ಒಂದೇ ದಿನದಲ್ಲಿ ಭೂ ಪರಿವರ್ತನೆ ವ್ಯವಸ್ಥೆ, ಆರ್, ಅಶೋಕ್

ಬೆಳ್ತಂಗಡಿ: ಕಂದಾಯ ಇಲಾಖೆಯಲ್ಲಿ ಸಮಗ್ರ ಬದಲಾವಣೆಗಳು ನಡೆಯುತ್ತಿದ್ದು ಭೂ ಪರಿವರ್ತನೆಗಾಗಿ ವರ್ಷಾಗಟ್ಟಲೆ ಅಲೆದಾಟ ನಡೆಸುತ್ತಿರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಒಂದು ದಿನದ ಭೂಪರಿವರ್ತನಾ( ಒನ್ ಡೇ ಕನ್ವರ್ಷನ್)ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಕಟಿಸಿದರು.

ಅವರು ಶುಕ್ರವಾರ ಬೆಳ್ತಂಗಡಿ ಶ್ರೀಮಂಜುನಾಥೇಶ್ವರ ಕಲಾಭವನದಲ್ಲಿ 78 ಫಲಾನುಭವಿಗಳಿಗೆ 94c ಹಕ್ಕುಪತ್ರಗಳನ್ನು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಸಮ್ಮಾನ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಬಹುಕಾಲದಿಂದ ಭೂ ಪರಿವರ್ತನೆಯ ಸಮಸ್ಯೆ ಇರುವುದರಿಂದ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಆಗುವಂತಹ ವಿನೂತನ ಯೋಜನೆಯೊಂದರ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದನ್ನು ಹದಿನೈದು ದಿನದೊಳಗೆ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಕಂದಾಯ ಇಲಾಖೆಯ ಕಾರ್ಯಗಳಿಗೆ ವೇಗ ನೀಡಬೇಕು, ಅಧಿಕಾರಿಗಳ ಹಾಗೂ ಜನರ ನಡುವಿನ ಅಂತರ ಕಡಿಮೆಯಾಗಬೇಕು, ಹಳ್ಳಿಯ ವಾಸ್ತವ್ಯದ ನೈಜ ಚಿತ್ರಣ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ವೃದ್ಧಾಪ್ಯ ವೇತನವನ್ನು ಸ್ಥಳದಲ್ಲೇ ನೀಡುವ ಕಾರ್ಯವೂ ಪ್ರಾರಂಭಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಸಮಸ್ಯೆಯಾಗಿರುವ ಕುಮ್ಕಿ ಹಕ್ಕಿನ ಕುರಿತು ಸಮಿತಿ ರಚಿಸಿ ಶೀಘ್ರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಶಾಶ್ವತವಾಗಿ ಕುಮ್ಕಿ ಹಕ್ಕು ಸಿಗವಂತೆ ಮಾಡಲಾಗುವುದು. ತಕ್ಷಣ ಶಾಸಕರ ಹಾಗೂ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.

ಶಾಸಕ ಹರೀಶ್ ಪೂಂಜ ಅವರ ಕ್ರಿಯಾಶೀಲತೆಯನ್ನು ಶ್ಲಾಘಿಸಿದ ಅವರು, ಸಚಿವರ ಕಚೇರಿಗೆ ಬಂದು ಬೇಕಾದ ಅನುದಾನಗಳನ್ನು ಪಡೆದುಕೊಂಡು ತಾಲೂಕಿನಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚಿನ ಅನುದಾನ ಪಡೆಯುತ್ತಿರುವುದೇ ಇಲ್ಲಿನ ಶಾಸಕರು ಎಂದ ಅವರು, ತಾಲೂಕಿನಲ್ಲಿ ಕಣಿಯೂರು ಎಂಬ ನಾಲ್ಕನೇ ಹೋಬಳಿ ರಚನೆಗೆ ಸಮ್ಮತಿ ನೀಡಲಾಗಿದೆ. ವೇಣೂರು, ಕೊಕ್ಕಡ, ಮಂಗಳೂರು ನಾಡ ಕಚೇರಿ ಕಟ್ಟಡಕ್ಕೆ ತಲಾ ರೂ. 15 ಲಕ್ಷ ದಂತೆ ಒಟ್ಟು ರೂ.45 ಲಕ್ಷ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ತಾಲೂಕಿನಲ್ಲಿ ಗ್ರಾಮಕರಣಿಕರ ಕೊರತೆಯ ಸಮಸ್ಯೆ ಇದ್ದು ಅದನ್ನು ನಿವಾರಿಸಬೇಕು ಎಂದರು.

