ಬೆಳ್ತಂಗಡಿ: ಕೋವಿಡ್-19 ನಿಯಂತ್ರಣ ಪ್ರಗತಿ ಪರಿಶೀಲಿಸಲು ಬುಧವಾರ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ಜಿ.ಪಂ. ಸಿಇಒ ಡಾ. ಕುಮಾರ್ ಅವರು ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ, ತಾಲೂಕು ಆಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು.
ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ತಾಲೂಕು ವೈದಾಧಿಕಾರಿ ಹಾಗೂ ಆಸ್ಪತ್ರೆ ಆಡಳಿತ ವೈದಾಧಿಕಾರಿ ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ತಾಲೂಕು ಆಸ್ಪತ್ರೆಯಲ್ಲಿರುವ ಕೋವಿಡ್ ವಾರ್ಡ್‌ಗಳನ್ನು ವೀಕ್ಷಿಸಿ, ಸೋಂಕಿತರಿಂದ ವ್ಯವಸ್ಥೆ ಕುರಿತು ಮಾಹಿತಿ ಸಂಗ್ರಹಿಸಿದರು. ಆಸ್ಪತ್ರೆಯಲ್ಲಿರುವ ಇನ್ನಿತರ ವಾರ್ಡ್‌ಗಳನ್ನೂ ವೀಕ್ಷಿಸಿದರು. ಕೋವಿಡ್ ಸಂದರ್ಭ ಹಾಗೂ ಮುಂದಿನ ದಿನಗಳಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಆಸ್ಪತ್ರೆಯ ವೈದ್ಯರು, ದಾದಿಯರಿಗೆ ಅಗತ್ಯ ಚಿಕಿತ್ಸೆಗಳ ಕುರಿತು ಸಲಹೆ, ಸೂಚನೆಗಳನ್ನು ನೀಡಿದರು.
ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಭೇಟಿ ನೀಡಿ ಅಲ್ಲಿವ ವ್ಯವಸ್ಥೆಯನ್ನು ಅವಲೋಕಿಸಿದ ಜಿಲ್ಲಾಧಿಕಾರಿಯವರು ಮಾಧ್ಯಮದೊಂದಿಗೆ ಮಾತನಾಡಿ, ಮೂರನೇ ಅಲೆ ಬಂದಾಗ ಏನೇನು ತಯಾರು ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮಕ್ಕಳ ತಜ್ಞರ ಸಭೆ ಕರೆದು ಸಮಾಲೋಚನೆ ನಡೆಸಲಾಗಿದೆ. ಯಾವ ಯಾವ ರೀತಿಯಲ್ಲಿ ಮೂಲಸೌಕರ್ಯವನ್ನು ಮಾಡಲು ಸಾಧ್ಯವೋ ಅದರ ಕುರಿತು ರೂಪರೇಶೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 18 ಜನ ಜನರಲ್ ವಾರ್ಡ್‌ನಲ್ಲಿ ಹಾಗೂ ಒಬ್ಬರು ಐಸಿಯುನಲ್ಲಿ ಇದ್ದಾರೆ. ಸೋಂಕಿತರ ಜತೆ ಮಾತನಾಡಿದಾಗ ಚಿಕಿತ್ಸೆ ಹಾಗೂ ಊಟದ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮೆಡಿಸಿನ್ ಕೊರತೆ ಇಲ್ಲ. ಆಕ್ಸಿಜನ್ ಜಂಬೋ ಸಿಲಿಂಡರ್‌ಗಳು ಕೂಡ ಲಭ್ಯವಿದ್ದು, ಹೆಚ್ಚುವರಿಯಾಗಿ ತರಿಸಲು ವ್ಯವಸ್ಥೆ ಮಾಡಲಾಗಿದೆ. ಸರಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಆಕ್ಸಿಜನ್ ಪ್ಲಾಂಟ್ ಕಾಮಗಾರಿ ನಡೆಯುತ್ತಿದೆ. ಲಿಕ್ವಿಡ್ ಆಕ್ಸಿಜನ್ ಸಿಲಿಂಡರ್‌ನ್ನು ತರಿಸುವುದಕ್ಕೆ ಕೂಡಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಎಲ್ಲಾ ಖಾಸಗಿ ಕ್ಲಿನಿಕ್‌ಗಳಲ್ಲೂ ರೋಗ ಲಕ್ಷಣ ಇರುವ ರೋಗಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ. ಟೆಸ್ಟ್ ಮಾಡಿಸದಿದ್ದ ಪ್ರಕರಣಗಳು ನಮ್ಮ ಗಮನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಂತವರ ಪರವಾನಿಗೆಯನ್ನು ಕೂಡ ರದ್ದು ಮಾಡಲಾಗುವುದು. ಕೋವಿಡ್ ಸೋಂಕಿನ ರೋಗ ಲಕ್ಷಣವಿರುವ ಎಲ್ಲರನ್ನೂ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ಸೋಂಕು ದೃಢಪಟ್ಟರೆ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈಗಾಗಲೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಗಳಿಗೆ ಒಂದೊಂದು ವಾಹನ ಕೊಟ್ಟಿದ್ದೇವೆ. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಖಾಸಗಿ ಕ್ಲಿನಿಕ್‌ಗಳಿಗೆ ಜಾಸ್ತಿ ಬರುತ್ತಿದ್ದಾರೆ. ಜಾಸ್ತಿ ಜನರು ಇದ್ದಲ್ಲಿಗೆ ನಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಸ್ವಾಬ್ ತೆಗೆಯಲು ಸೂಚಿಸಲಾಗಿದೆ. ಜನರು ತಮ್ಮ ಆರೋಗ್ಯ ದೃಷ್ಟಿಯಿಂದ ಇಲಾಖೆಗೆ ಸಹಕಾರ ನೀಡಬೇಕು. ಜನರಿಗೆ ಜಾಗೃತಿ ಜತೆಗೆ ಮನವೊಲಿಸುವ ಕೆಲಸ ಕೂಡಾ ಮಾಡಬೇಕಾಗಿದೆ ಎಂದರು.
