
ಬೆಂಗಳೂರು: ನ್ಯಾಯಾಲಯದ ಕಲಾಪಕ್ಕೆ ಪದೇಪದೆ ಅಡ್ಡಿಪಡಿಸಿ, ಮದ್ಯದ ಅಮಲಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ವಿರುದ್ಧ ಕೂಗಾಡಿದ ಆರೋಪದ ಹಿನ್ನೆಲೆಯಲ್ಲಿ ವಕೀಲ ಪಂಕಜ್ ಕೌಶಿಕ್ ಅವರಿಗೆ ಹೈಕೋರ್ಟ್ ಒಂದು ದಿನದ ಸರಳ ಜೈಲು ಶಿಕ್ಷೆ ಹಾಗೂ ₹2 ಸಾವಿರ ದಂಡ ವಿಧಿಸಿದೆ.
ನ್ಯಾಯಾಲಯದ ವರದಿಯನ್ನು ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವೆಂಕಟೇಶ್ ನಾಯಕ್ ಟಿ. ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಕೌಶಿಕ್ ಅವರ ವರ್ತನೆ ಉದ್ದೇಶಪೂರ್ವಕ ಮತ್ತು ಹಠಮಾರಿತನದಿಂದ ಕೂಡಿತ್ತು. ಸಾಮಾಜಿಕ, ನೈತಿಕ ಹಾಗೂ ನ್ಯಾಯಾಂಗ ನಡವಳಿಕೆ ನಿಯಮಗಳ ಬಗ್ಗೆ ಅವರು ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದರು ಎಂದು ಪೀಠ ಅಭಿಪ್ರಾಯಪಟ್ಟಿದೆ. ಇಂತಹ ವರ್ತನೆಗೆ ಶಿಕ್ಷೆ ವಿಧಿಸದಿದ್ದರೆ ಇದೇ ರೀತಿಯ ಕೃತ್ಯಗಳು ಪುನರಾವರ್ತನೆಯಾಗುವ ಸಾಧ್ಯತೆಯಿದ್ದು, ಕಾನೂನಿನ ಆಳ್ವಿಕೆ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಅಪಾಯ ಉಂಟಾಗಬಹುದು ಎಂದು ಪೀಠ ಹೇಳಿದೆ.
ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಕೌಶಿಕ್ ಅವರು ತಮ್ಮ ವರ್ತನೆಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿರಲಿಲ್ಲ. ಬದಲಾಗಿ ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಲ್ಲದೆ, ನ್ಯಾಯಾಂಗ ಸಂಸ್ಥೆಯ ವಿರುದ್ಧ ಆಧಾರರಹಿತ ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಿದ್ದರು ಎಂದು ಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ.
ಎರಡು ಬಾರಿ ಕಲಾಪಕ್ಕೆ ಅಡ್ಡಿ
ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸಲ್ಲಿಸಿದ್ದ ಎರಡು ಪತ್ರಗಳು ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರ ವರದಿಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಕೌಶಿಕ್ ಅವರು ಎರಡು ಸಂದರ್ಭಗಳಲ್ಲಿ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿ ಅನುಚಿತವಾಗಿ ವರ್ತಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿತ್ತು.