ಹೊಸತಾಗಿ ನೇಮಕ ಅಗುವ ಗ್ರಾಮಕರಣಿಕರು ಒಂದೆರಡು ವರ್ಷಗಳಲ್ಲಿ ತಮ್ಮ ತಮ್ಮ ಊರುಗಳಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಇದರಿಂದ ತಾಲೂಕು ಕಚೇರಿಗಳಲ್ಲಿ ಸಿಬ್ಬಂದಿಗಳ ಸಮಸ್ಯೆ ಉಂಟಾಗುತ್ತದೆ ಎಂಬ ಮನವಿಯ ಹಿನ್ನಲೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಹೊಸ ನೇಮಕಾತಿ ಮಾಡುವ ಗ್ರಾಮಕರಣಿಕರು ಆಯಾಯ ಜಿಲ್ಲೆಯಲ್ಲಿ ಕನಿಷ್ಠ 15 ವರ್ಷ ಸೇವೆಯನ್ನು ಸಲ್ಲಿಸಲೇ ಬೇಕು ಎಂಬ ಕಾನೂನು, ನಿಯಮದ ರಚನೆ ಮಾಡಲಾಗುವುದು. ಇದರಿಂದ ಗ್ರಾಮಕರಣಿಕರ ಕೊರತೆ ನೀಗಿದಂತಾಗುತ್ತದೆ ಎಂದು ತಿಳಿಸಿದರು.

ಡೀಮ್ಡ್ ಫಾರೆಸ್ಟ್ ಹಾಗೂ ಕಂದಾಯ ಇಲಾಖೆಯ ನಡುವೆ ಸರ್ವೆ ನಡೆಸುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ 9 ಸಾವಿರ ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವಿದ್ದು ಅದರಲ್ಲಿ 6 ಸಾವಿರ ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ, 3 ಸಾವಿರ ಹೆಕ್ಟೇರ್ ಪ್ರದೇಶವನ್ನು ಅರಣ್ಯಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು

ಶಾಸಕ ಹರೀಶ್ ಪೂಂಜ ಪ್ರಸ್ತಾವಿಸಿ, ಕಳೆದ 3 ವರ್ಷದ ಅವಧಿಯಲ್ಲಿ 3600ಕ್ಕೂ ಅಧಿಕ 94c ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಕುಮ್ಕಿ ಹಕ್ಕಿನ ಸಮಸ್ಯೆಯನ್ನು ನೀಗಿಸಿ, ರೈತರಿಗೆ ಅನುಕೂಲವಾಗುಂತ ಕಾನೂನು ಜಾರಿ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಕೊಕ್ಕಡ, ಬೆಳ್ತಂಗಡಿ ಹಾಗೂ ವೇಣೂರು ಹೋಬಳಿಯ ಒಟ್ಟು 78 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ, ಸದಸ್ಯರಾದ ಕೊರಗಪ್ಪ ನಾಯ್ಕ್, ಸೌಮ್ಯಲತಾ ಜಯಂತ್ ಗೌಡ, ತಾ.ಪಂ.ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಸುಧೀರ್ ಸುವರ್ಣ, ಕೃಷ್ಣಯ್ಯ ಆಚಾರ್ಯ, ಅಮಿತಾ, ಸುಶೀಲಾ, ವಸಂತಿ ಲಕ್ಷ್ಮಣ್, ನ.ಪಂ.ಅಧ್ಯಕ್ಷೆ ರಜನಿ ಕುಡ್ವ, ದ.ಕ. ಜಿಲ್ಲಾ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ತಹಶೀಲ್ದಾರ್ ಮಹೇಶ್ ಜೆ. ಉಪಸ್ಥಿತರಿದ್ದರು.ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು

error: Content is protected !!