ಕೊಕ್ಕಡ ಆರೋಗ್ಯ ಕೇಂದ್ರದಲ್ಲಿ ಕಾರ್ಯಚರಿಸಲು ಕಾರಣಾಂತರಗಳಿಂದ ತಡವಾಗಿದೆ. 15 ದಿನದಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಚಾರ್ಮಾಡಿ ಆರೋಗ್ಯ ಕೇಂದ್ರವನ್ನು ಹಸ್ತಾಂತರಿಸಲಾಗಿದ್ದು, ಶೀಘ್ರದಲ್ಲಿ ಶುರು ಮಾಡಲಾಗುವುದು ಕ್ರಮ ವಹಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಗಟ್ಟಿ ಮಾಡಲಾಗುವುದು. ಕೋವಿಡ್ ವಾರ್ಡ್‌ಗಳಿಗೆ ಸುರಕ್ಷತೆ ಇಲ್ಲದೆ ಹೊರಗಿನಿಂದ ಯಾರು ಕೂಡ ಹೋಗುವಂತಿಲ್ಲ. ವಯಸ್ಸಾದ ಯಾರಾದರೂ ಇದ್ದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿ ಅಂತವರ ಆರೈಕೆಯ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದರು.
ಝಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳು ಲಭ್ಯವಿದೆ. ಎಲ್ಲೆಲ್ಲಿ ಅವಕಾಶವಿದೆಯೋ ಅಂತಹ ಆಸ್ಪತ್ರೆಯವರು ಹೊರಗಿನಿಂದ ತೆಗೆದುಕೊಳ್ಳಲು ಅವಕಾಶವಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿರುವ ಎಳನೀರು ಅಂತ ಪ್ರದೇಶಗಳಿಗೆ ಇಲಾಖೆಯ ವಾಹನದಲ್ಲಿ ಅಲ್ಲಿಗೆ ಹೋಗಿ ಆಯಾಯ ಕೆಟಗರಿ ಲಸಿಕೆ ನೀಡುವುದಕ್ಕೆ ತಾಲೂಕು ಆರೋಗ್ಯಾಧಿಕಾರಿಯವರಿಗೆ ಸೂಚಿಸಿದ್ದೇನೆ. ಯುವ ಜನತೆಯಲ್ಲಿ ಜಾಗೃತಿ ಮೂಡಿದೆ. ಡಿಮ್ಯಾಂಡ್ ಜಾಸ್ತಿಯಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೆಲೆಯಲ್ಲಿ ಲಸಿಕೆ ನೀಡಲಾಗುತ್ತದೆ. ಜೂನ್ ಕೊನೆಯಲ್ಲಿ ಲಸಿಕೆ ಎಲ್ಲರಿಗೂ ಸಿಗಲಿದೆ ಎಂದರು.
ಜೂನ್ 7 ಬಳಿಕ ಲಾಕ್ ಡೌನ್ ಕುರಿತು ಸರಕಾರ ಏನು ನಿರ್ಣಯ ಮಾಡುತ್ತದೆಯೋ ಅದರ ಮೇಲೆ ಏನು ಮಾಡಬಹುದು ಎಂದು ಸರಕಾರದ ನಿರ್ಧಾರವನ್ನು ನೋಡಿಕೊಂಡು ನಿರ್ಧರಿಸಲಾಗುವುದು ಎಂದರು.
ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಜಿ.ಪಂ. ಸಿಇಒ ಡಾ. ಕುಮಾರ್, ಕೋವಿಡ್-19 ನೋಡೆಲ್ ಅಧಿಕಾರಿ ವೆಂಕಟೇಶ್, ತಹಸೀಲ್ದಾರ್ ಮಹೇಶ್ ಜೆ., ಇಒ ಕುಸುಮಧರ್, ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು, ತಾಲೂಕು ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಸಹಾಯಕ ಆಡಳಿತಾಧಿಕಾರಿ ಶ್ರೀಕಾಂತ್ ಹೆಗ್ಡೆ, ವೈದ್ಯರುಗಳಾದ ಡಾ. ಚಂದ್ರಕಾಂತ್, ಡಾ. ಆದಂ, ಡಾ. ಶಶಾಂಕ್ ಕಾಂಬ್ಳೆ, ಕಚೇರಿ ಅಧೀಕ್ಷಕ ಲೋಕೇಶ್, ಶುಶ್ರೂಷಕರ ಅಧೀಕ್ಷಕಿ ಜೋಯ್ಸಿ ಫೆರ್ನಾಂಡೀಸ್, ತಾಲೂಕು ಆರೋಗ್ಯ ಕಚೇರಿ ಕಾರ್ಯಕ್ರಮ ವ್ಯವಸ್ಥಾಪಕ ಅಜಯ್ ಇದ್ದರು.