ಬೆಳ್ತಂಗಡಿ ನ್ಯಾಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

 

 

ಬೆಳ್ತಂಗಡಿ: ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘ, ಬೆಳ್ತಂಗಡಿ ಇವರ ಜಂಟಿ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬೆಳ್ತಂಗಡಿ ಇದರ ನ್ಯಾಯಾಧೀಶರಾದ ಶ್ರೀ ಮನು ಬಿ.ಕೆ. ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಪ್ರತಿಯೊಬ್ಬ ನಾಗರಿಕರೂ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸುವ ಮೂಲಕ ದೇಶದ ಪ್ರಗತಿಗೆ ಕಾರಣಕರ್ತರಾಗಬೇಕು ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬೆಳ್ತಂಗಡಿ ಇದರ ನ್ಯಾಯಾಧೀಶರಾದ ಶ್ರೀ ರಾಮಲಿಂಪ್ಪ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವಾರು ಮಹನೀಯರು ಭಾಗವಹಿಸಿದ್ದನ್ನು ಸ್ಮರಿಸಿದರು.

ವಕೀಲರು ಮತ್ತು ನ್ಯಾಯಾಂಗದ ಸದಸ್ಯರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಪ್ರಜಾಪ್ರಭುತ್ವದಲ್ಲಿ ಕಾನೂನಿನ ಆಳ್ವಿಕೆ, ವ್ಯಕ್ತಿಯ ಘನತೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಹಾಗೂ ನ್ಯಾಯದ ರಕ್ಷಣೆ ಇವು ಕೇವಲ ಪುಸ್ತಕದಲ್ಲಿರುವ ತತ್ವಗಳಾಗಿ ಉಳಿಯದೆ ಪ್ರತಿಯೊಬ್ಬ ನಾಗರಿಕನ ಜೀವನದಲ್ಲೂ ಅನುಭವವಾಗಬೇಕು. ನ್ಯಾಯಾಲಯದ ಬಾಗಿಲಿಗೆ ಬರುವ ವ್ಯಕ್ತಿ ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ, ಪ್ರಭಾವಿಯಾಗಿರಲಿ ಅಥವಾ ಸಾಮಾನ್ಯನಾಗಿರಲಿ, ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬ ವಿಶ್ವಾಸವನ್ನು ಉಳಿಸುವುದೇ ನಿಜವಾದ ಸ್ವಾತಂತ್ರ್ಯದ ರಕ್ಷಣೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು ನಮಗೆ ನೀಡಿದ ದೇಶವನ್ನು ಇನ್ನಷ್ಟು ಉತ್ತಮಗೊಳಿಸುವುದು, ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು, ಕಾನೂನಿನ ಆಳ್ವಿಕೆಯನ್ನು ಬಲಪಡಿಸುವುದು, ಸಾಮಾನ್ಯ ನಾಗರಿಕನಿಗೂ ನ್ಯಾಯ ಸುಲಭವಾಗಿ ದೊರಕುವಂತೆ ಪ್ರಯತ್ನಿಸುವುದು ಹಾಗೂ ವೈಯಕ್ತಿಕ ಕರ್ತವ್ಯಗಳನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವ ಸಂಕಲ್ಪವನ್ನು ಮಾಡಬೇಕು. ವಿದೇಶಿ ಆಳ್ವಿಕೆಯಿಂದ ಮುಕ್ತಿಯಾಗುವುದಷ್ಟೇ ಸ್ವಾತಂತ್ರ್ಯವಲ್ಲ; ಭಯ, ಅನ್ಯಾಯ ಹಾಗೂ ಅಸಮಾನತೆಯಿಂದ ಮುಕ್ತಿ ಹೊಂದಿ ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಅವಕಾಶ ದೊರಕುವುದೇ ನಿಜವಾದ ಸ್ವಾತಂತ್ರ್ಯ ಎಂದು ಅವರು ತಿಳಿಸಿದರು. ಸ್ವಾತಂತ್ರ್ಯವನ್ನು ನಮಗೆ ಕೊಡುಗೆಯಾಗಿ ನೀಡಿದ ತಿಳಿದ ಹಾಗೂ ತಿಳಿಯದ ಎಲ್ಲ ವೀರ ಯೋಧರಿಗೆ ಕೃತಜ್ಞತಾಪೂರ್ವಕ ನಮನ ಸಲ್ಲಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಎಸ್. ಲೋಬೋ ವಹಿಸಿದ್ದರು. ವೇದಿಕೆಯಲ್ಲಿ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬೆಳ್ತಂಗಡಿ ಇದರ ನ್ಯಾಯಾಧೀಶರಾದ ಶ್ರೀ ಶಶಾಂಕ ನಾಗೇಂದ್ರ ಭಟ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಎಂ., ಹಿರಿಯ ಸಮಿತಿ ಅಧ್ಯಕ್ಷರಾದ ಶಿವಕುಮಾರ್ ಎಸ್.ಎಂ. ಹಾಗೂ ಕೋಶಾಧಿಕಾರಿ ಮಮ್ತಾಜ್ ಬೇಗಂ ಉಪಸ್ಥಿತರಿದ್ದರು.

ಸ್ಥಳೀಯ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವಕೀಲರಾದ ಅಕ್ಷಯ ಟಿ. ರಾವ್, ಪ್ರತೀಕ್ಷಾ, ಮನಿಷ, ಶ್ರಾವ್ಯ, ಹೇಮಲತಾ ಹಾಗೂ ಅನುಜ್ಞಾ ಸಾಲಿಯನ್ ಅವರು ‘ವಂದೇ ಮಾತರಂ’ ಗೀತೆ ಹಾಡಿದರು.

ಪ್ರಧಾನ ಕಾರ್ಯದರ್ಶಿ ಪ್ರಶಾಂತ ಎಂ. ಸ್ವಾಗತಿಸಿದರು. ಕೋಶಾಧಿಕಾರಿ ಮಮ್ತಾಜ್ ಬೇಗಂ ವಂದಿಸಿದರು. ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ ಎ. ಹಾಗೂ ಜೊತೆ ಕಾರ್ಯದರ್ಶಿ ಹರ್ಷಿತ್ ಹೆಚ್. ಕಾರ್ಯಕ್ರಮ ನಿರೂಪಿಸಿದರು.

error: Content is protected !!