ಮಠದಲ್ಲಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಆಡಳಿತ ಸಮಿತಿ ಹಾಗೂ ಚಾತುರ್ಮಾಸ್ಯ ಸಮಿತಿ ವತಿಯಿಂದ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಪೀಠಾಧೀಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ಅಂಗವಾಗಿ ಶನಿವಾರ ಶ್ರೀಗಳ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು ಪಾದಪೂಜೆ ನೆರವೇರಿಸಿ, ಮಾತನಾಡಿದರು.

ಗುರುಗಳ ಮಾರ್ಗದರ್ಶನದಿಂದ ಸಮಾಜ, ಧರ್ಮ ಎತ್ತರಕ್ಕೆ ಏರುತ್ತದೆ.‌ ಸಮಾಜದಲ್ಲಿ ಶಾಂತಿ ಸುಭಿಕ್ಷೆ ನೆಲೆಯೂರುತ್ತದೆ ಎಂದ ಸಚಿವರು, ಚಾತುರ್ಮಾಸ್ಯದ ಸಾರಥ್ಯವನ್ನು ವಹಿಸಿಕೊಂಡು, ಧರ್ಮದ ಚಿಂತನೆಯನ್ನು ಮೈಗೂಡಿಸಿಕೊಂಡ ಯುವ ಶಾಸಕ ಹರೀಶ್ ಪೂಂಜ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಗುರುಗಳ ಕೃಪೆಯಿಂದ ಸಮಾಜದ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.

ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಕ್ಷೇತ್ರದ ವತಿಯಿಂದ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ವನಜಾಕ್ಷಿ ಹೆಬ್ಬಾರ್
ದಂಪತಿಯನ್ನು ಗೌರವಿಸಿದರು.‌

ಬೆಂಗಳೂರಿನ ಆಗಮ ಪ್ರವೀಣ ಲಕ್ಷ್ಮೀಪತಿ ಗೋಪಾಲಚಾರ್ಯ ತಂಡದವರು ಪಾದಪೂಜೆ, ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಸಚಿವ ದಂಪತಿಯನ್ನು ಸ್ವಾಗತಿಸಿದರು.‌

ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಸಮಿತಿ ಪದಾಧಿಕಾರಿಗಳಾದ ಪ್ರಶಾಂತ್ ಪಾರೆಂಕಿ, ಶ್ರೀನಿವಾಸ್ ರಾವ್, ಗಣೇಶ್ ಗೌಡ ನಾವೂರು, ಸೀತಾರಾಮ ಬೆಳಾಲು, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಕೇಶವ ಬಂಗೇರ, ಶಶಿಧರ ಕಲ್ಮಂಜ, ಕೃಷ್ಣಪ್ಪ ಗುಡಿಗಾರ್, ಧರ್ಮಣ್ಣ ಗೌಡ, ರಾಘವ ಕಲ್ಮಂಜ, ಉದಯ ಹೆಗ್ಡೆ ನಾರಾವಿ, ಸುಪ್ರೀತ್ ಜೈನ್ ಮೊದಲಾದವರು ಇದ್ದರು.

error: Content is protected !!