ಜಿಲ್ಲೆಯಲ್ಲೊಂದು ‘ಶೌರ್ಯ’ ವನ ನಿರ್ಮಾಣಕ್ಕೆ ಕಾರ್ಯಯೋಜನೆ: ಜು. 3ರಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಚಿಕ್ಕಮಗಳೂರಿನ ಬಣಕಲ್ ನಲ್ಲಿ ಚಾಲನೆ: ರಾಜ್ಯದಲ್ಲಿ ಸುಮಾರು 2 ಲಕ್ಷ ಗಿಡಗಳ ನಾಟಿ, 5 ಶೌರ್ಯ ವನಗಳ ನಿರ್ಮಾಣ: ರಾಜ್ಯದ 26 ತಾಲೂಕುಗಳಲ್ಲಿ ಗಿಡನಾಟಿ ಗುರಿ

ಧರ್ಮಸ್ಥಳ: ಪ್ರಾಣಿಗಳಿಗೆ ಕಾಡಿನಲ್ಲಿ ಹಣ್ಣು ಹಂಪಲುಗಳ ಗಿಡ ನೆಡ. ಜುಲೈ 3, ಶನಿವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಚಿಕ್ಕಮಗಳೂರು ಜಿಲ್ಲೆಯ ಮತ್ತಿಕಟ್ಟೆ, ಬಣಕಲ್ ಪ್ರದೇಶಕ್ಕೆ ಹಣ್ಣು ಹಂಪಲುಗಳ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅದೇ ದಿನ ಬೆಳಗ್ಗೆ 9.45ಕ್ಕೆ ಚಾರ್ಮಾಡಿ ಘಾಟಿಯ ಬಾಂಜಾರು ಮಲೆ ತಿರುವಿನ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಹಾಗೂ ಬಳ್ಳಿ, ತರಕಾರಿಗಳ ಬೀಜ ಬಿತ್ತನೆಯನ್ನು ನೆರವೇರಿಸಲಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೆಶಕ ವಿವೇಕ್ ವಿ. ಪಾಯಸ್ ಪತ್ರಿಕಾ ಪ್ರಕಟಣೆ ಮೂಲಕ‌ ತಿಳಿಸಿದ್ದಾರೆ.

ವನ್ಯ ಪ್ರಾಣಿಗಳ ಆಹಾರದ ಕೊರತೆಯನ್ನು ನೀಗಿಸಲು ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕುರಿತು ರಾಜ್ಯ ಸರಕಾರಕ್ಕೆ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಮನವಿ ಮಾಡಿದ ಹಿನ್ನಲೆಯಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿಯವರು ಧರ್ಮಸ್ಥಳದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪೂರಕ ಯೋಜನೆ ರೂಪಿಸಿ, ಜೂನ್ 5ರಂದು ಧರ್ಮಸ್ಥಳದ ದಂಡಮಲೆ ಅರಣ್ಯ ಪ್ರದೇಶದಲ್ಲಿ ವೃಕ್ಷಾ ಬಂಧನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಧರ್ಮಸ್ಥಳ ಗಾ. ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ಅವರು ಯೋಜನೆಯ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಡಾ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಲಕ 2021-22ನೇ ಸಾಲಿಗೆ ರಾಜ್ಯದಲ್ಲಿ 10 ಲಕ್ಷ ಗಿಡಗಳನ್ನು ನಾಟಿ ಮಾಡಲು ರೂ.35 ಲಕ್ಷ ಕ್ರಿಯಾಯೋಜನೆಯಲ್ಲಿ ಮೀಸಲಿಡಲಾಗಿದೆ. ಪ್ರಸ್ತುತ ಈ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಯೋಜನೆಯ ಫಲಾನುಭವಿಗಳು, ರೈತರು ಅವರ ಹೊಲ, ಗದ್ದೆಗಳ ಬದಿಯಲ್ಲಿ ಮತ್ತು ಕಾಡಿನಂಚಿನಲ್ಲಿ ಗಿಡಗಳನ್ನು ನೆಡಲು ಮಾಹಿತಿ ಮತ್ತು ಪ್ರೇರಣೆ ನೀಡಲಾಗುತ್ತಿದೆ. ಯೋಜನೆಯ ಕೆರೆ ಸಂಜೀವಿನಿ ಕಾರ್ಯಕ್ರಮದ ಮೂಲಕ ಊರಲ್ಲಿರುವ ಕೆರೆಗಳ ಹೂಳನ್ನು ತೆಗೆದು ಅಭಿವೃದ್ಧಿ ಪಡಿಸುವ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ 354 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದ್ದು, ಈ ಕೆರೆಗಳ ಬದಿಯಲ್ಲಿ ಸ್ಥಳವಕಾಶದ ಆಧಾರದಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಈಗಾಗಲೇ ಗಿಡಗಳನ್ನು ಪೂರೈಸುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ರಾಜ್ಯಾದ್ಯಂತ ಸುಮಾರು 2 ಲಕ್ಷ ಗಿಡಗಳನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ನಾಟಿ ಮಾಡಿದ್ದು, ಈಗಾಗಲೇ 5 ಶೌರ್ಯ ವನಗಳನ್ನು ನಿರ್ಮಿಸಲಾಗಿದೆ.

ತಾಲೂಕುವಾರು ರೈತರಿಗೆ ಬೇಕಾಗುವ ಗಿಡಗಳನ್ನು ಸಾಗಾಟ ಮಾಡಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ’ಶೌರ್ಯ’ ವಿಪತ್ತು ಸೇವಾ ಸಮಿತಿಯ 1,760 ಸ್ವಯಂಸೇವಕರಿಗೆ ರಾಜ್ಯದ 26 ತಾಲೂಕುಗಳಲ್ಲಿ ಗಿಡನಾಟಿ ಮಾಡಲು ಸೂಚಿಸಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲೊಂದು ಶೌರ್ಯ ವನ ನಿರ್ಮಾಣ ಮಾಡಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಸ್ವಯಂಸೇವಕರ ಖರ್ಚು ವೆಚ್ಚಗಳನ್ನು ಯೋಜನೆ ಭರಿಸಲಿದ್ದು, ಅತೀ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಿ, ಅದರ ಪೋಷಣೆಯ ವಿಚಾರದಲ್ಲೂ ಗಮನಹರಿಸುವಂತಾಗಲು ಘಟಕಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!