ಕೊರೊನಾ ಹೆಚ್ಚಳ ಹಿನ್ನೆಲೆ ಮಂಗಳೂರು ಉಡುಪಿ ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ರಾಜ್ಯದ ಆರು ಜಿಲ್ಲಾ ಕೇಂದ್ರ ಸೇರಿ ಏಳು ನಗರ ಪ್ರದೇಶಗಳಲ್ಲಿ ಏಪ್ರಿಲ್‌10 ರಿಂದ 20ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5ಗಂಟೆವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಸಂವಾದದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಪ್ರಧಾನಿ ಮೋದಿ ಜೊತೆ ಕೊರೊನಾ ನಿಯಂತ್ರಣ ಕುರಿತು ಸುದೀರ್ಘ ಚರ್ಚೆಯಾಗಿದೆ. ಮೋದಿ ಕೆಲ ಸಲಹೆ ಕೊಟ್ಟಿದ್ದಾರೆ.

ಅದರಂತೆ ಕರ್ನಾಟಕದಲ್ಲಿ ಕೆಲ ಪ್ರಮುಖ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 20 ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 05 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ,‌ ಕಲಬುರಗಿ ನಗರ, ಬೀದರ್, ತುಮಕೂರು, ಉಡುಪಿ ಜಿಲ್ಲಾ ಕೇಂದ್ರ ಮತ್ತು ಮಣಿಪಾಲ್‌ ನಗರಕ್ಕೆ ಮಾತ್ರ ಕರ್ಫ್ಯೂ ಅನ್ವಯವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್​ವೈ ಮಾಹಿತಿ ನೀಡಿ ಕೊರೊನಾ ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು, ಕೊರೋನಾ ನಿಯಮಗಳನ್ನು ಇನ್ನಷ್ಟು ಕಠಿನಗೊಳಿಸಲಾಗುವುದು ಮಾಸ್ಕ್ ಹಾಕದೇ ಇದ್ದಲ್ಲಿ ದಂಡ ಹಾಕಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು,ಸಭೆ, ಸಮಾರಂಭ, ಮದುವೆ ಸಮಾರಂಭ ಎಲ್ಲಾ ಕಡೆ ನಾಳೆಯಿಂದಲೇ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಬೇಕು. ನೈಟ್ ಕರ್ಫ್ಯೂ ಇರುವ ಜಿಲ್ಲೆಗಳಲ್ಲಿ ದೊಡ್ಡ ಸಮಾರಂಭ ಮಾಡಬಾರದು ಎಂದರು.ನೈಟ್ ಕರ್ಫ್ಯೂ ವೇಳೆ ಬಸ್ ಸಂಚಾರ ಇರಲಿದೆ. ಜನರ ಓಡಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ. ಇಷ್ಟೆಲ್ಲ ಮಾಡಿದ ಬಳಿಕ ಸಹ ಕೊರೊನಾ ಕಡಿಮೆ ಆಗದೇ ಇದ್ದಲ್ಲಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಸ್ತರಣೆ ಮಾಡಲಾಗುತ್ತದೆ. ಇದು ಪ್ರಾಯೋಗಿಕ ಪ್ರಯತ್ನವಾಗಿ ಮಾಡುವುದಾಗಿದೆ ಎಂದು ಎಚ್ಚರಿಕೆ ನೀಡಿದರು.

ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ಆಚರಿಸಲು ಸೂಚನೆ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದರು.

ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಜನರಿಗೆ‌ ಕೊರೊನಾ ನಿಯಂತ್ರಣದ ತಿಳುವಳಿಕೆ,ಎಚ್ಚರಿಕೆ ಕೊಡುವ ಪ್ರಯತ್ನದ ಭಾಗವಾಗಿ ನೈಟ್ ಕರ್ಫ್ಯೂ ಜಾರಿಗೆ ತರಲಾಗುತ್ತಿದೆ ಆದರೆ ಈ ವೇಳೆ ರಾತ್ರಿ ವಾಣಿಜ್ಯ ಚಟುವಟುಕೆಗೆ ಕಡಿವಾಣ ಮಾತ್ರ ಬೀಳಲಿದ್ದು, ಸಾರಿಗೆ ಸೇವೆ ಇರಲಿದೆ, ಅಗತ್ಯ ಸೇವೆಗೆ ಯಾವುದೇ ತೊಂದರೆ ಇಲ್ಲ ಎಂದರು.

error: Content is protected !!