ದಾವಣಗೆರೆ: ರಾಜ್ಯದ್ಯಂತ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೆ ಅದಕ್ಕೆ ಸಾಕ್ಷಿ ಎಂಬಂತೆ ದಾವಣಗೆರೆಯಲ್ಲಿ ಒಂದು ಘಟನೆ ನಡೆದಿದೆ.
ಚಂದ್ರಶೇಖರ್ ಎಂಬವರು ಆನ್‌ಲೈನ್ ಮೂಲಕ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ 10 ಲಕ್ಷ ರೂ. ಸಾಲ ಮಾಡಿದ್ದರು. ಪ್ರತಿ ತಿಂಗಳು ಕಂತಿನಂತೆ ಎಲ್ಲಾ ಸಾಲವನ್ನು ಕಟ್ಟಿದ್ದರು. ಉಳಿದ 99 ರೂ. ಕಟ್ಟಿಸಿಕೊಂಡು ಕ್ಲೀಯರೆನ್ಸ್ ಕೊಡಿ ಎಂದು ಕೇಳಿದಾಗ “ಕ್ಲಿಯರೆನ್ಸ್ ಸರ್ಟಿಫಿಕೇಟ್ ಬೇಕು ಅಂದ್ರೆ 58,000 ಕಟ್ಟಬೇಕು” ಎಂದು ಚಂದ್ರಶೇಖರ್‌ಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೇಳಿದ್ದಾರೆ.
ದಾಖಲೆ ಪ್ರಕಾರ ಕೇವಲ 99 ರೂಪಾಯಿ ಕಟ್ಟಿದರೆ ಸಾಲ ಮುಕ್ತವಾಗುತ್ತದೆ. ಆದರೆ ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿ 58,000 ಕಟ್ಟಲೇಬೇಕು ಎಂದು ಚಂದ್ರಶೇಖರ್‌ಗೆ ಕಿರುಕುಳ ನೀಡುತ್ತಿದ್ದಾರೆ. ಚಂದ್ರಶೇಖರ್ ಪಡೆದ ಸಾಲದ ಹಣವನ್ನು ಬಡ್ಡಿ ಸಮೇತ ಕಟ್ಟಿದರೂ ಕೂಡ ಫೈನಾನ್ಸ್ ಕಿರುಕುಳ ತಪ್ಪಿಲ್ಲ. ಈ ಬಗ್ಗೆ ಚಂದ್ರಶೇಖರ್ ಆರ್‌ಬಿಐಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಕಳುಹಿಸಿದೆ. ಈ ನಡುವೆಯೂ ಸಾರ್ವಜನಿಕರ ಮೇಲೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರಿದಿರುವುದು ವಿಪರ್ಯಾಸ ಎನ್ನುತ್ತಿದ್ದಾರೆ ಜನ.