ಬೆಳ್ತಂಗಡಿ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರಕಾರ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ವರೆಗೆ ವಿಕೇಂಡ್ ಕರ್ಫ್ಯೂ ಜ್ಯಾರಿ ಮಾಡಿದ್ದು, ತಾಲೂಕಿನ ಜನತೆ ಸ್ಪಂದನೆ ನೀಡಿದ್ದಾರೆ.
ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು. ಈ ಬಾರಿಯ ವಿಕೇಂಡ್ ಕರ್ಫ್ಯೂ ಜನರಲ್ಲಿ ಪರಿಣಾಮ ಬೀರಿದಂತಿತ್ತು. ಶನಿವಾರ ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಅಂಗಡಿಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು.
ಶನಿವಾರ 10 ಗಂಟೆಯ ಬಳಿಕ ತಾಲೂಕಿನ ನಗರ ಭಾಗಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಜಿನಸಿ ಅಂಗಡಿಗಳು, ಹಾಲು, ತರಕಾರಿ, ಮಾಂಸದಂಗಡಿಗಳು ಇತ್ಯಾದಿ ಜನರಿಗೆ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿತ್ತು. ಉಳಿದಂತೆ ಸರಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಅಂಗಡಿಗಳು ತೆರೆದಿರಲಿಲ್ಲ. ಸರಕಾರಿ ಕಚೇರಿಗಳಲ್ಲಿ, ಇನ್ನಿತರ ಅಗತ್ಯ ಕಚೇರಿಗಳ ಸಿಬ್ಬಂದಿಗಳಿಗೆ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಪೆಟ್ರೋಲ್ ಬಂಕ್‌ಗಳು ಕಾರ್ಯ ನಿರ್ವಹಿಸಿದೆ.
ಮಂಗಳೂರು ಡಿಪ್ಪೋದ ಸರಕಾರಿ ಬಸ್‌ಗಳು ಧರ್ಮಸ್ಥಳ-ಮಂಗಳೂರು ನಡುವೆ ಓಡಾಟ ನಡೆಸಿತ್ತು. ಬೆರಳೆಣಿಕೆಯ ಅಟೋಗಳು ಬೀದಿಗಿಳಿದಿದ್ದವು. ಕಳೆದ ಬಾರಿಯ ಲಾಕ್ ಡೌನ್ ಸಂದರ್ಭ ಅನಗತ್ಯವಾಗಿ ವಾಹನಗಳು ಓಡಾಟ ನಡೆಸಿದ್ದವು. ಸಂಬಂಧಪಟ್ಟ ಇಲಾಖೆಯವರು ಕೊರೋನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದರೂ ಕೂಡಾ ನೆಪ ಹೇಳಿಕೊಂಡು ಓಡಾಟ ನಡೆಸಿದ್ದರು. ಆದರೆ ಈ ಬಾರಿಯ ವೀಕೆಂಡ್ ಕರ್ಫ್ಯೂ ಮೊದಲ ದಿನವೇ ಜನರಲ್ಲಿ ಭಯ ಮೂಡಿದಂತಾಗಿದೆ. ಅನಗತ್ಯ ಓಡಾಟ ಕಂಡು ಬಂದಿಲ್ಲ.
ಬೆಳ್ತಂಗಡಿ ಪೊಲೀಸ್ ವೃತ್ತ ವ್ಯಾಪ್ತಿಯ ಬೆಳ್ತಂಗಡಿ ಠಾಣೆ, ವೇಣೂರು ಠಾಣೆ, ಪುಂಜಾಲಕಟ್ಟೆ ಠಾಣೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮದಲ್ಲೂ ಪೊಲೀಸರನ್ನು ನಿಯೋಜನೆಗೊಳಿಸಲಾಗಿತ್ತು. ಬೀಟ್ ಪೊಲೀಸರು ಆಯಾಯಾ ಗ್ರಾಮಗಳಲ್ಲಿ ಅನಗತ್ಯ ಓಡಾಟ ನಡೆಸುವವರಿಗೆ ಕಡಿವಾಣವನ್ನು ಹಾಕಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಯ ನಂತರ ಪೊಲೀಸ್ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡಲಾಗಿತ್ತು. ಬೆಳ್ತಂಗಡಿ ಸಂಚಾರಿ ಪೊಲೀಸರು ಅನಗತ್ಯ ಓಡಾಟ ನಡೆಸುವ ವಾಹನಗಳ ಮೇಲೆ ನಿಗಾ ವಹಿಸಿದ್ದಾರೆ. ಚಾರ್ಮಾಡಿ, ವೇಣೂರು, ನಾರಾವಿಯಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. ಇದಲ್ಲದೆ ಉಜಿರೆ, ಬೆಳ್ತಂಗಡಿ, ಸಬರಬೈಲು, ಕೊಕ್ಕಡ, ಪುಂಜಾಲಕಟ್ಟೆ ಮೊದಲಾದ ಆಯಕಟ್ಟಿನ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಅನಗತ್ಯ ಓಡಾಟ ನಡೆಸುವ ವಾಹನಗಳಿಗೆ ಕಡಿವಾಣ ಹಾಕಿದ್ದಾರೆ.
ವೀಕೆಂಡ್ ಕರ್ಫ್ಯೂ ಸಂದರ್ಭ ಮದುವೆ ಇನ್ನಿತರ ಶುಭ ಕಾರ್ಯಗಳಿಗೆ ಶರ್ತಬದ್ಧ ಪರವಾನಿಗೆ ಪಡೆದು ವಾಹನ ಓಡಾಟಕ್ಕೆ ಅವಕಾಶ ಕಲಿಸಲಾಗಿದೆ. ಈಗಾಗಲೇ ಆಯಾಯ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದವರು ಶುಭ ಕಾರ್ಯ ನಡೆಸುತ್ತಿದ್ದು, ಸರಕಾರದ ಆದೇಶವನ್ನು ಸಾಧ್ಯವಾದಷ್ಟು ಮಟ್ಟಿಗೆ ಪಾಲಿಸುತ್ತಿದ್ದಾರೆ. ಇಂದು ಕೂಡಾ ತಾಲೂಕಿನಾದ್ಯಂತ ಹೆಚ್ಚು ಮದುವೆ ಸಮಾರಂಭಗಳಿದ್ದು, ಸೂಕ್ತ ದಾಖಲೆಯೊಂದಿಗೆ, ಪರವಾನಿಗೆ ಪಡೆದವರಿಗೆ ಮಾತ್ರ ಓಡಾಟ ನಡೆಸಲು ಅವಕಾಶ ಕಲ್ಪಿಸಲಾಗಿದೆ.