ಕುಗ್ರಾಮ ಹಣೆಪಟ್ಟಿ ಹೊತ್ತಿದ್ದ ಬೆಳ್ತಂಗಡಿಯ ಎರಡು ಹಳ್ಳಿಗಳಿಂದ ವಿಶ್ವಕ್ಕೆ ಕೊರೋನಾ ನಿಯಂತ್ರಣ ಪಾಠ!: ಎರಡೂ ವರ್ಷದಲ್ಲಿ ದಾಖಲಾಗಿಲ್ಲ ಒಂದೇ ಒಂದು ಪಾಸಿಟಿವ್ ಕೇಸ್!: ಹೊರಜಗತ್ತಿನ ಹಂಗಿಲ್ಲ, ಅನಗತ್ಯ ಓಡಾಟ ಇಲ್ಲವೇ ಇಲ್ಲ…!: ಮುಂಜಾಗ್ರತೆ ವಹಿಸಿ 780ಕ್ಕೂ ಹೆಚ್ಚು ಮಂದಿ ಸೇಫ್!

ಬೆಳ್ತಂಗಡಿ: ಕೊರೋನಾ ಸ್ವಾಭಿಮಾನ ಇರುವ ರೋಗ, ಯಾರಾದರೂ ‌ಹೋಗಿ‌ ಕರೆದುಕೊಂಡು‌ ಬಾರದಿದ್ದರೆ. ಅದು ಯಾರನ್ನೂ ಪ್ರವೇಶಿಸುವುದಿಲ್ಲ ಹಾಗೂ‌ ಯಾವುದೇ ಪ್ರದೇಶಗಳಲ್ಲಿ ಹರಡುವುದಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಮಾತನ್ನು ‌ಅಕ್ಷರಶಃ‌ ನಿಜ‌ ಮಾಡಿವೆ ಬೆಳ್ತಂಗಡಿ ತಾಲೂಕಿನ ಎರಡು ಹಳ್ಳಿಗಳು….!

ಬೆಳ್ತಂಗಡಿ ತಾಲೂಕಿನ ಹಳ್ಳಿಯಾದರೂ ಇತ್ತ ದ.ಕ. ಜಿಲ್ಲೆಗೆ ದೂರ, ಅತ್ತ ಚಿಕ್ಕಮಗಳೂರು ಜಿಲ್ಲೆಗೆ ಹತ್ತಿರವಿರುವ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಅಲೆಗೆ ತುತ್ತಾಗದೆ ಇದುವರೆಗೆ ಸುರಕ್ಷಿತವಾಗಿದೆ. ಅಂತೆಯೇ ದ.ಕ ಜಿಲ್ಲೆಯ ಹಾಗೂ ಬೆಳ್ತಂಗಡಿ ತಾಲೂಕಿನ ಈ ಭಾಗದ ಕೊನೆಯಲ್ಲಿರುವ ನೆರಿಯ ಗ್ರಾಮದ ಬಾಂಜಾರುಮಲೆ ಪ್ರದೇಶದಲ್ಲೂ ಎರಡು ಅವಧಿಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಈ ಮೂಲಕ ಒಂದು ಕಾಲದಲ್ಲಿ ಕುಗ್ರಾಮ ಹಣೆಪಟ್ಟಿ ಹೊತ್ತಿದ್ದ ಬೆಳ್ತಂಗಡಿ ತಾಲೂಕಿನ ಎರಡು ಹಳ್ಳಿಗಳು ವಿಶ್ವಕ್ಕೆ ಕೊರೋನಾ ನಿಯಂತ್ರಣ ಪಾಠ ಹೇಳುತ್ತಿವೆ.

ಈ ವರ್ಷ ಗ್ರಾಮಾಂತರ ಪ್ರದೇಶಗಳನ್ನು ಬೆಂಬಿಡದೆ ಕಾಡುತ್ತಿರುವ ಕೋವಿಡ್, ಹಳ್ಳಿಯ ಜನರ ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಕಾಡಂಚಿನ ದುರ್ಗಮ ಪ್ರದೇಶದಲ್ಲಿ ಇರುವ ಎಳನೀರು ಹಾಗೂ ಬಾಂಜಾರುಮಲೆಗಳ ಜನತೆ ಹೊರ ಜಿಲ್ಲೆಗಳ ಮಂದಿ ಈ ಭಾಗಕ್ಕೆ ಸುಳಿಯದಂತೆ ಮುಂಜಾಗ್ರತೆ ವಹಿಸಿದ್ದಾರೆ. ಅದೇ ರೀತಿ ತಾವೂ ಅನಗತ್ಯ ಓಡಾಟ ನಡೆಸುತ್ತಿಲ್ಲ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜೀವನ‌ ನಡೆಸುತ್ತಿದ್ದಾರೆ. ಈ ಕಾರಣದಿಂದ ಈ ಎರಡು ಪ್ರತ್ಯೇಕ ಹಳ್ಳಗಳು ಸುರಕ್ಷಿತ ವಲಯಗಳಾಗಿವೆ.

