
ದೆಹಲಿ: ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ ಲಭ್ಯವಿರುವ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ನಾಲ್ಕಕ್ಕೆ ಇಳಿಕೆ ಮಾಡಿದೆ.
ಮೇ 2016 ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳು ಆರಂಭದಲ್ಲಿ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳಿಗೆ ಅರ್ಹರಾಗಿದ್ದರು. ಕಳೆದ ವರ್ಷ ಸಬ್ಸಿಡಿ ಕೋಟಾವನ್ನು ಒಂಬತ್ತು ಸಿಲಿಂಡರ್‌ಗಳಿಗೆ ಇಳಿಸಲಾಗಿತ್ತು ಮತ್ತು ಈಗ ಅದನ್ನು ನಾಲ್ಕಕ್ಕೆ ಇಳಿಕೆ ಮಾಡಲಾಗಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನೂಜಾ, ಪರಿಷ್ಕೃತ ಅರ್ಹತೆಯು ಉಜ್ವಲ ಫಲಾನುಭವಿಗಳ ಸರಾಸರಿ ವಾರ್ಷಿಕ ಬಳಕೆಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ಧಾರೆ.
ಶುದ್ಧ ಅಡುಗೆ ಇಂಧನದ ಬಳಕೆಯನ್ನು ಉತ್ತೇಜಿಸಲು ಮತ್ತು ಕೈಗೆಟುಕುವಿಕೆಯನ್ನು ಸುಧಾರಿಸಲು, ಸರ್ಕಾರವು ಮೇ 2022 ರಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ನೀಡಿತ್ತು. ಇದನ್ನು ವಾರ್ಷಿಕವಾಗಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತಿತ್ತು. ಪ್ರತಿ ಸಿಲಿಂಡರ್ ಖರೀದಿಸಿದ ನಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ಅಕ್ಟೋಬರ್ 2023 ರಲ್ಲಿ ಈ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಈ ಪ್ರಯೋಜನವನ್ನು 5 ಕೆಜಿ ಸಿಲಿಂಡರ್‌ಗಳಗೂ ವಿಸ್ತರಿಸಲಾಗಿತ್ತು.
ನವದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‌ನ ಬೆಲೆ ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಹೆಚ್ಚಳವಾಗಿದ್ದು, ಒಟ್ಟು 89 ರೂ.ಗಳಷ್ಟು ಹೆಚ್ಚಾಗಿದೆ. ಜೂನ್ 7ರ ನಂತರದ ಬೆಲೆ 942 ರೂ.ಗಳಾಗಿದೆ. 300 ರೂ. ಸಬ್ಸಿಡಿಯನ್ನು ಲೆಕ್ಕಹಾಕಿದ ನಂತರ, ಪಿಎಂಯುವೈ ಫಲಾನುಭವಿಗಳು 14.2 ಕೆಜಿ ಸಿಲಿಂಡರ್‌ಗೆ 642 ರೂ.ಗಳನ್ನು ಪಾವತಿಸುತ್ತಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ನಂತರ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ಏರಿಕೆಯಾಗಿದೆ. ಹೀಗಾಗಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಪೂರೈಸುವ ವೆಚ್ಚವು 1,600 ರೂ.ಗಳಿಗಿಂತ ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಖನೂಜಾ ಹೇಳಿದ್ದಾರೆ.
ಸರ್ಕಾರವು 2022 ರಿಂದ 52,000 ಕೋಟಿ ರೂ. ಸಬ್ಸಿಡಿ ನೀಡಿದೆ. ಬೆಲೆ ಏರಿಕೆಯ ಹೊರತಾಗಿಯೂ, ತೈಲ ಕಂಪನಿಗಳು 14.2 ಕೆಜಿ ಸಿಲಿಂಡರ್‌ಗೆ ಸುಮಾರು 700 ರೂ. ನಷ್ಟವನ್ನು ಮುಂದುವರೆಸಿವೆ ಎಂದು ಖನೂಜಾ ತಿಳಿಸಿದ್ದಾರೆ. ಎಲ್‌ಪಿಜಿ ಜೊತೆಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದಲೂ ನಷ್ಟ ಅನುಭವಿಸುತ್ತಿವೆ ಎಂದು ಅವರು ಬೆಲೆ ಏರಿಕೆಗೆ ಕಾರಣಗಳನ್ನು ನೀಡಿದ್ದಾರೆ.
ಎಲ್‌ಪಿಜಿ ಹೊರತುಪಡಿಸಿ, ತೈಲ ಕಂಪನಿಗಳು ಕಳೆದ ತಿಂಗಳು ನಾಲ್ಕು ಕಂತುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 7.50 ರೂ. ಹೆಚ್ಚಿಸಿವೆ. ಸಿಎನ್‌ಜಿ ದರಗಳನ್ನು ಸಹ ಪ್ರತಿ ಕೆಜಿಗೆ 6 ರೂ. ಹೆಚ್ಚಿಸಲಾಗಿದೆ.