ಬೆಳ್ತಂಗಡಿಯ‌ ‘ಕಾಳಜಿ ಫ್ಲಡ್ ರಿಲೀಫ್ ಫಂಡ್ ‘ ದೇಶಕ್ಕೆ ‌ಮಾದರಿ: ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

ಬೆಳ್ತಂಗಡಿ: ನೀರಿಲ್ಲದೆ ಜನ ಪರದಾಡುವ ದಿನ ರಾಜ್ಯದಲ್ಲಿತ್ತು. ಆದರೆ ಮಳೆ ಬಂತು, ಲೆಕ್ಕಕ್ಕಿಂತ ಹೆಚ್ಚು ಮಳೆ ಬಂದು ಜನತೆ ಸಮಸ್ಯೆ ಎದುರಿಸುವಂತಾಯಿತು. ಬಳಿಕ ಕೋವಿಡ್ ಬಂತು, ಜನ ಮತ್ತೆ ಸಂಕಷ್ಟ ಎದುರಿಸುವಂತಾಯಿತು. ಇಂತಹಾ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೃಢವಾಗಿ ಒಂದು ತಂಡ ಕಟ್ಟಿಕೊಂಡು ನೆರವು ನೀಡುವ ಕಾರ್ಯಕ್ಕೆ ಕೈ ಜೋಡಿಸಿದರು. ಗ್ರಾಮಿಣ ಪ್ರದೇಶದಲ್ಲಿ ಇಂತಹಾ ಪ್ರಯತ್ನ ನಡೆಸಿರುವುದು ಸಾಹಸವೇ ಸರಿ. ಪುಣ್ಯ ಹಾಗೂ ಸಹಾಯ ಮಾಡುವ ಪುರುಷಾರ್ಥ ಸೇರಿದ ಫಲವಾಗಿ ಇಚ್ಟು ದೊಡ್ಡ ಯೋಜನೆ ಸಫಲವಾಗಿದೆ. ‘ಕಾಳಜಿ ಫ್ಲಡ್ ರಿಲೀಫ್ ಫಂಡ್ ‘ ಶೀರ್ಷಿಕೆಯೇ ಜನರಿಗೆ ಬದುಕಲು ಸ್ಪೂರ್ತಿ ನೀಡುತ್ತದೆ. ನೆರವು ನೀಡುವ ಕಲ್ಪನೆಯ ಮೂಲಕ ಇತರರ ಬದುಕಿಗೆ ಆಸರೆ ನೀಡುವ ಪ್ರಯತ್ನವೇ ಇತರ ಪ್ರಯತ್ನಗಳಿಗೆ ಮಾದರಿ. ಇಲ್ಲಿ ಜಮೆಯಾದ ಹಣ ನೇರವಾಗಿ ಖಾತೆಯಿಂದ ಸಂತ್ರಸ್ತರ ಖಾತೆಗೆ ಜಮೆಯಾಗುವ ವ್ಯವಸ್ಥೆಯೂ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.


ಅವರು ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದ, ಕಾಳಜಿ ಫ್ಲಡ್ ರಿಲೀಫ್ ಫಂಡ್‍ನಿಂದ 299 ಕುಟುಂಬಗಳಿಗೆ ಪರಿಹಾರ ವಿತರಣಾ ಕಾರ್ಯಕ್ರಮವನ್ನು ಬೆಳ್ತಂಗಡಿ ಶ್ರೀ ಮಂಜುನಾಥಸ್ವಾಮಿ ಕಲಾ ಮಂಟಪದಲ್ಲಿ ಉದ್ಘಾಟಿಸಿ, ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ದಾನ ಮಾಡುವ ಕೆಲಸ ದೊಡ್ಡದು, ದಾನ ಮಾಡುವ ಪ್ರಮಾಣ ಎಷ್ಟೇ ಇರಲಿ, ಆದರೆ ಸಮರ್ಪಕ ಸಹಾಯಹಸ್ತ ಚಾಚುವ ಚಿಂತನೆ ಅಮೂಲ್ಯವಾದುದು. ಅಳಿಲು ರಾಮನಿಗೆ ಸೇತುವೆ ಕಟ್ಟಲು ನೆರವಾದಂತೆ. ನಾವು ಮಾಡುವ ಸಣ್ಣ- ಸಣ್ಣ ಸಹಾಯಗಳು ಇತರರ ಬದುಕಿನಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಹೊಂದಲು ಸಹಾಯಕವಾಗುತ್ತದೆ. ಸಂಸ್ಕಾರ ಪ್ರಧಾನವಾಗಿ ಜೀವನ ಕಟ್ಟಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ನೆರವಾಗುವುದು ದೊಡ್ಡ ಗುಣ. ಇಲ್ಲಿ ತಿಳಿದಂತೆ ರಿಕ್ಷಾ ಚಾಲಕರೊಬ್ಬರು ತಮ್ಮ ದುಡಿಮೆಯ ದೊಡ್ಡ ಮೊತ್ತವನ್ನು ಈ ಫಂಡ್‍ಗೆ ನೀಡಿರುವುದು ಸಹಾಯ ಮನೋಭಾವ ಇನ್ನೂ ಈ ಸಮಾಜದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಇಂತಹಾ ದಾನಿಗಳ ಪ್ರಮಾಣ ಹೆಚ್ಚಾಗಲಿ. ಸ್ವಾವಲಂಬಿ ಜೀವನ ನಿರ್ಮಾಣದ ವಿಚಾರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರವೂ ಬಹಳ ದೊಡ್ಡದು ಎಂಬುದಾಗಿ ರವಿ ತಿಳಿಸಿದರು.


ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸೌಲಭ್ಯ ತಲುಪಿದಾಗ ಜನ ಜೀವನದಲ್ಲಿ ಬದಲಾವಣೆ ಮೂಡಲು ಸಾಧ್ಯ. ರಾಜಕಾರಣ ಎಂಬುದು ಬದುಕಲು ಅಲ್ಲ, ಜನಸಾಮಾನ್ಯರ ಬದುಕು ಬದಲಾಯಿಸಲು ಇರುವುದು. ಈ ಮಾತನ್ನು ಬೆಳ್ತಂಗಡಿ ಶಾಸಕರು ನಿರೂಪಿಸಿದ್ದಾರೆ. ಜನರಿಗಾಗಿ ಫಂಡ್ ರಚಿಸಿ ನೇರವಾಗಿ ಸಹಾಯ ಮಾಡಿದ್ದಾರೆ. ರಾಜೀವ್ ಗಾಂದಿ ಅವರು ಒಂದು ಮಾತು ತಿಳಿಸಿದ್ದರು, ಸರಕಾರದಿಂದ ಬಿಡುಗಡೆಯಾದ 100 ರೂ., ಜನರಿಗೆ ತಲುಪುವಾಗ ಕೇವಲ 15 ರೂ. ಮಾತ್ರ ಸಿಗುತ್ತದೆ ಎಂದು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಸರಕಾರದ ಪ್ರತಿಯೊಂದು ರೂ. ಹಣವನ್ನೂ ಜನಧನ್ ಖಾತೆ ಮೂಲಕ ನೇರವಾಗಿ ಜನರ ವಯಕ್ತಿಕ ಖಾತೆಗೆ ತಲುಪಿಸುತ್ತಿದ್ದಾರೆ. ಜೊತೆಗೆ ಜನಪರವಾದ ಕಿಸಾನ್ ಸಮ್ಮಾನ್, ಫಸಲ್ ಬಿಮಾ, ಪಿಂಚಣಿ ಯೋಜನೆಗಳ ಮೂಲಕವೂ ನೇರವಾಗಿ ಖಾತೆಗೆ ಹಣ ವರ್ಗಾವಣೆಯಾಗುತ್ತದೆ ಈ ಮೂಲಕ ಭ್ರಷ್ಟಾಚಾರಕ್ಕೆ ತಡೆಬಿದ್ದಿದೆ ಎಂದರು.
ಶಾಸಕ ಹರೀಶ್ ಪೂಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ್ರಸ್ತರಿಗೆ ಚೆಕ್ ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಹೆಚ್. ಮಂಜುನಾಥ್, ಉಜಿರೆ ಶ್ರೀ ಜನಾರ್ದನ ದೇವಳದ ಶರತ್ ಕೃಷ್ಣ ಪಡ್ವೆಟ್ನಾಯ, ಕಾಳಜಿ ಫ್ಲಡ್ ರಿಲೀಫ್ ಫಂಡ್ ಕೋಶಾಧಿಕಾರಿ ನಂದಕುಮಾರ್, ಸದಸ್ಯರಾದ ರಾಜೇಶ್ ಪೈ ಉಜಿರೆ, ಮೋಹನ್ ಕುಮಾರ್ ಉಜಿರೆ, ಜಗದೀಶ್ ಪ್ರಸಾದ್, ಡಾ. ಗೋಪಾಲಕೃಷ್ಣ ಉಜಿರೆ, ಡಾ. ಎಂ.ಎಂ. ದಯಾಕರ್, ಪ್ರವೀಣ್ ಜೈನ್, ಗಣೇಶ್ ಗೌಡ, ಲ್ಯಾನ್ಸಿ ಪಿಂಟೋ, ಜಯಕರ ಶೆಟ್ಟಿ, ಅಬುಬೊಕ್ಕರ್ ಉಪಸ್ಥಿತರಿದ್ದರು.
ಕಾಳಜಿ ಫ್ಲಡ್ ರಿಲೀಫ್ ಫಂಡ್ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್ ನಿರೂಪಿಸಿದರು.

error: Content is protected !!