ಈ ಪ್ರದೇಶಗಳಲ್ಲಿ ಯಾವುದೇ ಹೆಚ್ಚಿನ ಸೌಕರ್ಯಗಳಿಲ್ಲದಿದ್ದರೂ, ಇಲ್ಲಿನ ಮಂದಿ ಆರೋಗ್ಯದ ಬಗ್ಗೆ ಅತಿ ಹೆಚ್ಚು ಮುಂಜಾಗ್ರತೆ ವಹಿಸುತ್ತಿರುವ ಕಾರಣ ಕೋವಿಡ್ ಬಾಧೆ ಉಂಟಾಗಿಲ್ಲ.

ಎಳನೀರು:

ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಎಳನೀರು ಪ್ರದೇಶದಲ್ಲಿ 136 ಮನೆಗಳು ಹಾಗೂ 616 ರಷ್ಟು ಜನಸಂಖ್ಯೆ ಇದೆ. 0-2ರ ಒಳಗಿನ ಪ್ರಾಯದ 9ಮಕ್ಕಳು,2-5 ಪ್ರಾಯದ 17,5ರಿಂದ 10ರ ಹರೆಯದ 24, ಹತ್ತರಿಂದ 18ರ ಹರೆಯದ 67 ಮಕ್ಕಳಿದ್ದಾರೆ. ಇಬ್ಬರು ಗರ್ಭಿಣಿಯರು ಇದ್ದಾರೆ. ಪರಿಸರದಲ್ಲಿ 137 ಮಂದಿ 45 ವರ್ಷ ಮೇಲ್ಪಟ್ಟವರಿದ್ದು 114 ಮಂದಿ ಸ್ವಯಂಪ್ರೇರಿತರಾಗಿ ಲಸಿಕೆ ಪಡೆದಿದ್ದಾರೆ.‌ ಇಲ್ಲಿ ಸಾಕಷ್ಟು ಬಾರಿ ಲಸಿಕೆ ನೀಡುವ ಹಾಗೂ ಗಂಟಲು ಸ್ರಾವ ಪರೀಕ್ಷೆ ಶಿಬಿರಗಳು, ಕೊರೋನಾ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗಂಟಲು ಸ್ರಾವ ಪರೀಕ್ಷೆಗೆ ಹಾಜರಾದ ಎಲ್ಲರ ವರದಿಗಳು ನೆಗೆಟಿವ್ ಬಂದಿವೆ.

