ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ವಂಚಿತ ಬೆಳ್ತಂಗಡಿ ತಾಲೂಕಿನ ‌ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನತೆ: ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದಿಂದ ‌ದ.ಕ. ಜಿಲ್ಲಾಧಿಕಾರಿಗೆ ಉತ್ತರ ಕೋರಿ ನೋಟಿಸ್: ಕರ್ನಾಟಕ ‌ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮನವಿಗೆ ಸ್ಪಂದನೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 9 ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಪ್ರದೇಶದಲ್ಲಿರುವ ಆದಿವಾಸಿ ಜನಾಂಗದ ಮಲೆಕುಡಿಯ ಸಮುದಾಯಗಳ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ‌ ನೀಡಿದ್ದ ಮನವಿಗೆ ಸ್ಪಂದಿಸಿದ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ದ.ಕ ಜಿಲ್ಲಾಧಿಕಾರಿ ಅವರಿಗೆ ಉತ್ತರ ಕೋರಿ ನೋಟಿಸ್ ಜಾರಿ ಮಾಡಿದೆ.

 

 

ತಾಲೂಕಿನ ನಾರಾವಿ , ಕುತ್ಲೂರು , ಸುಲ್ಕೇರಿಮೊಗ್ರು, ಶಿರ್ಲಾಲು, ಸವಣಾಲು, ನಡ, ನಾವೂರು, ಮಲವಂತಿಗೆ, ಮಿತ್ತಬಾಗಿಲು ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿವೆ. ಒಂದುವರೆ ಶತಮಾನಗಳಿಂದ ಈ ಪ್ರದೇಶದಲ್ಲಿ ಆದಿವಾಸಿ ಜನಾಂಗದ ಮಲೆಕುಡಿಯ ಸಮುದಾಯಧ ಜನತೆ ವಾಸಿಸುತ್ತಿದ್ದಾರೆ. ಆದರೆ ಇಂದಿಗೂ ರಸ್ತೆ, ವಿದ್ಯುತ್ ಸೇರಿದಂತೆ ಸಂವಿಧಾನದತ್ತವಾದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅರಣ್ಯ ಹಕ್ಕು ಕಾಯಿದೆ 2006 ಜಾರಿಯಾಗಿ 15 ವರ್ಷಗಳಾದರೂ ಅನುಷ್ಠಾನಗೊಂಡಿಲ್ಲ ಎಂದು ಆರೋಪಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಸಮಿತಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ 2020ರ ಆ. 3ರಂದು ದೂರು ನೀಡಿದ್ದರು.

ದೂರು ಸ್ವೀಕರಿಸಿದ ಆಯೋಗ ದ.ಕ ಜಿಲ್ಲಾಧಿಕಾರಿಗೆ 2020ರ ನವಂಬರ್ 5 ಹಾಗೂ 2021ರ ಫೆಬ್ರವರಿ ರಂದು ಸ್ಪಷ್ಟನೆ ನೀಡುವಂತೆ ಪತ್ರ ಬರೆದಿದ್ದರು. ಆದರೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡದಿರುವುದರಿಂದ ನಿಮ್ಮ ಮೇಲೆ ಏಕೆ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಉತ್ತರ ಕೋರಿ, ಆಯೋಗದ ಅಧಿಕಾರಿ ದೀಪಿಕಾ ಖನ್ನಾ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯ ಅಂತಿಮ ನೋಟಿಸ್ ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉದ್ಯಾನವನ ವ್ಯಾಪ್ತಿಯಲ್ಲಿರುವ ಸವಣಾಲು ಗ್ರಾಮದ ಕೇವಲ 9 ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ನಾವೂರು ಗ್ರಾಮದ ಪುಲಿತ್ತಡಿ, ಎರ್ಲೆಲೆ ಪ್ರದೇಶದ ಕೆಲ ಮನೆಗಳಿಗೆ ಸೌಭಾಗ್ಯ ವಿದ್ಯುತ್ ಯೋಜನೆಯಡಿ ಮೀಟರ್ ಬೋರ್ಡ್ ಅಳವಡಿಸಿ 4 ವರ್ಷಗಳಾದರೂ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಯಾವುದೇ ಪ್ರದೇಶಗಳಲ್ಲಿ‌ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ, ವಿದ್ಯುತ್ ಸಂಪರ್ಕವೂ‌ ಇಲ್ಲದಿರುವ ವಿಚಾರವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಸಮಿತಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಗಮನಕ್ಕೆ ‌ತಂದಿದ್ದು, ಇದೀಗ ಉತ್ತರ ಲಭಿಸಿದಂತಾಗಿದೆ.

error: Content is protected !!