ಕಾರವಾರ: ಉತ್ತರಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭಾನುವಾರ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಆತಂಕಗೊಂಡಿದ್ದಾರೆ.
ಶಿರಸಿ ತಾಲೂಕಿನ ಸಂಪಕಂಡ, ಮತ್ತಿಘಟ್ಟ ಸೇರಿದಂತೆ ಕೆಲವು ಗ್ರಾಮಗಳು ಹಾಗೂ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿ, ಹೆಗ್ಗರಣಿ, ಹೇರೂರು, ಕುಮಟಾದ ಮೂರೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಧ್ಯಾಹ್ನದ ವೇಳೆ ಏಕಾಏಕಿ ಭೂಮಿ ಕಂಪಿಸಿದ್ದು, ಮನೆಯಲ್ಲಿದ್ದವರು ಭೂಕಂಪ ಇರಬಹುದೆಂದು ಮನೆಯಿಂದ ಹೊರಬಂದಿದ್ದರು.
ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಏಕಾಏಕಿ ಮನೆಯ ವಸ್ತುಗಳು ಕಂಪಿಸಿದ ಅನುಭವವಾಗಿದ್ದು, ಹಲವರಿಗೆ ಕುಳಿತ ಖುರ್ಚಿ, ಸೋಫಾ ಅಲುಗಾಡಿದ ಅನುಭವವಾಗಿದೆ. ತಗಡಿನ ಮನೆಯಲ್ಲಿದ್ದವರಿಗೆ ಭೂಮಿ ಕಂಪಿಸಿದ ಸ್ಪಷ್ಟ ಅನುಭವವಾಗಿದ್ದು, ಕೆಲಕಾಲ ಮನೆಯೊಳಗೆ ಹೋಗದೇ ಅಪಾಯವಾಗುವ ಆತಂಕದಿಂದ ಹೊರಗೆ ಕಾಲಕಳೆದಿದ್ದಾರೆ.
ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಪ್ರತಿಕ್ರಿಯೆ ನೀಡಿದ್ದು “ನಾವು ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದಲ್ಲಿ ವಿಚಾರಿಸಿದ್ದೇವೆ. ಯಾವುದೇ ರೀತಿಯ ಭೂಕಂಪನವಾಗಿಲ್ಲ. ರಿಕ್ಟರ್ ಮಾಪನದಲ್ಲೂ ದಾಖಲಾಗಿಲ್ಲ, ಹೀಗಾಗಿ ಜನ ಭಯಪಡುವ ಅವಶ್ಯಕತೆ ಇಲ್ಲ. ಇನ್ನು ಈ ಭಾಗದ ಕಾಮಗಾರಿಗಾಗಿ ಯಾವುದೇ ಸ್ಫೋಟ ನಡೆಸಿಲ್ಲ. ಜನರು ಹೇಳಿರುವ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದಿದ್ದಾರೆ.