ಎಳನೀರು ಪ್ರದೇಶಕ್ಕೆ ಮುಂಡಾಜೆ ಳಯಿಂದ ತೆರಳಬೇಕಾದರೆ 15 ಕಿ.ಮೀ. ದೂರದ ದಿಡುಪೆವರೆಗೆ ಹೋಗಿ, ಅಲ್ಲಿಂದ ದುರ್ಗಮವಾದ ಕೇವಲ ಜೀಪು ಮಾತ್ರ ಸಂಚರಿಸಬಹುದಾದ ಕಲ್ಲು, ಮಣ್ಣು, ಕೆಸರು ಹಳ್ಳ, ಕೊಳ್ಳ, ದಿಬ್ಬಗಳನ್ನು ದಾಟುತ್ತಾ ವನ್ಯಮೃಗಗಳ ಭಯದೊಂದಿಗೆ 7 ಕಿ.ಮೀ. ದೂರವನ್ನು ಕ್ರಮಿಸಬೇಕು. ಈ ದೂರವನ್ನು ಕ್ರಮಿಸಲು ಕನಿಷ್ಠ ಒಂದೂವರೆಯಿಂದ ಎರಡು ಗಂಟೆ ಅವಧಿ ಬೇಕು. ಚಾರ್ಮಾಡಿ ಅಥವಾ ಬಜಗೋಳಿ ಮೂಲಕ ಹೆದ್ದಾರಿಯಲ್ಲಿ ಹೋಗಿ ಬರುವುದಾದರೆ ಸುಮಾರು 260ಕಿ.ಮೀ. ಪ್ರಯಾಣವಾಗುತ್ತದೆ.‌ ಈ ಪ್ರದೇಶಕ್ಕೆ ಯಾವ ದಾರಿಯಲ್ಲಿ ಹೋಗಿ ಬಂದರು ಕನಿಷ್ಠ ನಾಲ್ಕು ಗಂಟೆಗಳಷ್ಟು ಪ್ರಯಾಣ ಮಾಡಬೇಕಾದುದು ಅನಿವಾರ್ಯ. ಚಿಕ್ಕಮಗಳೂರು ಜಿಲ್ಲೆಯ ಸಂಸೆಯಿಂದ ಎಳನೀರು 5 ಕಿ.ಮೀ. ವ್ಯಾಪ್ತಿಯ ಒಳಗಿದೆ. ಇಂತಹ ಈ ಪ್ರದೇಶಕ್ಕೆ ಬೆಳ್ತಂಗಡಿ ತಾಲೂಕಿನ ಆರೋಗ್ಯ, ಪಂಚಾಯಿತಿ ಹಾಗೂ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರು ಹೋಗಿ ಬರುವುದೇ ಒಂದು ಸವಾಲು. ಇಲ್ಲಿ ಯಾವುದೇ ಶಿಬಿರಗಳನ್ನು ನಡೆಸಬೇಕಾದರೆ ಅಗತ್ಯ ಸೌಲಭ್ಯಗಳು ಇಲ್ಲ. ಮೊಬೈಲ್ ನಲ್ಲಿ ಮಾತನಾಡುವಷ್ಟು ನೆಟ್ ವರ್ಕ್ ಸಿಗುವುದಿಲ್ಲ. ಶಿಬಿರಗಳನ್ನು ನಡೆಸುವಾಗ ಆನ್ಲೈನ್ ನೋಂದಾವಣೆ ಮಾಡುವುದು ಬಹುದೊಡ್ಡ ಸವಾಲು. ಇದಕ್ಕಾಗಿ ಗುಡ್ಡ ಬೆಟ್ಟಗಳನ್ನು ಏರಬೇಕಾದ ಅಗತ್ಯವಿದೆ. ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವ್ಯಾ ವೈಪನಾ ಅವರ ತಂಡ ಈ ಪ್ರದೇಶಕ್ಕೆ ತಿಂಗಳಲ್ಲಿ ಆಗಾಗ ಭೇಟಿ ನೀಡುತ್ತಿದ್ದು ಪ್ರದೇಶದ ಜನರ ಯೋಗಕ್ಷೇಮ ವಿಚಾರಿಸಿ ಮುಂಜಾಗ್ರತೆ ಕುರಿತು ಸೂಚಿಸುತ್ತಿದ್ದಾರೆ.

ಬಾಂಜಾರುಮಲೆ: 

ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಂಜಾರುಮಲೆಗೆ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಬಲಕ್ಕೆ ತಿರುಗಿ 10‌ ಕಿ.ಮೀ. ಸಾಗಬೇಕು ಪರಿಶಿಷ್ಟ ಜಾತಿಯ 43 ಕುಟುಂಬಗಳಿದ್ದು,168 ರಷ್ಟು ಜನಸಂಖ್ಯೆ ಇದೆ. ಸರಿಯಾದ ರಸ್ತೆ ಸಹಿತ ಯಾವುದೇ ಹೆಚ್ಚಿನ ವ್ಯವಸ್ಥೆ ಇಲ್ಲದೆ ಇಲ್ಲಿನ ಮಂದಿ ಕಾಡಾನೆ ಹಾಗೂ ಇತರ ವನ್ಯಮೃಗಗಳ ಭಯದ ಮಧ್ಯೆ ಕೃಷಿ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಐದು ವರ್ಷಕ್ಕಿಂತ ಕಡಿಮೆ ಹರೆಯದ 22 ಮಕ್ಕಳು,14 ವರ್ಷದೊಳಗಿನ 14 ಮಕ್ಕಳು, 60 ವರ್ಷ ಮೇಲ್ಪಟ್ಟ 20 ಜನ ಹಾಗೂ ಓರ್ವ ಗರ್ಭಿಣಿ ಇದ್ದಾರೆ. ಇಲ್ಲಿನ ಜನ ಅಡಕೆ,ತೆಂಗು ರಬ್ಬರ್ ಕೃಷಿಯ ಮಧ್ಯೆ ಸಾವಯವ ತರಕಾರಿಯನ್ನು ಬೆಳೆಯುತ್ತಾರೆ. ಕೋವಿಡ್ ಅಲೆ ಬೀಸುವ ಸಮಯ ಇಲ್ಲಿನ ಮಂದಿ ಮನೆ ಬಿಟ್ಟು ಹೊರಬರುವುದಿಲ್ಲ. ಅಗತ್ಯ ಸಾಮಾಗ್ರಿಗಳನ್ನು ಪಂಚಾಯಿತಿ ಸದಸ್ಯ ಅಥವಾ ಯಾರಾದರೂ ಒಂದಿಬ್ಬರು ಇಪ್ಪತ್ತು ಕಿಮೀ ದೂರದಲ್ಲಿರುವ ಕಕ್ಕಿಂಜೆ ಪೇಟೆಯಿಂದ ತರುತ್ತಾರೆ. ಹೊರ ಪ್ರದೇಶದ ಜನರು ತಮ್ಮ ಪರಿಸರಕ್ಕೆ ಬರದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಪ್ರದೇಶಗಳ‌ ಬಗ್ಗೆ ಸ್ಥಳೀಯ ಶಾಸಕ ಹರೀಶ್ ಪೂಂಜ ಅವರು ಹೆಮ್ಮೆ ವ್ಯಕ್ತಪಡಿಸಿದ್ದು, ತಾಲೂಕಿನ ಎರಡು ವಿಭಿನ್ನ ಪ್ರದೇಶಗಳಾದ ಬಾಂಜಾರು‌ಮಲೆ‌ ಹಾಗೂ ಎಳನೀರು ‌ಪ್ರದೇಶಗಳ‌ ಜನತೆ‌ ಮುನ್ನೆಚ್ಚರಿಕೆ ವಹಿಸಿ ಕೊರೋನಾದಿಂದ ದೂರವಿರುವುದು ಮಾದರಿಯಾಗಿದೆ. ಅವರ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ರೀತಿ ಈ ಎರಡೂ ಪ್ರದೇಶಗಳ ಸಕಲ ಅಭಿವೃದ್ಧಿಗೆ ಕ್ರಮ‌‌ ಕೈಗೊಳ್ಳಲಾಗುತ್ತಿದೆ ಎಂದು ‌ತಿಳಿಸಿದ್ದಾರೆ.‌

