
ದೆಹಲಿ: ರಸ್ತೆ ಅಪಘಾತಗಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎರಡು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕುರಿತು ಸೋಮವಾರ ಘೋಷಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅಪಘಾತದ ವೇಳೆ ತಕ್ಷಣ ಸ್ಪಂದಿಸಿ ಜೀವ ಉಳಿಸುವ ಸಾರ್ವಜನಿಕರಿಗೆ ದೊಡ್ಡ ಮೊತ್ತದ ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಈ ಯೋಜನೆಗಳ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ದೇಶದಲ್ಲಿ ಪ್ರತಿ ವರ್ಷ 1.8 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾಯುತ್ತಿದ್ದಾರೆ. 5 ಲಕ್ಷ ಅಪಘಾತಗಳು ಸಂಭವಿಸುತ್ತಿವೆ ಎಂದು ಏಮ್ಸ್ ವೈದ್ಯರ ನೇತೃತ್ವದ ಸಮಿತಿ ವರದಿ ನೀಡಿದೆ. ಅಪಘಾತಕ್ಕೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರೆ ಶೇಕಡಾ 30ರಷ್ಟು ಜನರನ್ನು ಬದುಕಿಸಬಹುದು. ಅಂದರೆ, ಸುಮಾರು 50 ಸಾವಿರ ಜೀವಗಳನ್ನು ಉಳಿಸಬಹುದಾಗಿದೆ” ಎಂದು ತಿಳಿಸಿದರು.
ರಾಹವೀರ್ ಯೋಜನೆ: ರಸ್ತೆ ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ರಕ್ಷಿಸಲು ರಾಹವೀರ್ ಎಂಬ ಯೋಜನೆಯನ್ನು ಪರಿಚಯಿಸಲಾಗಿದೆ. ಅಂದರೆ, ಅಪಘಾತ ಉಂಟಾದಾಗ ಅಲ್ಲಿದ್ದ ಇತರ ಜನರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೆ ಅವರನ್ನು ರಾಹವೀರ್ ಎಂದು ಘೋಷಿಸಿ ಕೇಂದ್ರ ಸರ್ಕಾರದಿಂದ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಗಡ್ಕರಿ ಅವರು ತಿಳಿಸಿದರು.
₹1.5 ಲಕ್ಷದವರೆಗೆ ಉಚಿತ ತುರ್ತು ಚಿಕಿತ್ಸೆ: ತುರ್ತು ಚಿಕಿತ್ಸೆಗೆ ಹಣದ ಕೊರತೆ ಎದುರಾಗದಂತೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಅದೇನೆಂದರೆ, ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆ ಸೇರಿ ಯಾವುದೇ ರಸ್ತೆಯಲ್ಲಿ ಅಪಘಾತ ಸಂಭವಿಸಿದರೂ, ಗಾಯಾಳುಗಳನ್ನು ಯಾವುದೇ ಆಸ್ಪತ್ರೆಗೆ ದಾಖಲಿಸಿದ್ದರೂ, ಮೊದಲ ಏಳು ದಿನಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಗರಿಷ್ಠ 1.5 ಲಕ್ಷ ರೂಪಾಯಿವರೆಗಿನ ಆಸ್ಪತ್ರೆ ಬಿಲ್ ಅನ್ನು ಸರ್ಕಾರವೇ ನೇರವಾಗಿ ಪಾವತಿಸಲಿದೆ” ಎಂದು ಸಚಿವರು ಮಾಹಿತಿ ನೀಡಿದರು.
ವಿಶ್ವದಲ್ಲಿಯೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಭಾರತದಲ್ಲಿ. ಹೀಗಾಗಿ, ಸಾರ್ವಜನಿಕರು ಸಹಕರಿಸಿದರೆ ಅಮೂಲ್ಯ ಜೀವಗಳನ್ನು ಉಳಿಸಬಹುದು. ಈ ಯೋಜನೆಗೆ ಖಾಸಗಿ ವಲಯದ ‘ರ‍್ಯಾಪಿಡೋ’ ಸಂಸ್ಥೆ ಕೈಜೋಡಿಸಿದೆ ಎಂದು ಅವರು ತಿಳಿಸಿದರು.