ತಾಲೂಕಿನಲ್ಲಿ ನಡೆಯುತ್ತಿದೆ ವ್ಯವಸ್ಥಿತ ರೀತಿಯಲ್ಲಿ ಜನರಿಗೆ ಲಸಿಕೆ ತಲುಪಿಸುವ ಕಾರ್ಯ: ಶಾಸಕ ಹರೀಶ್ ಪೂಂಜ ಅಭಿಮತ:  ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆರೋಗ್ಯ ಕ್ರಾಂತಿ, ಚೇತರಿಸಿಕೊಂಡ ಸಿಯೋನ್ ಆಶ್ರಮವಾಸಿಗಳು:  ತಾಲೂಕಿನಲ್ಲಿ ಕೋವಿಡ್-19 ಎರಡನೇ ಅಲೆ‌ಯನ್ನು ರಾಜ್ಯಕ್ಕೇ ಮಾದರಿಯಾಗಿ ಎದುರಿಸಿದ ತೃಪ್ತಿ:  ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಗ್ರಾಮಸ್ಥರ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ‌ ಶಾಸಕರ ಹೇಳಿಕೆ

ಧರ್ಮಸ್ಥಳ: ಕೋವಿಡ್ 2 ನೇ ಅಲೆ ಸಂದರ್ಭದಲ್ಲಿ ತಾಲೂಕಿನಲ್ಲಿ ವ್ಯಾಕ್ಸಿನೇಷನ್‌ ಅಭಿಯಾನ ಪ್ರಾರಂಭದ ನಂತರ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಬಂದಂತಹ ಲಸಿಕೆಯನ್ನು ಬಹಳ ವ್ಯವಸ್ಥಿತ ರೀತಿಯಲ್ಲಿ ಜನರಿಗೆ ನೀಡುವಂತಹ ಕೆಲಸ ನಡೆಯುತ್ತಿದೆ.‌ ಅತೀ ಹೆಚ್ಚು ಜನಸಂಖ್ಯೆ ಇರುವ ಪಂಚಾಯತ್ ಗಳ ಜನರ ಬೇಡಿಕೆ ಹಾಗೂ ಆರೋಗ್ಯ ದೃಷ್ಟಿಯಿಂದ ಅಧಿಕಾರಿಗಳ ಜತೆ ಚರ್ಚಿಸಿ ಹೆಚ್ಚಿನ ಲಸಿಕೆಯನ್ನು ಪೊರೈಕೆ ಮಾಡಿ ಜನರಿಗೆ ನೀಡಲಾಗಿದೆ. ಅದೇ ರೀತಿ ಧರ್ಮಸ್ಥಳ ಪಂಚಾಯತ್ ಗೂ ಇಂದು ಸುಮಾರು 500 ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ಧರ್ಮಸ್ಥಳ ಗ್ರಾಮ ಪಂಚಾಯಿತಿ ವತಿಯಿಂದ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸ್ಥಳದ ಗ್ರಾಮಸ್ಥರಿಗೆ ಕೋವಿಡ್ 19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ‌‌

