ಬೆಳ್ತಂಗಡಿ ವೃತ್ತನಿರೀಕ್ಷಕರ ಕಚೇರಿ‌ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ:

ಬೆಳ್ತಂಗಡಿ: ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕ್ ಅವರಿಗೆ ಈ ಬಾರಿಯ ಮುಖ್ಯಮಂತ್ರಿ ಪದಕ ಲಭಿಸಿದೆ.

ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ಪ್ರಕರಣದ ತನಿಖಾ ಸಹಾಯಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪದಕ ನೀಡಲಾಗುತ್ತಿದೆ. ಬೆಳ್ತಂಗಡಿ ವೃತ್ತನಿರೀಕ್ಷಕರ ಕಚೇರಿಯಲ್ಲಿ ಕಳೆದ 6 ವರ್ಷಗಳಿಂದ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಜಿರೆ ಎಸ್.ಆರ್. ಬಾರ್ ಬಳಿ ಕೊಲೆ ಪ್ರಕರಣ, ಕೊಯ್ಯೂರು, ವೇಣೂರು, ಲಾಯಿಲದಲ್ಲಿ‌ ನಡೆದಿದ್ದ ಪೋಕ್ಸೋ‌ ಪ್ರಕರಣ, ಮರೋಡಿ ಲೈಂಗಿಕ ಹಲ್ಲೆ ಪ್ರಕರಣ, ವಿಟ್ಲದಲ್ಲಿ ನಡೆದಿದ್ದ ಕೊಲೆ ಪ್ರಕರಣ, ಉಜಿರೆ ಅಪಘಾತದಲ್ಲಿ‌ ಶಿಕ್ಷಕಿ ಸಾವು ಪ್ರಕರಣ ಮೊದಲಾದ ಗಂಭೀರ ಅಪರಾಧ ಪ್ರಕರಣಗಳಲ್ಲಿ ತನಿಖಾ ಸಹಾಯಕರಾಗಿ ಆರೋಪಿಗಳಿಗೆ‌ ನ್ಯಾಯಾಲಯದಿಂದ ಶಿಕ್ಷೆಯಾಗುವಂತೆ ಕರ್ತವ್ಯ ಸಲ್ಲಿಸಿದ್ದನ್ನು ಪರಿಗಣಿಸಿ ಅವರನ್ನು ಈ‌ ಪದಕಕ್ಕೆ ಆಯ್ಕೆಗೊಳಿಸಲಾಗಿದೆ.

ವೆಂಕಟೇಶ್ ನಾಯ್ಕ್ ಅವರ ಸೇವೆ ಪರಿಗಣಿಸಿ ಇಲಾಖೆಯಿಂದ 17 ಬಾರಿ ನಗದು ಪುರಸ್ಕಾರ, 10 ಬಾರಿ ಪ್ರಶಂಸನಾಪತ್ರ, ಉತ್ತಮ ತನಿಖಾ ಸಹಾಯಕ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಲಭಿಸಿವೆ. ಈ ಬಾರಿ ಮುಖ್ಯಮಂತ್ರಿ ಪದಕ ಲಭಿಸಿದೆ.
ವೆಂಕಟೇಶ್ ನಾಯ್ಕ್ ಅವರು 1996ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡು ಉಡುಪಿ ಸಂಚಾರ ಠಾಣೆ, ಉಪ್ಪಿನಂಗಡಿ ಠಾಣೆ, ವಿಟ್ಲ ಠಾಣೆಯಲ್ಲಿ ಕರ್ತವ್ಯ ಸಲ್ಲಿಸಿ 2014ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಪದೋನ್ನತಿ ಹೊಂದಿ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.

ಮೂಲತಃ ಮಂಗಳೂರು ತಾಲೂಕು ಕೊಂಪದವು‌ ರುಕ್ಮಯ್ಯ ನಾಯ್ಕ್ ಮತ್ತು ಗೋಪಿ ದಂಪತಿ ಪುತ್ರರಾಗಿದ್ದಾರೆ. ವೆಂಕಟೇಶ್ ನಾಯ್ಕ ಅವರ ಪತ್ನಿ ವಸಂತಿ ಮಂಡಾಜೆ ಪ.ಪೂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು,‌ ಪುತ್ರಿ ವರ್ಷಿಣಿ ಅನುಗ್ರಹ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ತಮ್ಮ ಸೇವೆಯ ಮೂಲಕ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ವೆಂಕಟೇಶ್ ಅವರಿಗೆ ‘ಪ್ರಜಾಪ್ರಕಾಶ’ ತಂಡದ ಶುಭಾಶಯಗಳು.

error: Content is protected !!