
ಬೆಳ್ತಂಗಡಿ, : “ಮಲೆಕುಡಿಯ ಸಮುದಾಯದ ಪರವಾಗಿ ಮಾತನಾಡಲು ನನಗೆ ಯಾರ ಅನುಮತಿಯೂ ಬೇಕಾಗಿಲ್ಲ. ಧ್ವನಿ ಇಲ್ಲದವರ ಧ್ವನಿಯಾಗಲು ಜಿಪಿಎ ಕೂಡ ಅಗತ್ಯವಿಲ್ಲ” ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಸಂಚಾಲಕ ಶೇಖರ್ ಲಾಯಿಲ ಹೇಳಿದರು.
ಬೆಳ್ತಂಗಡಿಯ ನಾರಾಯಣ ಗುರು ಸಭಾಭವನದಲ್ಲಿ ಸೆ. 16ರಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1998ರಲ್ಲಿ ಎಡಪಂಥೀಯ ಚಳುವಳಿಯಲ್ಲಿ ಗುರುತಿಸಿಕೊಂಡ ಬಳಿಕ ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ ಹಾಗೂ ಅಸಮಾನತೆಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿರುವುದಾಗಿ ಹೇಳಿದರು.
ತಮ್ಮ ಹೋರಾಟ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಮುಂದೆಯೂ ಹಾಗೆಯೇ ಮುಂದುವರಿಯಲಿದೆ. ಶೋಷಿತ ಹಾಗೂ ಧ್ವನಿ ಇಲ್ಲದ ಜನರ ಪರವಾಗಿ ಮಾತನಾಡುವುದು ತಮ್ಮ ಸಾಮಾಜಿಕ ಬದ್ಧತೆ ಎಂದು ಅವರು ಹೇಳಿದರು.
ಮಲೆಕುಡಿಯರ ಪರ ಹಲವು ಹೋರಾಟಗಳ ಉಲ್ಲೇಖ
2004ರಲ್ಲಿ ಮಲವಂತಿಗೆ ಗ್ರಾಮದ ಸಂಜೀವ ಮಲೆಕುಡಿಯ ಅವರ ಮೇಲೆ ನಡೆದ ಅರೆಬೆತ್ತಲೆ ಪ್ರಕರಣದ ವಿರುದ್ಧ ಧ್ವನಿ ಎತ್ತಿ ಬಳಿಕ ಪ್ರಕರಣ ದಾಖಲಿಸಿದ್ದಾಗಿ ಶೇಖರ್ ಲಾಯಿಲ ಹೇಳಿದರು. ಕುಕ್ಕಳ ಗ್ರಾಮದ ಮಲೆಕುಡಿಯ ವ್ಯಕ್ತಿಯೊಬ್ಬರು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟ ಪ್ರಕರಣದಲ್ಲಿಯೂ ಮೃತ ಕುಟುಂಬದ ಪರವಾಗಿ ನಿಂತು, ₹4.50 ಲಕ್ಷ ಪಾವತಿಸದೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವಂತೆ ಮಾಡಿಸಿದ್ದಾಗಿ ತಿಳಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆಯೂ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದರು.
ಬಾಂಜಾರು ಮಲೆಕುಡಿಯ ಕಾಲೋನಿಯಲ್ಲಿ 1982ರಲ್ಲಿ ನಿರ್ಮಿಸಲಾಗಿದ್ದ ಡಿಸಿ ಕಟ್ಟೆಯನ್ನು 2014ರಲ್ಲಿ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಂದ ಉದ್ಘಾಟನೆ ಮಾಡಿಸಿ, ಅಲ್ಲಿನ ಜನರ ಕುಂದುಕೊರತೆಗಳ ಕುರಿತು ಸಭೆ ನಡೆಸಲಾಗಿತ್ತು. ಅಲ್ಲದೆ, ಪ್ರತ್ಯೇಕ ಚುನಾವಣಾ ಬೂತ್ ತೆರೆಯಲು ಕ್ರಮ ಕೈಗೊಳ್ಳಲಾಗಿತ್ತು ಎಂದು ಹೇಳಿದರು.
ಬಾಂಜಾರು ಪ್ರದೇಶಕ್ಕೆ ತ್ರಿಪುರದ ಲೋಕಸಭಾ ಸದಸ್ಯ ಜಿತೇಂದ್ರ ಚೌಧರಿ ಅವರನ್ನು ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವಂತೆ ಮಾಡಲಾಗಿದೆ. 600ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ನಡೆದಿದೆ ಎಂದು ಅವರು ಹೇಳಿದರು.
ವಿಠ್ಠಲ ಮಲೆಕುಡಿಯ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮಕ್ಕೆ ಅಂದಿನ ಪಾಲಕ್ಕಾಡ್ ಲೋಕಸಭಾ ಸದಸ್ಯ ಎಂ.ಬಿ. ರಾಜೇಶ್ ಅವರನ್ನು ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವಂತೆ ಮಾಡಿರುವುದಾಗಿ ತಿಳಿಸಿದರು.
