
ಬೆಳ್ತಂಗಡಿ: ಗ್ರಾಮೀಣಾಭಿವೃದ್ಧಿ ಬಗ್ಗೆ ನಾವು ಮಾತನಾಡುತ್ತೇವೆ. ಈ ಕಾರ್ಯ ಭಾರತಾದ್ಯಂತ ಆಗಬೇಕೆಂದು ಎಲ್ಲರೂ ಮಾತನಾಡುತ್ತಾರೆ. ಆದರೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಿರಿ ಹೆಸರಿನಲ್ಲಿ ಅದು ಚಾಲನೆಯಲ್ಲಿದೆ. ಸಿರಿ ಮೂಲಕ ಮಹಿಳೆಯರ, ಬಡವರ ಉದ್ಧಾರಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರಮಿಸುತ್ತಿದ್ದಾರೆ. ಇದರ ಸಾಧನೆಗೆ ಯಶಸ್ವೀ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾರೆ ಎಂಬಂತೆ ಅವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಶ್ರಮ ಇಲ್ಲಿ ಕಾಣುತ್ತಿದೆ ಎಂದು ಉಪರಾಷ್ಟ್ರಪತಿ ಪಿ.ರಾಧಾಕೃಷ್ಣನ್ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಸಿರಿ ಮಾತೃಶ್ರೀ ಪಾರ್ಕ್ ಉದ್ಘಾಟನೆ ಮಾಡಿ ಅವರು ಮಾತನಾಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದು ಕೃತಾರ್ಥನಾಗಿದ್ದೇನೆ ಎಂದರು.

ಗ್ರಾಮೀಣ ಹಿನ್ನೆಲೆಯುಳ್ಳ ಬಡವರಿಗೆ ಸಿರಿ ನೇರವಾಗಿ ನೆರವಾಗಿದೆ. ರಾತ್ರೋರಾತ್ರಿ ಇದು ಬೆಳೆದಿಲ್ಲ
ವರ್ಷಾನುಗಟ್ಟಲೆ ಕಾಲ ತಗೆದುಕೊಂಡು ಬೆಳೆದಿದೆ ಮಾತೃಶ್ರೀ ಸಿರಿ ಕೈಗಾರಿಕಾ ಪಾರ್ಕ್ ನಿರ್ಮಾಣ ಆಗಿರೋದು, ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಕೊಟ್ಟಿರುವ ಸೌಲಭ್ಯ,
ಇದೆಲ್ಲಾ ನೋಡಿ ನಾನು ಬಹಳ ಖುಷಿಯಾಗಿದ್ದೇನೆ ಎಂದು ಉಪ ರಾಷ್ಟ್ರಪತಿ ಪಿ.ರಾಧಾಕೃಷ್ಣನ್ ಹೇಳಿದರು.

ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ದೂರದೃಷ್ಟಿ ಹಾಗೂ ನೇತೃತ್ವದಲ್ಲಿ ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ, “ಸಿರಿ” ಗ್ರಾಮೋದ್ಯೋಗ ಸಂಸ್ಥೆ, ರುಡ್‌ಸೆಟ್ ಮೊದಲಾದ ಯೋಜನೆಗಳು ನಿರುದ್ಯೋಗ ನಿವಾರಣೆಯೊಂದಿಗೆ ರಾಷ್ಟ್ರದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಧರ್ಮದ ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರು ನೀಡುತ್ತಿರುವ ಸೇವೆ ಅಮೂಲ್ಯವಾಗಿದೆ. ಧಾರ್ಮಿಕ, ಶಿಕ್ಷಣ, ಆರೋಗ್ಯ, ಕಲೆ-ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಾಡಿರುವ ಕೆಲಸ ಅಪಾರ ಎಂದರು.

ಒಬ್ಬನೆ ಒಬ್ಬ ಹಿಂದುವಿನಲ್ಲಿ ಮೂಲಭೂತವಾದಿ ಇರುವುದಿಲ್ಲ. ಸರ್ವಜನಾಂಗದದವರು ನಮ್ಮ ದೇಶದಲ್ಲಿ ಅನ್ಯೋನ್ಯವಾಗಿದ್ದಾರೆ. ನಾನು ಮೂಲಭೂತವಾದಿಯಲ್ಲ. ಎಲ್ಲಾ ಧರ್ಮದವರನ್ನು ಗೌರವಿಸುತ್ತೇನೆ. ಅಲ್ಲನೂ ದೇವರು, ಕ್ರಿಸ್ತನೂ ದೇವರು. ಆದರೆ ನಾನು ಮತಾಂತರವನ್ನು ಒಪ್ಪುವುದಿಲ್ಲ. ಮತಾಂತರ ಅನ್ನುವುದು ಧರ್ಮ ಧರ್ಮಗಳ ನಡುವೆ ಘರ್ಷಣೆಗೆ, ವೈರತ್ವಕ್ಕೆ ಕಾರಣವಾಗುತ್ತದೆ ಎಂದರು.

