ಬೆಳ್ತಂಗಡಿ: ತುಳುನಾಡಿನಲ್ಲಿ ದೈವಾರಾಧನೆ ಅನೂಚಾನವಾಗಿ ನಡೆಯುತ್ತಿದ್ದು, ಮಂಜುನಾಥ ಭಟ್ ಅವರು ಬರೆದಿರುವ ‘ದೈವ ನಡೆ’ ಪುಸ್ತಕ ಇದರ ಕುರಿತು ಬೆಳಕು ಚೆಲ್ಲುತ್ತಿದೆ. ದೈವಾರಾಧನೆ ಹೇಗೆ ಮಾಡಬೇಕು, ರೀತಿ ರಿವಾಜುಗಳು ಹೇಗಿರುತ್ತವೆ ಎಂಬ ಬಗ್ಗೆ ತಿಳಿಸಲಾಗಿದೆ. ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಮರೆಯುತ್ತಿರುವ ಈ ಹೊತ್ತಿನಲ್ಲಿ ಈ ಪುಸ್ತಕ ನಮ್ಮ ಸಂಸ್ಕೃತಿಯನ್ನು ಮನನ ಮಾಡುವಂತೆ ಮಾಡುತ್ತಿದೆ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ನುಡಿದರು.
ಅವರು ಅಳದಂಗಡಿಯಲ್ಲಿ ಜ್ಯೋತಿಷಿ, ಬೆಳ್ತಂಗಡಿ ಚರ್ಚ್ ಶಾಲೆಯ ಶಿಕ್ಷಕರ ಹಾಗೂ ಆಸ್ರಣ್ಣರಾದ ಮಂಜುನಾಥ ಭಟ್ ಅಂತರ ಅವರು ರಚಿಸಿರುವ ‘ದೈವ ನಡೆ’ ನಂಬಿಕೆ ನಡವಳಿಕೆ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪುಸ್ತಕ ಮಾಹಿತಿ:
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪುಸ್ತಕಕ್ಕೆ ಶುಭ ಕೋರಿದ್ದು, ಧರ್ಮಸ್ಥಳದ ಸಂಸ್ಕೃತಿ ಮತ್ತು ಸಂಶೋಧನ ಪ್ರತಿಷ್ಠಾನದ ಡಾ. ಎಸ್. ಆರ್. ವಿಘ್ನರಾಜ ಧರ್ಮಸ್ಥಳ ಮುನ್ನುಡಿ ಬರೆದಿದ್ದಾರೆ.
ಯತೀಶ್ ನಿಡಿಗಲ್ ಅವರು ಪುಸ್ತಕ ವಿನ್ಯಾಸ ಮಾಡಿದ್ದಾರೆ. ಉಜಿರೆ ಮಂಜುಶ್ರೀ ಮುದ್ರಣಾಲಯದಲ್ಲಿ ಪುಸ್ತಕ ಅಚ್ಚಾಗಿದೆ.
ಲೇಖಕರಾದ ಮಂಜುನಾಥ ಭಟ್ ಅಂತರ ಹಾಗೂ ಮಂಜುವಾಣಿ ಮಾಸಪತ್ರಿಕೆ ಉಪಸಂಪಾದಕ ಚಂದ್ರಶೇಖರ ಅಂತರ ಉಪಸ್ಥಿತರಿದ್ದರು.
ಸಂಜೀವ ಶ್ರೀ ಅನುಗ್ರಹ ಪಾರೆಂಕಿ ಸ್ವಾಗತಿಸಿದರು, ಅಳದಂಗಡಿ ಅರಮನೆಯ ಚಾವಡಿ ನಾಯಕರಾದ ರಾಜಶೇಖರ ಶೆಟ್ಟಿ ವಂದಿಸಿದರು.