ಬೆಳ್ತಂಗಡಿ: ಸಮಯ ಅಮೂಲ್ಯವಾಗಿದ್ದು, ದೊರಕುವ ಸಮಯವನ್ನು ಸಮುದಾಯದ ಅಭಿವೃದ್ಧಿ, ಸಾಮಾಜಿಕ ಹಿತ ಚಿಂತನೆಯ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡಬೇಕು. ಇದರಿಂದ ಸಮಾಜದ ಬೆಳವಣಿಗೆಯ ಜೊತೆಗೆ ನಮ್ಮ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗುತ್ತದೆ ಎಂದು ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಲಾಯಿಲಾ ತಿಳಿಸಿದರು.
ಅವರು ಗುರುವಾಯನಕೆರೆ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ಆದರೆ ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಿದೆ. ಸಂಘಟನೆ ವಿಚಾರದಲ್ಲಿ ಶಿಸ್ತು ಕಾಪಾಡುವುದು ಅಗತ್ಯ. ಸಂಘದ ವಲಯ ಸಂಚಾಲಕರು ಗ್ರಾಮ ಸಮಿತಿಗಳನ್ನು ಸಭೆಗಳು ನಡೆಯುವಂತೆ ಮಾಡಿ, ಗ್ರಾಮ ಮಟ್ಟದಲ್ಲಿ ಸಮುದಾಯ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಅದೃಷ್ಟ ಚೀಟಿಯಲ್ಲಿ ಆಯ್ಕೆಯಾದ ಮುಡಿ ಅಕ್ಕಿ ಯಾರೂ ಪಡೆಯದೇ ಇರುವುದರಿಂದ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಸಂಘದ ಖಾತೆಗೆ ಜಮಾಮಾಡಲು ನಿರ್ಧರಿಸಲಾಯಿತು. ವಾರ್ಷಿಕ ಕ್ರೀಡಾಕೂಟದ ವಯಕ್ತಿಕ ಸ್ಪರ್ಧೆಯ ಕೆಲ ಬಹುಮಾನಗಳು ಉಳಿದಿದ್ದು, ಅವುಗಳನ್ನು ಹಿಂತಿರುಗಿಸಿ, ಹಣವನ್ನು ಸಂಘದ ಖಾತೆಗೆ ಜಮಾ ಮಾಡಲು ತೀರ್ಮಾನಿಸಲಾಯಿತು.
ಪ್ರಥಮ ಮಾಸಿಕ ಸಭೆಗೆ ಹಾಜರಾದ ನೂತನ ಪದಾಧಿಕಾರಿಗಳಾದ ಡಾ. ಲವೀನಾ ಕೆ.ಬಿ., ರಾಜೇಶ್ ನಾಯ್ಕ್, ಸಚಿನ್ ತೆಂಕಕಾರಂದೂರು, ಹರ್ಷಿತ್ ಪಿಂಡಿವನ ಅವರನ್ನು ಪುಷ್ಪ ನೀಡಿ ಸಮಿತಿಗೆ ಸ್ವಾಗತಿಸಲಾಯಿತು. ಕೋಶಾಧಿಕಾರಿ ಪ್ರಜ್ವಲ್ ಮುರತ್ತಕೋಡಿ ಮಹಾಸಭೆಯ ಖರ್ಚು ವೆಚ್ಚಗಳನ್ನು ಮಂಡಿಸಿದರು.
ಉಪಾಧ್ಯಕ್ಷ ವಸಂತ್ ನಾಯ್ಕ್, ಕಾರ್ಯದರ್ಶಿ ಪ್ರಸಾದ್ ನಾಯ್ಕ್, ಕ್ರೀಡಾ ಕಾರ್ಯದರ್ಶಿ ಸತೀಶ್ ಹೆಚ್.ಎಲ್., ಕಾರ್ಯಕಾರಿ ಸಮಿತಿಯ ಹರಿಪ್ರಸಾದ್, ಶರತ್ ಕಣಿಯೂರು, ಪತ್ರಿಕಾ ಮಾಧ್ಯಮ ಕಾರ್ಯದರ್ಶಿ ಪ್ರಶಾಂತ್ ತೆಂಕಕಾರಂದೂರು ಮೊದಲಾದವರು ಉಪಸ್ಥಿತರಿದ್ದರು.
ಶರತ್ ಗೇರುಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ಉಪಾಧ್ಯಕ್ಷ ಉಮೇಶ್ ವಂದಿಸಿದರು.