ರಾಷ್ಟ್ರಕ್ಕೆ ಸೇವೆ ಸಲ್ಲಿಸುವಾಗಲೇ ಪ್ರಾಣ ತ್ಯಾಗ ಮಾಡಿದ ಫ್ಯಾಂಟಮ್:ಉಗ್ರರ ಗುಂಡಿಗೆ ಬಲಿಯಾದ ಶ್ವಾನ: ಫ್ಯಾಂಟಮ್ ತ್ಯಾಗಕ್ಕೆ ಸೇನೆಯ ಕಣ್ಣೀರಿನ ವಿದಾಯ

ಜಮ್ಮು ಮತ್ತು ಕಾಶ್ಮೀರ: ಸುಂದರ್‌ಬನಿ ಸೆಕ್ಟರ್‌ನ ಅಸಾನ್ ಬಳಿ ಸೇನಾ ಬೆಂಗಾವಲು ಪಡೆಯ ಮೇಲೆ ಉಗ್ರರು ಅ.28ರಂದು ಬೆಳಗ್ಗೆ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಶ್ವಾನ ಫ್ಯಾಂಟಮ್ ಪ್ರಾಣ ಕಳೆದುಕೊಂಡಿದೆ.

ಭಯೋತ್ಪಾದಕರ ಮೇಲೆ ಭಾರತೀಯ ಸೇನಾ ಪಡೆಗಳು ಗುಂಡಿನ ದಾಳಿ ನಡೆಸುತ್ತಿರುವಾಗ ಫ್ಯಾಂಟಮ್ ಶತ್ರುಗಳ ಗುಂಡಿನಿAದ ಗಾಯಗೊಂಡಿತ್ತು. ಮಾರಣಾಂತಿಕ ಗಾಯದಿಂದ ಬಳಲುತ್ತಿದ್ದ ಫ್ಯಾಂಟಮ್‌ಗೆ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಫ್ಯಾಂಟಮ್ ಕೊನೆಗೂ ಅಸುನೀಗಿದೆ.

ಫ್ಯಾಂಟಮ್ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನ. ಅದು 25 ಮೇ 2020 ರಂದು ಜನಿಸಿತ್ತು. ಉಗ್ರಗಾಮಿಗಳನ್ನು ಪತ್ತೆಹಚ್ಚುವ ಸಂದರ್ಭದ ಕಾರ್ಯಾಚರಣೆಯಲ್ಲಿ ಹುತಾತ್ಮವಾದ ಫ್ಯಾಂಟಮ್ ವಿಶೇಷ ಪ್ಯಾರಾ ಪಡೆಗಳ ಭಾಗವಾಗಿತ್ತು. ಅದರ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆಯನ್ನು ಭಾರತೀಯ ಸೇನೆ ಸ್ಮರಿಸಿ, ಹುತಾತ್ಮ ಶ್ವಾನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದೆ.

ಸುಮಾರು 5 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಒಬ್ಬ ಭಯೋತ್ಪಾದಕನ ದೇಹ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಗಳು ಪ್ರಗತಿಯಲ್ಲಿದೆ ಎಂದು ಸೇನಾ ವಕ್ತಾರರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

 

error: Content is protected !!