ಮದುವೆಗೆ‌ ಮಗಳನ್ನು‌ ನೀಡದ ಆಕ್ರೋಶ, ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಯತ್ನ!: ಕತ್ತಿಯಿಂದ ನಡೆಸಿದ ಮಾರಣಾಂತಿಕ ‌ಹಲ್ಲೆ ತಪ್ಪಿಸಲು ಹೋದ ಗ್ರಾ.ಪಂ. ಸದಸ್ಯನಿಗೂ‌ ಗಾಯ, ಸ್ಥಳೀಯರಿಗೆ ಕೊಲೆ‌ ಬೆದರಿಕೆ: ಸ್ಥಳೀಯರ ಸಮಯೋಚಿತ ಸಹಾಯದಿಂದ ಕೊಲೆ ಯತ್ನ‌ ವಿಫಲ

ಬೆಳ್ತಂಗಡಿ:‌‌ ನಿನ್ನ ಮಗಳನ್ನು ನನಗೆ ಮದುವೆ ಮಾಡಿ ಕೊಡುವುದಿಲ್ಲವಾ…? ನಿನ್ನ ಮಗಳನ್ನು ಮತ್ತು ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಧಮ್ಕಿ ಹಾಕಿ ವ್ಯಕ್ತಿಯೋರ್ವರನ್ನು ಕತ್ತಿಯಿಂದ ಕೊಲೆ ಮಾಡಲು ಯತ್ನಿಸಿದ ಘಟನೆ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವೇಕಾನಂದ ನಗರ ಬಳಿ ನಡೆದಿದೆ. ಈ‌‌ ಸಂದರ್ಭದಲ್ಲಿ ಹಲ್ಲೆ ತಡೆಯಲು ಹೋದ ಗ್ರಾ.ಪಂ. ಸದಸ್ಯರೊಬ್ಬರಿಗೆ ಗಾಯವಾಗಿದ್ದು, ಸ್ಥಳೀಯರಿಗೆ ಆರೋಪಿ ‌ಕೊಲೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ ಎನ್ನಲಾಗಿದೆ.

ಮಗಳನ್ನು ಮದುವೆ ಮಾಡಿ ಕೊಡಬೇಕು ಎಂದು ಹಲವು ಬಾರಿ ಕೇಳುತಿದ್ದ ಎನ್ನಲಾಗಿದ್ದು ನಿನಗೆ ಹೆಣ್ಣು ನೀಡುವುದಿಲ್ಲ ಎಂದು ನಿರಾಕರಿಸಿದ ಲಾಯಿಲಾ, ಹಳೆಪೇಟೆ, ವಿವೇಕಾನಂದ ನಗರದ ನಿವಾಸಿಯೊಬ್ಬರ ಮನೆ ಬಳಿ‌ಗೆ ಆರೋಪಿ ಕಡಬ ತಾಲೂಕು ಸುಬ್ರಹ್ಮಣ್ಯ, ಸಮೀಪದ ನಿವಾಸಿ ದಿನೇಶ ಎಂಬಾತ ಜು.11ರಂದು ಬೆಳಗ್ಗೆ ‌10.30ರ ಸುಮಾರಿಗೆ ಬೈಕಿನಲ್ಲಿ ಆಗಮಿಸಿ. ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ನಿಮ್ಮನ್ನೂ ನಿಮ್ಮ ಮಗಳನ್ನೂ ಕೊಲ್ಲದೆ ಬಿಡುವುದಿಲ್ಲ ಎಂದು , ಕೊಲೆ ಬೆದರಿಕೆ ಹಾಕಿ‌, ಮೊದಲೇ ಬ್ಯಾಗ್ ನಲ್ಲಿ ಹಿಡಿದುಕೊಂಡು ಬಂದಿದ್ದ ಕತ್ತಿಯಿಂದ ತಲೆಗೆ ಕಡಿಯಲು ಯತ್ನಿಸಿದ್ದಾನೆ, ಈ ಸಂದರ್ಭದಲ್ಲಿ ಅವರು ಕೈಯನ್ನು ಅಡ್ಡ ಹಿಡಿದಿದ್ದು ಅವರ ಕೈಗೆ ಗಂಭೀರವಾದ ಗಾಯವಾಗಿದೆ.‌ ಅವರನ್ನು ರಕ್ಷಿಸಲು‌ ಸ್ಥಳೀಯ ನಿವಾಸಿ, ಗ್ರಾ.ಪಂ.‌ ಸದಸ್ಯರೂ ಆದ ಮಹೇಶ ಆಗಮಿಸಿದ್ದು, ಅವರಿಗೂ ಗಾಯವಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯರು ಆರೋಪಿಯನ್ನು ತಡೆಯಲು ಯತ್ನಿಸಿದ್ದು, ಅವರಿಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌ ಸ್ಥಳೀಯರ ಸಮಯೋಚಿತ ಸಹಾಯದಿಂದ ಕೊಲೆ ಯತ್ನ‌ ವಿಫಲವಾದಂತೆ ಮೇಲ್ನೋಟಕ್ಕೆ ‌ಕಂಡುಬರುತ್ತಿದೆ.

error: Content is protected !!