ಬೆಳ್ತಂಗಡಿ: ಅಲ್ಲಾಟ ಹಾಗೂ ಲಾಯ್ಲ ಗ್ರಾಮದ ನಿವಾಸಿಗಳಿಗೆ ರಸ್ತೆಯ ಮೂಲಕ ಬೆಳ್ತಂಗಡಿ ನಗರವನ್ನು ಸೇರಲು ಚರ್ಚ್ ರೋಡ್ ಮೂಲಕ ಸ್ವಲ್ಪ ದೂರ ಕ್ರಮಿಸಬೇಕಾಗಿತ್ತು ಅದರೆ ಇದೀಗ ಈ ರಸ್ತೆ ಮೂಲಕ ಕೆಲವೇ ನಿಮಿಷಗಳಲ್ಲಿ ಮುಖ್ಯ ಹೆದ್ದಾರಿಯನ್ನೂ ಸಂಪರ್ಕಿಸಬಹುದು .ಅದ್ದರಿಂದ ಬಹು ವರುಷಗಳ ಈ ಭಾಗದ ಜನರ ಬೇಡಿಕೆ ಇಡೇರಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು. ಅವರು ನಗರ ಪಂಚಾಯತ್ ವ್ಯಾಪ್ತಿಯ 3 ನೇ ವಾರ್ಡಿನ ಅಲ್ಲಾಟಬೈಲಿನಿಂದ ಬೆಳ್ತಂಗಡಿ ನಗರದ ಸಂತೆಕಟ್ಟೆ ಸಮೀಪ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ನೂತನ ರಸ್ತೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಅಲ್ಲಾಟ ಹಾಗೂ ಲಾಯ್ಲ ಗ್ರಾಮಕ್ಕೆ ಸಂಬಂಧಪಟ್ಟ ಹಲವು ಮನೆಗಳಿಗೆ ಬೆಳ್ತಂಗಡಿ ನಗರವನ್ನು ಸಂಪರ್ಕಿಸಲು ಅತೀ ಹತ್ತಿರವಾದ ಸಂಪರ್ಕ ರಸ್ತೆಗೆ ಸ್ವ ಇಚ್ಛೆಯಿಂದ ಜಾಗವನ್ನು ಬಿಟ್ಟುಕೊಟ್ಟ ಎಲ್ಲರಿಗೂ ಅಭಿನಂದನೆಗಳು ಎಂದ ಶಾಸಕರು ಈಗಾಗಲೇ ಈ ರಸ್ತೆಗೆ 20 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನದ ಮೂಲಕ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಜನರ ಬಹುವರುಷಗಳ ಬೇಡಿಕೆಯನ್ನು ಈಡೇರಿಸಲಾಗುವುದು.
ಅದಲ್ಲದೆ ಬೆಳ್ತಂಗಡಿ ನಗರದಿಂದ ಸೀಡ್ ಫಾರ್ಮ್ಸ್ ಮೂಲಕ ಬಜಕ್ರೆಸಾಲ್ ಸಡಕ್ ರಸ್ತೆಯನ್ನು ಸಂಪರ್ಕಿಸುವ ರಸ್ತೆಯ ಬಹು ವರುಷಗಳ ಬೇಡಿಕೆ ಇದ್ದು ಈ ಬಗ್ಗೆ ಈಗಾಗಲೇ ಪ್ರಸ್ತಾಪ ಕಳಿಸಿದ್ದು ಮುಂದಿನ ದಿನಗಳಲ್ಲಿ ಈ ಸಂಪರ್ಕ ರಸ್ತೆಯನ್ನೂ ಮಾಡಲಾಗುವುದು ಎಂದ ಅವರು ನಗರ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ತಮ್ಮ ವಾರ್ಡ್ ಗಳ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡುತಿದ್ದಾರೆ.
ನಗರಕ್ಕೆ ತಾಗಿಕೊಂಡು ಇರುವ ಲಾಯ್ಲ ಗ್ರಾಮ ಪಂಚಾಯತ್ ನ ಈ ಭಾಗದ ರಸ್ತೆಗಳನ್ನೂ ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅಭಿವೃದ್ಧಿ ಪಡಿಸಲಾಗುವುದು ಈ ಮೂಲಕ ಸಂಪರ್ಕ ರಸ್ತೆಗಳು ನಿರ್ಮಾಣವಾದಲ್ಲಿ ಆ ಭಾಗದ ಜನರು ಅಭಿವೃದ್ಧಿ ಹೊಂದುತ್ತಾರೆ ಎಂದರು. ರಸ್ತೆ ನಿರ್ಮಾಣಕ್ಕೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಶಾಸಕರನ್ನು ನಗರ ಪಂಚಾಯತ್ 3 ನೇ ವಾರ್ಡಿನ ಸದಸ್ಯ ಶರತ್ ಶೆಟ್ಟಿ ವಾರ್ಡಿನ ಪರವಾಗಿ ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ನ.ಪಂ ಸದಸ್ಯರುಗಳಾದ ಅಂಬರೀಶ್, ಲೋಕೇಶ್ ನ.ಪಂ ಮಾಜಿ ಅಧ್ಯಕ್ಷೆ ವೀಣಾ, ಭಾಸ್ಕರ ಧರ್ಮಸ್ಥಳ, ನ.ಪಂ ಇಂಜಿನಿಯರ್ ಮಹಾವೀರ ಅರಿಗ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.