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಮಹಾಮಾರಿಯನ್ನು ದೂರ ಮಾಡ ಬೇಕು ಎನ್ನುವ ದೃಷ್ಟಿಯಿಂದ ತಾಲೂಕಿನಲ್ಲಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ‌ ರಜತಾದ್ರಿ ವಸತಿ ಗೃಹ ಹಾಗೂ ಲಾಯಿಲ ಟಿಬಿ ಸೆಂಟರ್ ನಲ್ಲಿರುವ ವ್ಯಸನ ಮುಕ್ತ ಕೇಂದ್ರಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಮಾಡಿ, ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಆರೋಗ್ಯ ಸೇವೆಗಳನ್ನು ನೀಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ರಜತಾದ್ರಿ ಕೋವಿಡ್ ಕೇರ್ ನಿಂದಾಗಿ ತಾಲೂಕಿನಲ್ಲಿ ದೊಡ್ಡ ಅನಾಹುತ ಆಗುವಂತಹ ಸಂಭವವನ್ನು ತಪ್ಪಿಸಿದಂತಾಗಿದೆ. ಸಿಯೋನ್ ಆಶ್ರಮದ ವಾಸಿಗಳಿಗೆ ಕೋವಿಡ್ ಬಂದಂತಹ ಸಂದರ್ಭದಲ್ಲಿ ರಜತಾದ್ರಿಯಲ್ಲಿಅವರಿಗೆ ಚಿಕಿತ್ಸೆ ಕೊಡುವ ಮೂಲಕ ಸಂಪೂರ್ಣ ಆರೋಗ್ಯವಂತರನ್ನಾಗಿಸಿ ಯಾವುದೇ ಸಾವು ನೋವು ಆಗದಂತಹ ರೀತಿಯಲ್ಲಿ ಅವರನ್ನು ನೋಡಿಕೊಂಡು ಮತ್ತೆ ಅವರನ್ನು ಆಶ್ರಮಕ್ಕೆ ಸೇರಿಸುವ ಕೆಲಸ ಧರ್ಮಾಧಿಕಾರಿಗಳ ಮಾರ್ಗದರ್ಶನದಿಂದ ನಡೆದಿದೆ‌. ಇದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಪ್ರಾರಂಭದ ದಿನಗಳಲ್ಲಿ ಬೆಂಗಳೂರಿನಲ್ಲಿ ಇರುವ ತಾಲೂಕಿನ ಮಂದಿ ಬಸ್ ವ್ಯವಸ್ಥೆ ಇಲ್ಲದೇ ಪರದಾಡುವ ಸಂದರ್ಭದಲ್ಲಿ ತಕ್ಷಣ ಬಸ್ಸಿನ ವ್ಯವಸ್ಥೆಯನ್ನು ಮಾಡಿ ಅವರನ್ನು ಊರಿಗೆ ಕರೆದುಕೊಂಡು ಬರುವಂತಹ ಕೆಲಸ, ರಾಜ್ಯದಲ್ಲೇ ಮೊದಲ ವಿಧಾನ ಸಭಾ ಕ್ಷೇತ್ರ ಬೆಳ್ತಂಗಡಿ ಆಗಿದೆ. ಕೋವಿಡ್ ಸಂದರ್ಭದಲ್ಲಿ ವಿಟಮಿನ್ ಹಾಗೂ ಝಿಂಕ್ ಮಾತ್ರೆಗಳ ಸಮಸ್ಯೆ ಆದಾಗ ದಾನಿಗಳ ಸಹಕಾರದಲ್ಲಿ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ತಲಾ 5 ಸಾವಿರದಂತೆ 65 ಸಾವಿರ ಮಾತ್ರೆಗಳನ್ನು ನೀಡಿ ಮಾತ್ರೆಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡಿದ್ದರಿಂದ ಗರ್ಭಿಣಿಯರ ಆರೋಗ್ಯದ ಹಿತದೃಷ್ಟಿಯಿಂದ ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಮನವಿಯನ್ನು ಧರ್ಮಸ್ಥಳದಲ್ಲಿ ಮಾಡಿದಾಗ ಅದಕ್ಕೆ ಸಂಪೂರ್ಣ ಸಹಕಾರ ನೀಡಿದ್ದರಿಂದ ಸುಮಾರು 95 ಹೆರಿಗೆಗಳನ್ನು ಧರ್ಮಸ್ಥಳದ ಎಸ್. ಡಿ. ಎಂ. ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗಿದೆ. ಅಷ್ಟೇ ಅಲ್ಲದೆ ತಾಲೂಕಿನ ಇತರ ಖಾಸಗಿ ಆಸ್ಪತ್ರೆಗಳು ನಮ್ಮೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರಿಂದ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಲು ಸಾಧ್ಯವಾಯಿತು ಎಂದು ಹರೀಶ್ ಪೂಂಜ ತಿಳಿಸಿದರು.

ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿದೊಡ್ಡ ಗಾತ್ರದ ಹತ್ತು ಲೀಟರ್ ಆಕ್ಸೀಜನ್ ಸಿಲಿಂಡರ್ ಗಳನ್ನು ಇರುವುದನ್ನು ಮನಗಂಡು ವಿದೇಶದಿಂದ 10 ಲೀ. ಚಿಕ್ಕ ಸಿಲಿಂಡರ್ ತರಿಸಿ ಪ್ರತಿಯೊಂದು ಕೇಂದ್ರಗಳಿಗೆ 2 ಸಿಲಿಂಡರ್ ಗಳನ್ನು ನೀಡಿ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆಗಾಗಿ ಅನುಕೂಲ ಮಾಡಿಕೊಳ್ಳಲಾಗಿದೆ. ಕುದುರೆ ಮುಖ ಕಂಪನಿಯಿಂದ ಸುಮಾರು 50 ಬೆಡ್ ಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ನೀಡಲು ಅವರಿಂದ ತರಿಸಿಕೊಳ್ಳಲಾಗಿದೆ. ಈ ರೀತಿ ಅನೇಕ ಕೆಲಸ ಕಾರ್ಯಗಳನ್ನು ತಾಲೂಕಿನ ಪ್ರಾಮಾಣಿಕವಾಗಿ ಮಾಡಲಾಗಿದೆ ಇವತ್ತಿನವರೆಗೆ ಸುಮಾರು 520ಕ್ಕಿಂತಲೂ ಅಧಿಕ ಜನರಿಗೆ ಉಚಿತವಾಗಿ “ಶ್ರಮಿಕ ಸ್ಪಂದನಾ” ಅಂಬುಲೆನ್ಸ್ ಮೂಲಕ ಸೇವೆಯನ್ನು ನೀಡಲಾಗಿದೆ. ವ್ಯಾಕ್ಸಿನೇಷನ್‌ ಲಸಿಕೆ ಅಭಿಯಾನದ ಮೂಲಕ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಜನರಿಗೆ ಲಸಿಕೆ ಸಿಗುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಯಾರು ಲಸಿಕೆ ತೆಗದುಕೊಳ್ಳಲು ಹಿಂಜರಿಯುತ್ತಾರೋ ಅವರಿಗೆ ಲಸಿಕೆ ತೆಗೆದುಕೊಂಡವರು ಧೈರ್ಯ ತುಂಬುವಂತಹ ಕೆಲಸ ಮಾಡಬೇಕು ಎಂದ ಅವರು ಮೂರನೇ ಅಲೆಯ ಬಗ್ಗೆ ತಜ್ಞರು, ಸಂಶೋಧಕರು, ಡಾಕ್ಟರ್ ಗಳು ಹೇಳಿಕೆಯನ್ನು ಎಚ್ಚರಿಕೆಯ ಮಾಹಿತಿಗಳನ್ನು ನೀಡುತಿದ್ದಾರೆ. ಅದ್ದರಿಂದ ನಮ್ಮ ಜೀವನ ಶೈಲಿ ಹಾಗೂ ಎಚ್ಚರಿಕೆಯಿಂದ ಇರುವ ಮೂಲಕ ಕೋವಿಡ್ ಮೂರನೇ ಅಲೆ ನಮಗೆ ಬಾಧಿಸದಂತೆ ನಾವು ಜಾಗೃತರಾಗಬೇಕು ಎಂದರು.

ಶಾಸಕರನ್ನು ಹಾಗೂ ತಾಲೂಕು ಆರೋಗ್ಯಾಧಿಕಾರಿ ಧರ್ಮಸ್ಥಳ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಆರೋಗ್ಯ ಸಹಾಯಕಿಯರನ್ನು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ

ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯ ಮೋನಪ್ಪ ಗೌಡ, ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು, ಧರ್ಮಸ್ಥಳ ಪ್ರಾ. ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಕಾಶ್, ತಾ.ಪಂ. ಮಾಜಿ ಅಧ್ಯಕ್ಷೆ ಧನಲಕ್ಷ್ಮೀ, ಪಿಡಿಒ ಉಮೇಶ್, ಲಸಿಕೆ ಸಂಯೋಜಕ ಉಮೇಶ್ ಕುಲಾಲ್, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ಪ್ರಥ್ವೀಶ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!