ನೆರಿಯ ಗ್ರಾಮದ ಸುಂದರ ಮಲೆಕುಡಿಯ ಕಾಟಾಜೆ ಅವರ ಮೇಲೆ ಕಳೆ ಕೊಚ್ಚುವ ಯಂತ್ರದಿಂದ ದಾಳಿ ನಡೆದ ಸಂದರ್ಭದಲ್ಲಿ ಅವರ ಕುಟುಂಬದ ಪರವಾಗಿ ನಿರಂತರವಾಗಿ ನಿಂತಿದ್ದಾಗಿ ಹೇಳಿದರು. ನಿಡ್ಲೆ ಗ್ರಾಮದ ಮಲೆಕುಡಿಯ ಸಮುದಾಯಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಲ್ಲಿ ಮಧ್ಯವರ್ತಿಗಳಿಂದ ದುರುಪಯೋಗವಾಗಿದೆ ಎಂಬ ಆರೋಪದ ಪ್ರಕರಣದಲ್ಲಿಯೂ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾಗಿ ಅವರು ತಿಳಿಸಿದರು.
‘ಶಾಸಕರು ಪ್ರಶ್ನೆಗಳಿಗೆ ಉತ್ತರಿಸಬೇಕು’
ನಾವೂರು ಮತ್ತು ಕುತ್ಲೂರು ಗ್ರಾಮಗಳ ವಿದ್ಯುತ್ ಸಂಪರ್ಕಕ್ಕೆ ಅನುಮತಿ ಸಂಬಂಧಿಸಿ ತಮ್ಮ ಸಂಘಟನೆ ನಡೆಸಿದ ಪತ್ರಿಕಾಗೋಷ್ಠಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇರವಾಗಿ ಉತ್ತರಿಸದೆ, ತಮ್ಮ ಹಿಂಬಾಲಕರ ಮೂಲಕ ಹೋರಾಟಗಾರರ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಶೇಖರ್ ಲಾಯಿಲ ಆರೋಪಿಸಿದರು.
“ಇಂತಹ ಪ್ರಯತ್ನಗಳಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ನಮ್ಮ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಬೇಕು,” ಎಂದು ಅವರು ಹೇಳಿದರು.
2019ರಿಂದ 2023ರವರೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ನಾವೂರು ಹಾಗೂ ಕುತ್ಲೂರು ಗ್ರಾಮಗಳ ವಿದ್ಯುತ್ ಸಂಪರ್ಕಕ್ಕೆ ಶಾಸಕರು ಒಂದೇ ಒಂದು ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಪ್ರಶ್ನಿಸಿದರು.
ಪ್ರಸ್ತುತ ರಾಜ್ಯ ಸರ್ಕಾರದ ಮುತುವರ್ಜಿಯಿಂದ ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸಲಾದ ಅರ್ಜಿಗಳ ಪೈಕಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು ಮತ್ತು ಕುತ್ಲೂರು ಗ್ರಾಮಗಳಿಗೆ ವನ್ಯಜೀವಿ ಮಂಡಳಿಯ ಅನುಮತಿ ದೊರಕಲು ತಮ್ಮ ಸಂಘಟನೆ ಹಾಗೂ ರಕ್ಷಿತ್ ಶಿವರಾಂ ಅವರ ಸತತ ಪ್ರಯತ್ನ ಕಾರಣವಾಗಿದೆ ಎಂದು ಶೇಖರ್ ಲಾಯಿಲ ಹೇಳಿದರು. ಈ ಅನುಮತಿಯನ್ನು ತಮ್ಮ ಸಾಧನೆಯೆಂದು ಬಿಂಬಿಸುವುದು ಸರಿಯಲ್ಲ ಎಂದರು.
‘ಮಲೆಕುಡಿಯರ ಅಭಿವೃದ್ಧಿಯ ಹಕ್ಕು ಯಾರೊಬ್ಬರ ಸ್ವತ್ತಲ್ಲ’
ಹರೀಶ್ ಪೂಂಜಾ ಶಾಸಕರಾದ ಬಳಿಕ ಮಲೆಕುಡಿಯ ಸಮುದಾಯದ ಅಭಿವೃದ್ಧಿಗೆ ಬೇರೆ ಯಾವ ಶಾಸಕರೂ ಮಾಡದಷ್ಟು ಕೆಲಸ ಮಾಡಿದ್ದಾರೆ ಎಂಬ ಹೇಳಿಕೆ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಶೇಖರ್ ಲಾಯಿಲ ಹೇಳಿದರು.
ಕೋಲೋಡಿ ಮಲೆಕುಡಿಯ ಕಾಲೋನಿಯಲ್ಲಿ ದಿವಂಗತ ವಸಂತ ಬಂಗೇರ ಅವರ ಅವಧಿಯಲ್ಲಿ ₹16.50 ಕೋಟಿ ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣ, ಸೇತುವೆ ಹಾಗೂ ಮೋರಿಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, 400ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎಂದು ಅವರು ಹೇಳಿದರು.
