ಮಂಗಳೂರು: ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಜಿರೆ ಬಾಲಕ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2020ರ ಡಿಸೆಂಬರ್‌ನಲ್ಲಿ ಬೆಳ್ತಂಗಡಿಯ ಉಜಿರೆ ಗ್ರಾಮದ ರಥಬೀದಿಯಲ್ಲಿ ಅಭಿನವ್ ಎಂಬ ಬಾಲಕನನ್ನು ಅಪಹರಿಸಲಾಗಿತ್ತು. ಕೋಲಾರದ ನಾಲ್ವರು ಆರೋಪಿಗಳು ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್ ವ್ಯವಹಾರದಲ್ಲಿ ಉಂಟಾದ ವಿರಸದಿಂದಾಗಿ ಆರೋಪಿಗಳು ಈ ಅಪಹರಣ ಮಾಡಿದ್ದರು ಎನ್ನಲಾಗಿದ್ದು, ಮರುದಿನವೇ ಬೆಳ್ತಂಗಡಿಯ ಪೊಲೀಸರು ಅಪಹೃತ ಬಾಲಕನನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ರಕ್ಷಣೆ ಮಾಡಿದ್ದರು. ಅಲ್ಲದೆ, ಅಪಹರಣ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಪ್ರಕರಣದ ತನಿಖಾ ಹಂತದಲ್ಲಿ ಆರೋಪಿಗಳ ಜಾಮೀನನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿರಸ್ಕರಿಸಿದ್ದರು. ಮತ್ತು ಈ ತೀರ್ಪನ್ನು ರಾಜ್ಯ ಉಚ್ಚ ನ್ಯಾಯಾಲಯವೂ ಎತ್ತಿಹಿಡಿದಿತ್ತು.
ಇದೀಗ, ಆರೋಪಿಗಳಿಬ್ಬರು ಜಾಮೀನಿಗೆ ಮರು ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಪುರಸ್ಕರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀಧರ ಪೈ ಅವರು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ.
ಆರೋಪಿಗಳ ಪರ ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ವಾದಿಸಿದ್ದರು.