ನಿಜವಾದ ಜಾತ್ಯಾತೀತತೆ ಅಂದರೆ ಎಲ್ಲಾ ಧರ್ಮಗಳನ್ನು ಗೌರವಿಸೋದು. ಅವರವರ ಧರ್ಮದವರ ನಂಬಿಕೆಗೆ ಗೌರವ ನೀಡುವುದು. ಹಾಗಂತ ನನ್ನನ್ನು ಮತಾಂತರಗೊಂಡು ಬೇರೆ ದೇವರನ್ನು ಪೂಜಿಸು ಅಂದ್ರೆ ಅದು ಸಾಧ್ಯವೇ ಇಲ್ಲ. ಧರ್ಮಸ್ಥಳ ಕೂಡ ಜಾತ್ಯಾತೀತವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಜಾತಿ, ಮತ, ಧರ್ಮಗಳು ಸೇರಿದಂತೆ ಸಮಾಜನದ ಪ್ರತಿಯೊಬ್ಬರನ್ನು ಅಭಿವೃದ್ಧಿಗಳಿಸುವುದೆ ನಿಜನಾದ ಅಭಿವೃದ್ಧಿ. ಪ್ರಧಾನಿ ಅವರ ವಿಕಸಿತ ಭಾರತ ಕೂಡ ಇದನ್ನೇ ಹೇಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ನಾವು ಪ್ರಾರಂಭಿಸಿದಾಗ ಆರಂಭದಲ್ಲಿ ದೀರ್ಘಾವಧಿ ಕೃಷಿ ಮತ್ತು ಅಲ್ಪಾವಧಿ ಕೃಷಿಗೆ ಪ್ರೋತ್ಸಾಹ ನೀಡಿದೆವು. “ಸಿರಿ” ಉದ್ಯೋಗಿಗಳು ಕೇವಲ ಉದ್ಯೋಗಿಗಳಲ್ಲ. ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸುವ ಪರಿವರ್ತನೆಯ ಹರಿಕಾರರು. ನಿಮ್ಮ ಗೌರವಯುತ ಜೀವನ, ಕುಟುಂಬದ ಸುಖ, ನಿಮ್ಮ ಮಕ್ಕಳ ಭವಿಷ್ಯ ನನಗೆ ಸಂಸ್ಥೆಯ ಲಾಭಕ್ಕಿಂತಲೂ ಮುಖ್ಯವಾಗಿದೆ ಎಂದು ಹೇಳಿದರು.
“ಸಿರಿ” ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನಮ್ಮ ಸಂಘಟಿತ ಪ್ರಯತ್ನ, ಪರಿಶ್ರಮ ಮತ್ತು ಕನಸುಗಳ ಪ್ರತೀಕವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಎಂದರೆ ಕೇವಲ ಮನೆಯ ಸದಸ್ಯೆ ಅಲ್ಲ. ಸಮಾಜವನ್ನು ಉಳಿಸುವ ಶಕ್ತಿ. “ಮಾತೃಶ್ರೀ” ಅಂದರೆ ತಾಯಿತನ, ತ್ಯಾಗ, ಶಕ್ತಿ ಮತ್ತು ಕರುಣೆಗೆ ಸಲ್ಲಿಸುವ ಗೌರವ. ಈ ಕೈಗಾರಿಕಾ ಪಾರ್ಕ್ಗೆ ಬರುವ ಪ್ರತಿ ಮಹಿಳೆಯೂ ಕಾರ್ಮಿಕಳಲ್ಲ ಅವಳು ಸೃಷ್ಟಿಕರ್ತೆ, ಪೋಷಕಳು ಮತ್ತು ದೇಶದ ಅಮೂಲ್ಯ ಶಕ್ತಿ. “ಸಿರಿ”ಯನ್ನು ಲಾಭರಹಿತ ಸೇವಾಸಂಸ್ಥೆಯಾಗಿ ರೂಪಿಸಿದ್ದು, ಕಚ್ಚಾವಸ್ತುಗಳನ್ನು ಪೂರೈಸಿ ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗಳನ್ನು ತಲುಪುವಂತೆ ಸಂಪರ್ಕ ನಿರ್ಮಿಸಲಾಯಿತು. ಹಾಗಾಗಿ ಇದು ಮಹಿಳಾ ಆರ್ಥಿಕ ಸಬಲೀಕರಣದ ಚಳುವಳಿಯಾಗಿ ಬೆಳೆದಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಜಿಯವರ “ಆತ್ಮನಿರ್ಭರ ಭಾರತ” ತತ್ವದ ನೆಲೆಯಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರುಡ್‌ಸೆಟ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. “ಸಿರಿ” ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಮುಂದಿನ ಪೀಳಿಗೆಯ ಗ್ರಾಮೀಣ ಮಹಿಳೆಯರ ಬದುಕಿಗೆ ಬೆಳಕಾಗಲಿ, ಗ್ರಾಮೀಣ ಪರಿವರ್ತನೆಗೆ ಮಾದರಿಯಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದ.ಕ.ಜಿಲ್ಲಾ ಸಂಸದ ಬ್ರಿಜೇಶ್ ಚೌಟ, ರಾಜ್ಯಸಭೆಯ ಕಾರ್ಯದರ್ಶಿ ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಡಾ.ಹೇಮಾವತಿ ವೀ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಡಿ ಸುರೇಂದ್ರ ಕುಮಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ್ ಸ್ವಾಗತಿಸಿದರು. ಉಜಿರೆ ಎಸ್.ಡಿ.ಎಂ ಕಾಲೇಜು ಪ್ರೊಫೇಸರ್ ಡಾ. ಶಶಿಧರ್ ಭಟ್ ನಿರ್ವಹಿಸಿದರು.