2022ರ ಏಪ್ರಿಲ್ 8ರಂದು ಪತ್ನಿ ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಸ್ವತಃ ಪಕ್ಷಕಾರರಾಗಿ ವಾದಿಸುತ್ತಿದ್ದ ಕೌಶಿಕ್, ತಮ್ಮ ಪ್ರಕರಣ ಆ ದಿನದ ವಿಚಾರಣಾ ಪಟ್ಟಿಯಲ್ಲಿ ಇಲ್ಲದಿದ್ದರೂ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತಮ್ಮ ಪ್ರಕರಣಕ್ಕೆ ವಿಚಾರಣೆಯ ದಿನಾಂಕ ನೀಡಿಲ್ಲ ಎಂದು ನ್ಯಾಯಾಧೀಶರ ವಿರುದ್ಧ ನ್ಯಾಯಾಲಯದಲ್ಲೇ ಕೂಗಾಡಿದ್ದರು. ಸಿಬ್ಬಂದಿಯ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ, ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಸಿವಿಲ್ ನ್ಯಾಯಾಧೀಶರು ತಮ್ಮ ಪತ್ನಿಯಿಂದ ಹಣ ಪಡೆದು ಆಕೆಯ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಮೌಖಿಕ ಆರೋಪ ಮಾಡಿದ್ದರು. ಎಚ್ಚರಿಕೆ ನೀಡಿದರೂ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧವೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ಪೀಠ ದಾಖಲಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಏಪ್ರಿಲ್ 11ರಂದು ಕೌಶಿಕ್ ಅವರು ಪತ್ರದ ಮೂಲಕ ಕ್ಷಮೆಯಾಚಿಸಿ, ತಮ್ಮ ವರ್ತನೆ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ತಿಳಿಸಿದ್ದರು.
ಮತ್ತೆ ನ್ಯಾಯಾಲಯದ ಕಲಾಪಕ್ಕೆ ಅಡ್ಡಿ
ಏಪ್ರಿಲ್ 20ರಂದು ಅದೇ ನ್ಯಾಯಾಲಯದಲ್ಲಿ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರೊಬ್ಬರು ವಾದಿಸುತ್ತಿದ್ದ ಸಂದರ್ಭದಲ್ಲಿ ಕೌಶಿಕ್ ಮತ್ತೆ ಕಲಾಪಕ್ಕೆ ಅಡ್ಡಿಪಡಿಸಿದ್ದರು. ತಮ್ಮ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ನ್ಯಾಯಾಧೀಶರು ಮಧ್ಯಪ್ರವೇಶಿಸಿದಾಗ ನ್ಯಾಯಾಲಯದಲ್ಲಿದ್ದ ಎಲ್ಲರ ಮೇಲೂ ಕೂಗಾಡಿದ್ದರು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಮದ್ಯ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢ
ಘಟನೆಯ ಸಂದರ್ಭದಲ್ಲಿ ಕೌಶಿಕ್ ಅವರಿಂದ ಮದ್ಯದ ವಾಸನೆ ಬರುತ್ತಿದ್ದು, ಅವರು ಅಸ್ಥಿರವಾಗಿ ನಡೆದುಕೊಳ್ಳುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶರು ಅವರನ್ನು ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಪ್ರಮಾಣಪತ್ರದಲ್ಲಿ ಅವರು ಮದ್ಯ ಸೇವಿಸಿರುವುದು ದೃಢಪಟ್ಟಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಲ್ಲಿ ಆರೋಪಗಳನ್ನು ನಿರಾಕರಿಸಿದ್ದ ಕೌಶಿಕ್, ತಾವು 18 ವರ್ಷಗಳಿಂದ ಯಾವುದೇ ಕಳಂಕವಿಲ್ಲದೆ ವಕೀಲ ವೃತ್ತಿ ನಡೆಸುತ್ತಿರುವುದಾಗಿ ಹೇಳಿದ್ದರು. ಅಲ್ಲದೆ, 35 ವರ್ಷಗಳಿಂದ ಅಪಸ್ಮಾರದಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿರುವ 75 ವರ್ಷದ ತಾಯಿಯನ್ನು ತಾವೇ ನೋಡಿಕೊಳ್ಳುತ್ತಿರುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಿದ್ದರು.
ಆದರೆ, ಪ್ರಕರಣದ ಒಟ್ಟಾರೆ ದಾಖಲೆಗಳು ಮತ್ತು ಅವರ ವರ್ತನೆಯನ್ನು ಪರಿಗಣಿಸಿದ ಹೈಕೋರ್ಟ್, ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಒಂದು ದಿನದ ಸರಳ ಜೈಲು ಶಿಕ್ಷೆ ಹಾಗೂ ₹2 ಸಾವಿರ ದಂಡ ವಿಧಿಸಿದೆ.