ಬೆಳ್ತಂಗಡಿ: ರಾಜ್ಯ ಸರ್ಕಾರ ಮುಷ್ಕರ ನಿರತ ಕರ್ನಾಟಕ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲಾಗಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ
ಸಂವಿಧಾನ ಬದ್ದ ಹೋರಾಟವನ್ನು ಹತ್ತಿಕ್ಕುವ ನೀಚ ಕೆಲಸ ಮಾಡುತ್ತಿದೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷ , ಹಿರಿಯ ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು.
ಅವರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ , ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ನೌಕರರ ಕುಟುಂಬಸ್ಥರ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.
ಸಾರಿಗೆ ನೌಕರರು ಆಡಳಿತಗಾರರ ಆಸ್ತಿಯನ್ನು ಕೇಳುತ್ತಿಲ್ಲ , ಬದಲಾಗಿ ಸಂವಿಧಾನ ಬದ್ದ ಹಕ್ಕುಗಳನ್ನು ಕೇಳುತ್ತಿದ್ದಾರೆ ಎಂದ ಅವರು ಮಠ , ಮಂದಿರಗಳಿಗೆ ಬಜೆಟ್ ನಲ್ಲಿ 3000 ಕೋಟಿ ಮೀಸಲಿಡುವ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು 1500 ಕೋಟಿ ನೀಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ನೌಕರರ ಬೇಡಿಕೆಗಳನ್ನು ಈಡೇರಿಸುವ ಬದಲಾಗಿ ಎಸ್ಮಾ ಜಾರಿ , ನೌಕರರ ವಜಾ , ಅಮಾನತು , ವಸತಿಗೃಹಗಳಿಂದ ಬಲಾತ್ಕಾರವಾಗಿ ಒಕ್ಕಲೆಬ್ಬಿಸುವ ಮೂಲಕ ಅತ್ಯಂತ ಅಮಾನವೀಯವಾಗಿ ದೌರ್ಜನ್ಯ ಎಸಗುತ್ತಿದೆ ಎಂದ ಅವರು ಸಾರಿಗೆ ನೌಕರರು ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ಸಿಐಟಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದಲ್ಲದೆ , ನೌಕರರ ಹೋರಾಟದಿಂದಾಗುವ ಅನಾಹುತಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿಐಟಿಯು ತಾಲೂಕು ಉಪಾಧ್ಯಕ್ಷ ಶೇಖರ್ ಲಾಯಿಲ ಮಾತನಾಡಿ ರಾಜ್ಯ ಸರ್ಕಾರವು ಸರ್ವಾಧಿಕಾರಿ ಧೋರಣೆ ಅನುಸರಿಸುವ ಮೂಲಕ ಸಾರಿಗೆ ನೌಕರರ ಮುಷ್ಕರವನ್ನು ಹತ್ತಿಕ್ಕುವ ಸಲುವಾಗಿ ನೌಕರರ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ಮಾಜಿ ಸಾರಿಗೆ , ಹಾಲಿ ಕಂದಾಯ ಸಚಿವ ಆರ್ ಅಶೋಕ್ ಮತಿಭ್ರಮಣರಂತೆ ವರ್ತಿಸುತ್ತಿದ್ದಾರೆ. ಸಾರಿಗೆ ಸಂಸ್ಥೆ ಮುಳುಗುತ್ತಿರುವ ಹಡಗು ಆಗಲು ಬಿಜೆಪಿ ರಾಜ್ಯ ಸರ್ಕಾರ ಕಾರಣ ಎಂಬುದನ್ನು ಸಚಿವರೆ ಒಪ್ಪಿಕೊಂಡಂತಾಗಿದೆ. ಏಷ್ಯಾ ಖಂಡದಲ್ಲೇ ಲಾಭದಾಯಕ ಕರ್ನಾಟಕ ರಾಜ್ಯ ಸಾರಿಗೆಯನ್ನು ಅವಮಾನಿಸಿದ ಆರ್ ಅಶೋಕ್ ತಕ್ಷಣ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೋರೋನ ನೆಪವೊಡ್ಡಿ ಪ್ರತಿಭಟನೆ ನಡೆಸದಂತೆ ನಿಷೇಧ ಹೇರಿರುವ ಜಿಲ್ಲಾಡಳಿತವು ಸಂಸದ ನಳೀನ್ ಕುಮಾರ್ ಕಟೀಲು ಅವರ ಮನೆಯಲ್ಲಿ 20 ರಿಂದ 30 ಸಾವಿರ ಜನರನ್ನು ಸೇರಿಸಿ ಧರ್ಮ ನೇಮತ್ಸೋವ ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದ ಅವರು ರಾಜ್ಯದಲ್ಲಿ ಜನಪ್ರತಿನಿಧಿಗಳಿಗೊಂದು , ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಧರ್ಮಸ್ಥಳ ಡಿಫ್ಪೋ ಅಧ್ಯಕ್ಷ ತಮ್ಮಣ್ಣ ಗೌಡ ಮಾತನಾಡಿ ರಾಜ್ಯ ಸರ್ಕಾರ ನೌಕರರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಬದಲಾಗಿ ಡಿಪೋ ಮ್ಯಾನೇಜರ್ ಮೂಲಕ ನೌಕರರಿಗೆ ವಿವಿಧ ರೀತಿಯ ದೌರ್ಜನ್ಯ ಎಸಗುತ್ತಿದೆ. ಸಾರಿಗೆ ನೌಕರರನ್ನು ಜೀತದಾಳುಗಳಂತೆ ದುಡಿಸುತ್ತಿರುವುದಲ್ಲದೆ ಅಂತರರಾಷ್ಟ್ರೀಯ ಕಾರ್ಮಿಕ ಕಾನೂನಿನ ವಿರುದ್ಧವಾಗಿ ದುಡಿಸಲಾಗುತ್ತದೆ ಎಂದು ಆರೋಪಿಸಿದ ಅವರು ನೌಕರರು ರಾಜ್ಯ ಸರ್ಕಾರದ, ಅಧಿಕಾರಿಗಳ ಯಾವುದೇ ಗೊಡ್ಡು ಬೆದರಿಗೆ ಬಗ್ಗಲ್ಲ . ಹೋರಾಟವನ್ನು ಹತ್ತಿಕ್ಕುವ ಸಂವಿಧಾನ ಬಾಹಿರ ಕೆಲಸಕ್ಕೆ ಕೈ ಹಾಕಿ ನಮ್ಮನ್ನು ಕೆಣಕಿದರೆ ನಾವೂ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದರು.
ಸಾರಿಗೆ ನೌಕರರು ಹಾಗೂ ಕುಟುಂಬಸ್ಥರು ತಮ್ಮ ಮಕ್ಕಳೊಂದಿಗೆ ತಾಲೂಕು ಕಚೇರಿ ಎದುರು ತಟ್ಟೆ , ಲೋಟ ಬಾರಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ನೌಕರರ ಒಕ್ಕೂಟದ ಹೇಮಂತ್ ಕುಮಾರ್ , ಸುದರ್ಶಿನಿ , ಸಿಐಟಿಯು ಮುಖಂಡರಾದ , ನ್ಯಾಯವಾದಿ ಸುಕನ್ಯಾ ಹರಿದಾಸ್ , ನೀಲೇಶ್ ಹೆಚ್ , ಕುಸುಮ ಮಾಚಾರ್ ಉಪಸ್ಥಿತರಿದ್ದರು.