ಬೆಳ್ತಂಗಡಿ: ಯಡಿಯೂರಪ್ಪ ಉತ್ತಮ ಹೋರಾಟಗಾರ ಅವರ ಹೋರಾಟದ ಫಲವಾಗಿಯೇ ಬಿಜೆಪಿ ಇಷ್ಟೊಂದು ಬಲಿಷ್ಠವಾಗಿ ರಾಜ್ಯದಲ್ಲಿ ಬೆಳೆಯಲು ಕಾರಣವಾಯಿತು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು. ಅವರು ಪ್ರವಾಸಿ ಮಂದಿರದಲ್ಲಿ ಮಾದ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
1985ರ ಸಂದರ್ಭ ಇಡೀ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ನಾನು ಮಾತ್ರ ಶಾಸಕರಾಗಿದ್ದೆವು. ಆ ಸಮಯದಲ್ಲಿ ವಿಧಾನ ಮಂಡಲದಲ್ಲಿ ಜನರ ಪರವಾಗಿ ಮಾತನಾಡಿ ಸರ್ಕಾರದ ಗಮನ ಸೆಳೆಯುವಂತಹ ಕೆಲಸವನ್ನು ಮಾಡಿದ್ದಾರೆ. ಸರ್ಕಾರ ಗಮನ ನೀಡದಿದ್ದ ಸಂದರ್ಭ ಸದನದ ಭಾವಿಗೆ ಇಳಿದು ಅದೆಷ್ಟೊ ಸಲ ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಆ ಸಮಯದ ನೆನಪನ್ನು ಯಡಿಯೂರಪ್ಪನವರು ಮರೆಯದೇ ಈಗ ರಾಜೀನಾಮೆ ನೀಡುವ ಸಂದರ್ಭದಲ್ಲೂ ನನ್ನ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಅವರನ್ನು ಅಭಿನಂದಿಸುತ್ತೇನೆ. ನನ್ನಲ್ಲೂ ಮತ್ತು ಅವರಲ್ಲಿ ಆ ಆತ್ಮೀಯತೆ ಇತ್ತು. ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದರೂ ಒಂದು ಬಾರಿಯೂ ಅವರನ್ನು ಭೇಟಿ ಆಗಿರಲಿಲ್ಲ. ಅದರೆ ಕಳೆದ ವರುಷ ದೇವಸ್ಥಾನವೊಂದರ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಶಾಸಕರೊಂದಿಗೆ ಹೋಗಿ ಮಾತನಾಡಿದ್ದೇನೆ. ಈ ಸಮಯದಲ್ಲೂ ಅವರನ್ನು ರಾಜೀನಾಮೆ ನೀಡಲು ಒತ್ತಾಯಿಸಿ ಅವರು ರಾಜೀನಾಮೆ ನೀಡುವಂತೆ ಮಾಡಿದ್ದು ತುಂಬ ಬೇಸರ ತರಿಸಿದೆ. ಕೊರೊನಾ ಹಾಗೂ ನೆರೆಯ ಸಂಕಷ್ಟದಲ್ಲಿ ಇರುವ ಈ ಸಮಯ ಅವರು ರಾಜೀನಾಮೆ ನೀಡಬಾರದಿತ್ತು. ಅವರ ಮನಸ್ಸಿಗೆ ನೋವು ಮಾಡಿ ಕಣ್ಣೀರು ಸುರಿಸಿ ರಾಜೀನಾಮೆ ಪಡೆಯಬಾರದಿತ್ತು. ಅವರು ರಾಜೀನಾಮೆ ನೀಡಿದ ಪರಿಣಾಮ, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಯಡಿಯೂರಪ್ಪ ಗಟ್ಟಿ ಮನಸ್ಸಿನ ವ್ಯಕ್ತಿ, ಆದ್ದರಿಂದ ಅವರು ಕಣ್ಣೀರು ಸುರಿಸಲಿಲ್ಲ. ಯಾವ ಸಂದರ್ಭದಲ್ಲೂ ಎದೆ ಗುಂದಿದವರಲ್ಲ. ಯಡಿಯೂರಪ್ಪ ಇಲ್ಲದಿದ್ದ ಪಕ್ಷದಲ್ಲಿ ರಾಜ್ಯದಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬರುವುದು ಬಿಡಿ, ಹೆಸರೂ ಕೇಳಿ ಬರುತ್ತಿರಲಿಲ್ಲ. ಆತ ಹುಟ್ಟು ಹೋರಾಟಗಾರ ಅವರ ಒಬ್ಬಂಟಿ ಹೋರಾಟದ ಫಲವಾಗಿ ಬಿಜೆಪಿ ಇಂದು ಅಧಿಕಾರದಲ್ಲಿದೆ. ಆದರೆ ಮುಂದೆ ಅವರು ಅಧಿಕಾರದ ಗದ್ದುಗೆ ಏರುವುದಿಲ್ಲ ಎಂದು ಭವಿಷ್ಯ ನುಡಿದರು.
ಬಿ.ಜೆ.ಪಿ. ಪಕ್ಷಕ್ಕೆ ಹೋಗದ ಬಗ್ಗೆ ಯಾವುದೇ ಬೇಸರ ಇಲ್ಲ. ಎಲ್ಲದಕ್ಕೂ ಅದೃಷ್ಟವಿರಬೇಕು. ನನಗೆ ಅದೃಷ್ಟವಿರಲಿಲ್ಲ, ಆದ್ದರಿಂದ ದೊಡ್ಡ ಹುದ್ದೆಗಳು ಲಭಿಸಲಿಲ್ಲ. ಬಿ.ಜೆ.ಪಿ.ಯ ಕೆಲವು ವಿಚಾರಗಳು ಹಿಡಿಸಲಿಲ್ಲ ಆದ್ದರಿಂದ ಹೊರಬಂದೆ. ಈ ಬಗ್ಗೆ ಯಾವುದೇ ಬೇಸರವಿಲ್ಲ. ತಾಲೂಕಿನ ಜನತೆಯ ಕ್ಷೇಮಕ್ಕಾಗಿ ಶ್ರಮಿಸಿದ ನೆಮ್ಮದಿಯಿದೆ ಎಂದರು.
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಒಮ್ಮೆ ವಿಪ್ ಚೀಫ್ ಆಗಿ ಕೆಲಸ ಮಾಡುತ್ತಿದ್ದೆ. ಆಗ ಯಡಿಯೂರಪ್ಪ ತಮ್ಮ ಬಲದಿಂದ ನನ್ನನ್ನು ಹಲವು ಬಾರಿ ಪೇಚಿಗೆ ಸಿಲುಕಿಸಿದ ಸಂದರ್ಭಗಳೂ ಇವೆ. ಅವರನ್ನು ಕಾಣದೆ ಹಲವು ವರ್ಷಗಳು ಕಳೆದಿವೆ. ಬಿಜೆಪಿಗೆ ಎರಡು ಬಾರಿ ಆಹ್ವಾನಿಸಿದ್ದರು, ಆದರೆ ನಿರಾಕರಿಸಿದೆ. ರಾಜಕೀಯವಾಗಿ ವಿರೋಧಿ ಬಣದಲ್ಲಿದ್ದರೂ ಖಾಸಗಿ ಜೀವನದಲ್ಲಿ ಅವರ ಜೊತೆಗಿನ ಭಾಂದವ್ಯ ಚೆನ್ನಾಗಿದೆ ಎಂದರು.