ನೆರಿಯ ಗ್ರಾಪಂ ಪಿಡಿಒ ಗಾಯತ್ರಿ ಪಿ. ಪ್ರತಿಕ್ರಿಯಿಸಿ, ಬಾಂಜಾರುಮಲೆ ನಿವಾಸಿಗಳಿಗೆ ಪಡಿತರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಪೌಷ್ಟಿಕ ಆಹಾರವನ್ನು ಅಲ್ಲಿನ ಸಮುದಾಯ ಭವನಕ್ಕೆ ಪ್ರತಿ ತಿಂಗಳು ಕಳುಹಿಸಿಕೊಡಲಾಗುತ್ತದೆ. ಇದರಿಂದ ಹೆಚ್ಚಿನ ಮಂದಿ ಪೇಟೆಗಳಿಗೆ ತೆರಳುವ ಅಗತ್ಯ ಇರುವುದಿಲ್ಲ, ಈ ಕಾರಣದಿಂದ ಬಾಂಜಾರುಮಲೆ ಪ್ರದೇಶ ಕೋವಿಡ್ ನಿಂದ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಹಾಗೂ ಮಲವಂತಿಗೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಜೈನ್ ಎಳನೀರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಜಲಪಾತ, ಚಾರಣ ಹಾಗೂ ಇನ್ನಿತರ ಆಕರ್ಷಣೆಗಳನ್ನು ಹೊಂದಿರುವ ಹೊರಗಿನ ಜನ ಬರದಂತೆ ಊರವರು ಒಟ್ಟಾಗಿ ನೋಡಿಕೊಳ್ಳುತ್ತಿದ್ದೇವೆ. ಹೊರ ಜಿಲ್ಲೆಯಲ್ಲಿರುವ ಇಲ್ಲಿನ ಮಂದಿ ಕೋವಿಡ್ ಸಮಯದಲ್ಲಿ, ಈ ಪ್ರದೇಶಕ್ಕೆ ಬರದಂತೆ ಪರಸ್ಪರ ಹೊಂದಾಣಿಕೆಯಿಂದ ಮುಂಜಾಗ್ರತೆ ವಹಿಸಿದ್ದೇವೆ. ಇಲ್ಲಿನ ಮಂದಿ ಯಾವುದೇ ಅನಗತ್ಯ ಸಂಚಾರಗಳನ್ನು ನಡೆಸದೆ ರೋಗದ ವಿರುದ್ಧ ಮುಂಜಾಗ್ರತೆ ವಹಿಸುತ್ತಿರುವುದು ಫಲ‌ ನೋಡಿದೆ.

ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಪ್ರತಿಕ್ರಿಯಿಸಿ, ಎಳನೀರು ಹಾಗೂ ಬಾಂಜಾರುಮಲೆ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಇಲಾಖೆ ವತಿಯಿಂದ ಈ ಪ್ರದೇಶಗಳಲ್ಲಿ ಮುಂಜಾಗ್ರತೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಇಲ್ಲಿನ ಜನರು ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಹೊಂದಿದ್ದು ಇಲಾಖೆಗಳ ಕೋವಿಡ್ ನಿಯಮಗಳಿಗೆ ಸಂಪೂರ್ಣವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

error: Content is protected !!