ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಪೌಂಡೇಷನ್ ಬೆಳ್ತಂಗಡಿ ಘಟಕ ಇದರ ಮೂರನೇ ವರ್ಷದ ವಾರ್ಷಿಕೋತ್ಸವ “ಯಕ್ಷ ಸಂಭ್ರಮ” ಕಾರ್ಯಕ್ರಮವು ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಡಿ14 ಶನಿವಾರ ವಿಜೃಂಭಣೆಯಿಂದ ನಡೆಯಲಿದ್ದು, ಈ ಬಗ್ಗೆ ವಿವಿಧ ಸಮಿತಿಗಳ ಅಂತಿಮ ಹಂತದ ಪೂರ್ವ ಸಿದ್ಧತಾ ಸಭೆಯು ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಉಪಸ್ಥಿತಿಯಲ್ಲಿ ನವಶಕ್ತಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಗಳ ಜವಾಬ್ದಾರಿಗಳ ಬಗ್ಗೆ ಚರ್ಚಿಸಲಾಯಿತು.
ನಂತರ ಮಾತನಾಡಿದ ಶಶಿಧರ್ ಶೆಟ್ಟಿಯವರು ಕಳೆದ 2 ವರ್ಷಗಳಿಂದ ಪಟ್ಲ ಯಕ್ಷ ಸಂಭ್ರಮ ಅದ್ದೂರಿಯಾಗಿ ಉಜಿರೆ ಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆದಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿಯೂ ಕಾರ್ಯಕ್ರಮ ಮಾಡಬೇಕೆಂಬ ಯೋಚನೆಯಂತೆ ಗುರುವಾಯನಕೆರೆಯ ಶಕ್ತಿನಗರ ಸಮೀಪದ ನವಶಕ್ತಿ ಮೈದಾನದಲ್ಲಿ ವಿಶೇಷ ರೀತಿಯಲ್ಲಿ ಈ ಬಾರಿಯ ಯಕ್ಷ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ಮಾಡಿ ಅವರಿಗೆ ಜವಾಬ್ದಾರಿಗಳನ್ನು ಹಂಚಲಾಗಿದೆ.ಈ ಬಾರಿಯ ವಿಶೇಷತೆ ಎಂದರೆ ಬೆಳಿಗ್ಗೆ 11.30 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದೆ. ಯಕ್ಷ ಧ್ರುವ ಯಕ್ಷ ಶಿಕ್ಷಣ ಶಾಲಾ ತಂಡಗಳ ಸುಮಾರು 450 ಮಕ್ಕಳು ಯಕ್ಷಗಾನದೊಂದಿಗೆ ರಂಗ ಪ್ರವೇಶ ಮಾಡಲಿದ್ದಾರೆ. ಮೇಳದ ದೇವರ ಮೆರವಣಿಗೆ ಸಂಜೆ 5 ಗಂಟೆಗೆ ಗುರುವಾಯನಕೆರೆ ಬಂಟರ ಭವನದ ಬಳಿಯಿಂದ ಕುಣಿತ ಭಜನೆ,ಚೆಂಡೆ ವಾದ್ಯಗಳು,ಸುಡುಮದ್ದು, ಸೇರಿದಂತೆ ವಿವಿಧ ವೇಷಭೂಷಣಗಳೊಂದಿಗೆ ವಿಜೃಂಭಣೆಯಿಂದ ಕ್ರೀಡಾಂಗಣಕ್ಕೆ ಆಗಮಿಸಲಿದೆ.ಸುಮಾರು 40 ಕ್ಕಿಂತಲೂ ಅಧಿಕ ಬಗೆಯ ವಿವಿಧ ಖಾದ್ಯಗಳ ರುಚಿ ಸವಿಯುವ ಅವಕಾಶ, ಸಿನಿಮ, ತಾರೆಯರು ಯಕ್ಷಗಾನ ಕಲಾವಿದರು ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಸೇರುವ ನಿರೀಕ್ಷೆ ಇರುವುದರಿಂದ ಯಾವುದೇ ರೀತಿಯ ದಟ್ಟನೆಯಾಗದಂತೆ ಸುಮಾರು 5 ಎಕರೆಗಳಿಗಿಂತಲೂ ಅಧಿಕ ಜಾಗ ಸಮತಟ್ಟುಗೊಳಿಸಿ ಸಿದ್ಧಪಡಿಸಲಾಗಿದೆ ಎಂದರು. ಸಭೆಯಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.