ಬಾಂಜಾರು ಮಲೆಕುಡಿಯ ಕಾಲೋನಿಯ ಅಭಿವೃದ್ಧಿಯೂ ಹಿಂದಿನ ಅವಧಿಗಳಲ್ಲಿನ ಹೋರಾಟ ಮತ್ತು ಸರ್ಕಾರದ ಕ್ರಮಗಳ ಫಲವಾಗಿದೆ ಎಂದು ತಿಳಿಸಿದರು.
ಹತ್ತಕ್ಕಿಂತ ಕಡಿಮೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾನೂನಿನ ತೊಡಕು ಇದೆ ಎಂಬ ವಾದವನ್ನು ಅವರು ಪ್ರಶ್ನಿಸಿದರು. 2017ರಲ್ಲಿ ದಿವಂಗತ ವಸಂತ ಬಂಗೇರ ಅವರ ಅವಧಿಯಲ್ಲಿ ನಡ ಗ್ರಾಮದ ಎಂಟು ಮನೆಗಳು ಹಾಗೂ ಸವಣಾಲು ಗ್ರಾಮದ ಒಂದು ಮನೆ ಸೇರಿದಂತೆ ಒಟ್ಟು ಒಂಬತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಹರೀಶ್ ಎಳನೀರು ಅವರ ಮನೆಗೂ ವಿದ್ಯುತ್ ಸಂಪರ್ಕವಾಗದಿರುವ ವಿಚಾರವನ್ನು ಉಲ್ಲೇಖಿಸಿದ ಅವರು, ಈ ಕುರಿತು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಬಾರದು ಎಂದು ಹೇಳಿದರು.
‘ಮಲೆಕುಡಿಯ ಸಮುದಾಯ ಯಾರೊಬ್ಬರ ಗುತ್ತಿಗೆಯಲ್ಲ’
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಲೆಕುಡಿಯ ಸಮುದಾಯಕ್ಕೆ ಅಗತ್ಯವಿಲ್ಲ ಎಂದು ಶಾಸಕರ ಹಿಂಬಾಲಕರು ಹೇಳಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಶೇಖರ್ ಲಾಯಿಲ ಹೇಳಿದರು.
2005ರಿಂದಲೇ ಸಮಿತಿ ಮಲೆಕುಡಿಯ ಸಮುದಾಯದ ನಡುವೆ ಕೆಲಸ ಮಾಡುತ್ತಿದ್ದು, ಸಮುದಾಯದ ಪರವಾಗಿ ನಡೆದ ಹೋರಾಟಗಳಲ್ಲಿ ಸಮಿತಿಯ ಸದಸ್ಯರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿರುವುದಾಗಿ ಅವರು ಹೇಳಿದರು.
“ಮಲೆಕುಡಿಯ ಸಮುದಾಯಕ್ಕೆ ಎಲ್ಲೇ ಅನ್ಯಾಯ, ದೌರ್ಜನ್ಯ ಅಥವಾ ಹಿಂಸೆ ನಡೆದರೂ ಮಧ್ಯಪ್ರವೇಶಿಸಿದ ಸಂಘಟನೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ. ಸಮಿತಿಯ ಅಗತ್ಯ ಶಾಸಕರ ಹಿಂಬಾಲಕರಿಗೆ ಇಲ್ಲದಿರಬಹುದು. ಆದರೆ ಸಮಸ್ತ ಮಲೆಕುಡಿಯ ಸಮುದಾಯಕ್ಕೆ ಅದರ ಅಗತ್ಯವಿದೆ. ಮಲೆಕುಡಿಯ ಸಮುದಾಯವನ್ನು ಯಾರಿಗೂ ಗುತ್ತಿಗೆ ನೀಡಿಲ್ಲ,” ಎಂದು ಅವರು ಹೇಳಿದರು.
ಮಲೆಕುಡಿಯ ಸಮುದಾಯದ ಪರವಾಗಿ ಧ್ವನಿ ಎತ್ತುವುದನ್ನು ಯಾವುದೇ ಒತ್ತಡದಿಂದ ನಿಲ್ಲಿಸಲು ಸಾಧ್ಯವಿಲ್ಲ. ಮುಂದೆಯೂ ಶೋಷಿತ ಜನರ ಪರವಾಗಿ ಹೋರಾಟ ಮುಂದುವರಿಸುವುದಾಗಿ ಶೇಖರ್ ಲಾಯಿಲ ತಿಳಿಸಿದರು.
“ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಾಯುವ ತನಕವೂ ಮಲೆಕುಡಿಯ ಸಮುದಾಯದ ಪರವಾಗಿ ಕೆಲಸ ಮಾಡುತ್ತೇನೆ. ತಾಕತ್ತಿದ್ದರೆ ತಡೆಯಿರಿ,” ಎಂದು ಅವರು ಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ
ಜಯಾನಂದ ಪಿಲಿಕಲ
ನವೀನ್ ಪುಲಿತ್ತಡಿ ನಾವೂರು
ಲೋಕೇಶ್ ಕುದ್ಕೊಳಿ ನಡ,
ಅವಿನಾಶ್ ನಾವೂರು ಉಪಸ್ಥಿತರಿದ್ದರು.